11 ದಿನಗಳ ‘ಮೇಕೆದಾಟು ಪಾದಯಾತ್ರೆ’ 5 ನೇ ದಿನಕ್ಕೆ ಅಂತ್ಯ : ತಾತ್ಕಾಲಿಕವಾಗಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ : ಸಿದ್ದರಾಮಯ್ಯ
ರಾಮನಗರ (hairamangara.in) : ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿದ್ದ 11 ದಿನಗಳ ‘ಮೇಕೆದಾಟು ಪಾದಯಾತ್ರೆ’ 5ನೇ ದಿನಕ್ಕೆ ಅಂತ್ಯವಾಗಿದೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಗುರುವಾರ ಪಾದಯಾತ್ರೆ ಕೊನೆಯಾಯಿತು.
ತಾತ್ಕಾಲಿಕ ಸ್ಥಗಿತ : ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ ಕೊವೀಡ್-19 ಸೋಂಕಿನ ಮೂರನೆ ಅಲೆಯು ಹೆಚ್ಚಾಗುತ್ತಿರುವ ಕಾರಣದಿಂದ ‘ಮೇಕೆದಾಟು ಪಾದಯಾತ್ರೆ’ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಕೋವಿಡ್ ಮೂರನೇ ಅಲೆ ಕಡಿಮೆ ಆದ ನಂತರ ಮತ್ತೆ ರಾಮನಗರದಿಂದಲೆ ‘ಮೇಕೆದಾಟು ಪಾದಯಾತ್ರೆ’ಯನ್ನು ಮುಂದುವರಿಸುತ್ತೇವೆ. ಸರ್ಕಾರದ ಯಾವುದೇ ನೋಟಿಸ್ ಗೆ ನಾವು ಹೆದರಿಲ್ಲ, ಆದರೆ ಜನರ ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ತಿಳಿಸಿದರು.
ಇದನ್ನೂ ಓದಿ : ‘ಹಾಯ್ ರಾಮನಗರ’ ವೆಬ್ ಸೈಟ್ ಜ.12ರ ಬುಧವಾರದಂದೇ ‘ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ಮೊಟಕು?’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.
ನಮ್ಮ ನೀರಿನ ಹೋರಾಟಕ್ಕೆ ಬಿಜೆಪಿ ತಡೆ ಹಾಕಿತು ಎಂದು ಬಿಂಬಿಸಿದರೆ ಹೆಚ್ಚು ಲಾಭ :
ಹೈಕೋರ್ಟ್ ಶುಕ್ರವಾರ ಪಾದಯಾತ್ರೆ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಿದೆ. ಆ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ವಿಧಿಸಿದೆ. ನಾವು ಅದನ್ನು ಮೀರಿದರೆ ಕೋರ್ಟ್ ಅಸಮಾಧಾನ ಹೊರ ಹಾಕಿ ಕಟು ಪದಗಳಿಂದ ತರಾಟೆಗೆ ತೆಗೆದುಕೊಳ್ಳಬಹುದು. ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿತು ಎನ್ನಿಸಿಕೊಳ್ಳುವುದು ಒಂದು ರೀತಿಯ ಹಿನ್ನಡೆ ಆದಂತೆ. ಅದೇ ಸರ್ಕಾರ ಪಾದಯಾತ್ರೆ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಪಾದಯಾತ್ರೆ ಕೊನೆಯಾದರೆ ಪಕ್ಷಕ್ಕೆ ಇದರಿಂದ ಲಾಭ. ನಮ್ಮ ನೀರಿನ ಹೋರಾಟಕ್ಕೆ ಬಿಜೆಪಿ ತಡೆ ಹಾಕಿತು ಎಂದು ಬಿಂಬಿಸಿದರೆ ಲಾಭ ಹೆಚ್ಚು ಎಂದು ಗುರುವಾರ ಸಭೆಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ಸಲಹೆ, ಅಭಿಪ್ರಾಯ ಹೊರಹಾಕಿದರು ಎಂದು ತಿಳಿದುಬಂದಿದೆ.
ಜನತೆಗೆ ತಪ್ಪು ಸಂದೇಶ ಹೋಗಬಾರದು : ಗುರುವಾರ ಬೆಳಗ್ಗೆ ರಾಮನಗರದಿಂದ ಪಾದಯಾತ್ರೆ ಮುಂದುವರಿಯಬೇಕಿತ್ತು. ಕಲಾತಂಡಗಳ ಸುಮಾರು 300 ಕಲಾವಿದರು ರಾಮನಗರದಲ್ಲಿ ಕಾದು ಕುಳಿತಿದ್ದರು. ಆದರೆ ಹೈಕೋರ್ಟ್ ಆದೇಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದು ಮನವಿ ಮಾಡಿಕೊಂಡ ನಂತರ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂದು ಪಾದಯಾತ್ರೆ ಮೊಟಕುಗೊಳಿಸಲಾಯಿತು. ಕೊರೋನಾ ಕಡಿಮೆಯಾದ ನಂತರ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಬಗ್ಗೆ ಅಧಿಕೃತವಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.