ವರ್ಗಾವಣೆ ಮಾಡಿರುವ ಬೆಸ್ಕಾಂ ಜೆಇ ಮಂಜುನಾಥ್ ಅವರನ್ನು ಮರು ನಿಯೋಜಿಸುವಂತೆ ರೈತರ ಒತ್ತಾಯ
ಮಾಗಡಿ (hairamanagara.in): ಸೋಲೂರು ಹೋಬಳಿ ಬೆಸ್ಕಾಂ ಜೆಇ ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿದ್ದು ಮರು ನಿಯೋಜಿಸುವಂತೆ ಅಗ್ರಹಿಸಿ ಹೋಬಳಿ ವ್ಯಾಪ್ತಿಯ ರೈತರು ಸೋಲೂರು ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಯುವ ಮುಖಂಡ ಎಸ್.ಸಿ.ಬಿ.ಎಸ್. ಮಂಜುನಾಥ್ ಮಾತನಾಡಿ, ತಾಲೂಕಿನ ಬಾಣವಾಡಿ ಗ್ರಾ.ಪಂ. ವ್ಯಾಪ್ತಿಯ ಶಿರಗನಹಳ್ಳಿ ಗ್ರಾಮದಲ್ಲಿ ಜ.5 ರಂದು ಟಿಸಿ ಅಳವಡಿಸುವ ವೇಳೆ ಕಾರ್ಮಿಕ ಹೊನ್ನರಾಜು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಇದಕ್ಕೆ ಜೆಇ ಜಿ.ಡಿ.ಮಂಜುನಾಥ್ ಅವರೆ ಕಾರಣ ಎಂದು ಮೃತರ ಸಂಬಂಧಿಕರು ಕುದೂರು ಪೊಲೀಸ್ ಠಾಣೆಯಲ್ಲಿ ದುರುದ್ದೇಶ ಪೂರಕವಾಗಿ ದೂರು ದಾಖಲಿಸಿ ಅವರ ವಿರುದ್ದ ಪ್ರಕರಣದಾಖಲಿಸಿರುವುದು ಸರಿಯಲ್ಲ. ಗುತ್ತಿಗೆ ಪಡೆದ ಗುತ್ತಿಗೆದಾರ ಬೆಸ್ಕಾಂ ನಿಯಾಮವಳಿಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಇರುವ ಕಾರಣ ಕಾರ್ಮಿಕ ಹೊನ್ನರಾಜು ಮೃತಪಟ್ಟಿದ್ದು ಅವರನ್ನು ನೇರಹೊಣೆ ಮಾಡದೆ ಬೆಸ್ಕಾಂ ಅಧಿಕಾರಿಗಳು
ಕೆಲ ಗುತ್ತಿಗೆದಾರರ ಜೊತೆ ಶಾಮೀಲಾಗಿ ಈ ಪ್ರಕರಣದ ಬಗ್ಗೆ ತಪ್ಪು ವರದಿಯನ್ನು ನೀಡಿರುವುದ ಸರಿಯಲ್ಲ ಎಂದು ಆರೋಪಿಸಿದರು.
ಸೋಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸ ಲೈನ್ ಎಳೆಯುವ ಕಾಮಗಾರಿಗೆ ಸಂಬಂಧಪಟ್ಟಂತೆ 2 ಲಕ್ಷ ದಷ್ಟು ಕಾಮಗಾರಿ ನಡೆಸಿ 8 ಲಕ್ಷರೂ ನಷ್ಟು ಬಿಲ್ಲುಗಳಿಗೆ ಸಹಿಹಾಕುವಂತೆ ಜೆಇ ಮಂಜುನಾಥ್ ಮೇಲೆ ಬೆಸ್ಕಾಂ ಗುತ್ತಿಗೆದಾರ ಕೆಇಬಿ ರಾಜಣ್ಣ ಒತ್ತಡ ಏರಿದ್ದು ಇದಕ್ಕೆ ಮಣಿಯದ ಮಂಜುನಾಥ್ ಸಹಿ ಹಾಕದ ಕಾರಣ ರಾಜಕೀಯ ಪ್ರಭಾವ ಬೆಳೆಸಿ ಇಂಥಹ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ನಿಷ್ಠಾವಂತ ಅಧಿಕಾರಿಗಳು ಕಾರ್ಯನಿರ್ವಹಿಸಲು ಭಯ ಬೀಳುತ್ತಿದ್ದಾರೆ, ತಾಲೂಕಿನಲ್ಲಿ ಗುತ್ತಿಗೆದಾರ ಕೆಇಬಿ ರಾಜಣ್ಣ ಸಾಕಷ್ಟು ಅಕ್ರಮ ನಡೆಸಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಇಂಧನ ಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಶಾಸಕ ಡಾ.ಶ್ರೀನಿವಾಸಮೂರ್ತಿ ಮಾತನಾಡಿ, ಬೆಸ್ಕಾಂ ಜೆಇ ಮಂಜುನಾಥ್ ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಬಗ್ಗೆ ಜನಾಭಿಪ್ರಾಯ ಪಡೆದಿದ್ದೇನೆ, ಕೆಲವರ ಶಡ್ಯಂತ್ರದಿಂದ ಜೆಇ ಮಂಜುನಾಥ್ ಅವರನ್ನು ಕನಕಪುರ ಅರಳಮಾವನಹಳ್ಳಿ ಬೆಸ್ಕಾಂ ಕಚೇರಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ ಈ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಇನ್ನೊಂದು ತಿಂಗಳ ಒಳಗೆ ಮೊದಲಿದ್ದ ಸ್ಥಳಕ್ಕೆ ಮರು ನಿಯೋಜಿಸಲಾಗುವುದು. ಕೆಲ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದೆ ಬಿಲ್ಲು ಪಡೆದಿರುವ ಬಗ್ಗೆ ಸಾಕಷ್ಟು ಉದಾಹರಣೆಗಳು ಇದ್ದು ಈ ಬಗ್ಗೆ ತನಿಖೆ ನಡೆಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಮಾಗಡಿ ಬೆಸ್ಕಾಂ ಇಇ ಮಂಜುನಾಥ್ ಮಾತನಾಡಿ ಶಿರಗನಹಳ್ಳಿ ಗ್ರಾಮದಲ್ಲಿ ಜ.5 ರಂದು ಟಿಸಿ ಅಳವಡಿಸುವ ವೇಳೆ ಕಾರ್ಮಿಕ ಹೊನ್ನರಾಜು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಬಗ್ಗೆ ಕೂಡಲೇ ತನಿಖೆ ನಡೆಸಿ ಹೋಬಳಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇನೆ.
ಜಿ.ಪಂ. ಮಾಜಿ ಸದಸ್ಯರಾದ ಎಸ್‍ಸಿಬಿಎಸ್ ಶಿವರುದ್ರಯ್ಯ, ನಾಜೀಯಾ ಖಾನಂ ಜವಹರ್, ತಾ.ಪಂ. ಮಾಜಿ ಸದಸ್ಯ ಸುಗುಣ ಕಾಮರಾಜು, ಮೃತ್ಯೂಂಜಯ, ಎಪಿಎಂಸಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ್, ಸದಸ್ಯ ಎಚ್.ಪಿ.ರಾಘವೇಂದ್ರ, ಗಂಗರಾಜು, ಮಾಜಿ ಅಧ್ಯಕ್ಷ ಚನ್ನಗಂಗಯ್ಯ ಇತರರು ಇದ್ದರು.