ಸಾಮಾಜಿಕ ಕಾರ್ಯಕರ್ತ ಕೆ.ರಾಜೀವ್ ಅವರ “ಅರಿವಿನ ದೀಪ ಹಾಡಿನ ಸಂಕಲನ” ಕಿರುಪುಸ್ತಕ ಬಿಡುಗಡೆ ಮಾಡಿದ ಗಣ್ಯರು

ನಗರಸಭೆ ಸವಲತ್ತು ಸದ್ಬಳಕೆ ಮಾಡಿಕೊಳ್ಳಲು ಸಲಹೆ

ರಾಮನಗರ (hairamanagara.in) : ರಸ್ತೆ ಬದಿ ವ್ಯಾಪಾರಿಗಳು, ಬೀದಿ ನಿರ್ಗತಿಕರಿಗಾಗಿ ನಗರಸಭೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಅರ್ಹ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಡುವೆ ನಿವೃತ್ತ ಜಂಟಿ ನಿರ್ದೇಶಕಿ ರೇವತಿ ವಿಜಯಕುಮಾರ್ ಅವರು ಕಿವಿಮಾತು ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಮನಗರ ನಗರಸಭೆ, ಜನಸೇವಾ ಫೌಂಡೇಷನ್, ಶಾರದಾಂಬೆ ಪ್ರದೇಶ ಮಟ್ಟದ ಒಕ್ಕೂಟ, ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನಸೇವಾ ಫೌಂಡೇಷನ್ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಕೆ.ರಾಜೀವ್ ಅವರು ಬರೆದಿರುವ “ಅರಿವಿನ ದೀಪ ಹಾಡಿನ ಸಂಕಲನ” ಕಿರುಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು ಹಾಗೂ ರಸ್ತೆ ಬದಿ ನಿರ್ಗತಿಕರಿಗಾಗಿ ನಗರಸಭೆ ಹಾಗೂ ಇನ್ನಿತರೆ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ತಮ್ಮ ಹಕ್ಕುಗಳನ್ನು ಚಲಾಯಿಸಲು ಶಕ್ತರಾಗುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಅರಿವಿನ ದೀಪ ಹಾಡಿನ ಸಂಕಲನ” ಹಾಡುಗಳು ಉಪಯುಕ್ತವಾಗಿದ್ದು, ಪ್ರತಿಯಿಬ್ಬರಿಗೂ ಈ ಸಂಕಲನ ‌ಒಂದು ಆಕರ ಗ್ರಂಥವಾಗಿದೆ ಎಂದು ರೇವತಿ ವಿಜಯಕುಮಾರ್ ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಸೇವಾ ಫೌಂಡೇಷನ್ ಅಧ್ಯಕ್ಷ ಡಿ. ನರೇಂದ್ರ ಮಾತನಾಡಿ ಸುಮಾರು ಮೂವತ್ತೈದು ವರ್ಷಗಳಿಂದ ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ, ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಆಪ್ತ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಜನಸೇವಾ ಫೌಂಡೇಷನ್ ನಿರ್ದೇಶಕರಾದ ಕೆ.ರಾಜೀವ್ ಅವರು ತಮ್ಮ ಧೀರ್ಘ ಕಾಲದ ಅನುಭವವನ್ನು ಅಕ್ಷರ ರೂಪದಲ್ಲಿ ಒಂದು ಸಂಗ್ರಹವಾಗಿ ಕಿರು ಪುಸ್ತಕವಾಗಿ ಲೋಕಾರ್ಪಣೆ ಮಾಡಿರುವುದು ಅಭಿನಂದನೆಗೆ ಅರ್ಹವಾಗಿದೆ. ಮುಂದಿನ ‌ದಿನಗಳಲ್ಲಿ ಜನಸೇವಾ ಫೌಂಡೇಷನ್ ವತಿಯಿಂದ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
“ಅರಿವಿನ ದೀಪ ಹಾಡಿನ ಸಂಕಲನ” ಕಿರುಪುಸ್ತಕ ಕರ್ತೃ ಕೆ. ರಾಜೀವ್ ಪ್ರಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಕಾರ್ಯಕರ್ತನಾಗಿ ನನ್ನ ಸುಧೀರ್ಘ ಕಾಲದ ಸೇವೆಯಲ್ಲಿ ಕಂಡುಂಡ ಅನುಭವ ಹಾಗೂ ಸೇವಾ ಕಾರ್ಯದಲ್ಲಿ ಅಳವಡಿಸಿಕೊಂಡಿದ್ದ ಸೃಜನಶೀಲ ಕೆಲಸಗಳಿಂದ ಹೊರಹೊಮ್ಮಿದ ಸಮಾಜದ ಕೆಲವು ಓರೆ-ಕೋರೆ, ನೋವು-ನಲಿವು, ಕಷ್ಟ- ಸುಖಗಳನ್ನು ‌ಅಕ್ಷರ ರೂಪದಲ್ಲಿ ಹೊರತರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸ ಬಯಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ವಿಶೇಷ ಉಪನ್ಯಾಸ ನೀಡಿ,ಬೀದಿ ಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಜೀವನೋಪಾಯ, ಸಾಮಾಜಿಕ ಭದ್ರತಾ ಯೋಜನೆ, ವಿವಿಧ ಇಲಾಖೆ ಹಾಗೂ ಬ್ಯಾಂಕ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವ ಸಾಲ ಸವಲತ್ತು, ವಯಕ್ತಿಕ ಸ್ವಚ್ಛತೆ ಹಾಗೂ ಕುಟುಂಬದ ಆರೋಗ್ಯ, ಬೀದಿ ಬದಿ ವ್ಯಾಪಾರಿಗಳ ಬಗೆಗಿನ ಕಾನೂನು-ಕಾಯ್ದೆಗಳ ಅರಿವು ಸೇರಿದಂತೆ ಮೂಲಭೂತ ವಿಚಾರಗಳನ್ನು ಆಪ್ತ ಸಂವಾದದ ಫಲಾನುಭವಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಲೇಖಕ ಕೆ.ರಾಜೀವ್ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಅವರನ್ನು ಪಟ್ಟಣ ಮಾರಾಟ ಸಮಿತಿ ವತಿಯಿಂದ ಮೈಸೂರು ಪೇಟ ತೊಡಿಸಿ, ಹಾರ-ತುರಾಯಿ, ಫಲ ತಾಂಬೂಲ ನೀಡಿ ಪ್ರೀತಿಯಿಂದ ಸನ್ಮಾನಿಸಲಾಯಿತು.
ಸಬಲ ಫೌಂಡೇಷನ್ ಕಾರ್ಯದರ್ಶಿ ಎನ್.ಎಸ್.ಸಿದ್ದರಾಜು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ,ನಗರಸಭೆ ಪೌರಾಯುಕ್ತ ನಂದಕುಮಾರ್, ನಗರಸಭೆ ವ್ಯವಸ್ಥಾಪಕ ಡಿ.ನಟರಾಜೇಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್,
ಸ್ಪ್ಯಾಡ್ ಸಂಸ್ಥೆ ಅಧ್ಯಕ್ಷ ಅಗಸ್ಟಿನ್ ಸಿ.ಕೌಂಡ್ಸ್, ಕಾರ್ಯದರ್ಶಿ ಬಿ.ವಿಜಯಕುಮಾರ್, ಬಿಡದಿ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ರಾಜೇಂದ್ರ ಹೆಗಡೆ,
ಬಾಷ್ ಫೌಂಡೇಷನ್ ಮುಖ್ಯಸ್ಥ ಪುಂಡಲೀಕ ಕಾಮತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ವಿ.ರಾಮನ್, ಎಸಿಡಿಪಿಒ ಗೀತಾ, ನಿವೃತ್ತ ಸಿಡಿಪಿಒಗಳಾದ ಪುಟ್ಟಸ್ವಾಮಿ, ರೇವಣೇಶ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಸಿ.ರಾಮಕೃಷ್ಣ, ನಗರಸಭೆಯ ಶಾರದಾಂಬೆ ಪ್ರದೇಶ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ರಂಗಸ್ವಾಮಿ, ಜನ ಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಎನ್.ಮೂರ್ತಿ,
ಜನಸೇವಾ ಫೌಂಡೇಷನ್ ಕಾರ್ಯದರ್ಶಿ ಚಿಕ್ಕಮಳೂರು ಚೇತನ್, ಖಜಾಂಚಿ ಕೆ.ಎಸ್.ಚೈತ್ರಾ ನರೇಂದ್ರ, ಮಡಿಲು ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಪುಷ್ಪಾಲತಾ, ಸರ್ವಸ್ವ ಗ್ರಾಮೀಣ ಟ್ರಸ್ಟ್ ನ ಎ.ಎಸ್‌.ಪ್ರೇಮಾ, ಚೈತನ್ಯ ಸಂಸ್ಥೆ ನಿರ್ದೇಶಕ ಶಿವಣ್ಣ, ಕಲ್ಯಾಣ್ ಜ್ಯೂವೆಲರ್ಸ್ ಮಹಮದ್ ಅಲಿ, ಕುಮಾರ್ ಟೀ ಸ್ಟಾಲ್ ನ ಕುಮಾರ್,
ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಬೈರಲಿಂಗಯ್ಯ, ಮಹದೇವಯ್ಯ, ಶ್ರೀನಿವಾಸ್, ಬಾಬು, ಯಲ್ಲಪ್ಪ, ಚಿಕ್ಕತಾಯಮ್ಮ, ವಿಜಯಮ್ಮ, ಹಿಂದುಳಿದ ವರ್ಗಗಳ ಮುಖಂಡ ಆರ್.ರಂಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *