ಇರುಳಿಗ ಸಮುದಾಯದ ಹಿರಿಯ ಮುಖಂಡ ಮಹದೇವಯ್ಯ ಅವರಿಗೆ ‘ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ’ ಪ್ರದಾನ
ರಾಮನಗರ (hairamanagara.in) : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದ ಬಳಿ ಇರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ವತಿಯಿಂದ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನದೊಡ್ಡಿ ಗ್ರಾಮದ ಇರುಳಿಗ ಸಮುದಾಯದ ಹಿರಿಯ ಮುಖಂಡ ಮಹದೇವಯ್ಯ ಅವರಿಗೆ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ‘ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಇರುಳಿಗ ಸಮುದಾಯದ ಹಿರಿಯ ಮುಖಂಡರಾದ ಮಹದೇವಯ್ಯ ಅವರು ಪಾರಂಪರಿಕ ನಾಟಿ ವೈದ್ಯರಾಗಿದ್ದಾರೆ. ಮೊದಲು ಸಂಮೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇವರು 1990ರಲ್ಲಿ ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನಲ್ಲಿ ಬುಡಕಟ್ಟು ಸಮುದಾಯಗಳ ಸಂಘಟನೆಯನ್ನು ಪ್ರಾರಂಭಿಸಿದರು. ಅಂದಿನಿಂದ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನಿವೇಶನ ರಹಿತರಿಗೆ ನಿವೇಶನ, ಮನೆ ಕೊಡಿಸುವಲ್ಲಿ, ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಮುಂದಾಳತ್ವ ವಹಿಸಿದ್ದಾರೆ. ಅರಣ್ಯ ಭೂಮಿಗಾಗಿ ಹೋರಾಟ ಪ್ರಾರಂಭಿಸಿದರು. ಪ್ರಸ್ತುತ ಇರುಳಿಗ ಅರಣ್ಯವಾಸಿ ಕ್ಷೇಮಾಭಿವೃದ್ಧಿ ಸಂಘದಲ್ಲಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಹೋರಾಟ ಪ್ರಾರಂಭಿಸಿ ಸುಮಾರು 45 ದಿನಗಳ ಕಾಲ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಆದಿವಾಸಿ ಜನ ಸೇವಾ ಸಂಘ, ಬರ್ಡ್ಸ್ ಸಂಸ್ಥೆ, ರೀಡ್ ಸೆಂಟರ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಬಾಡಲೊಲ್ಲದ ಕಾಡು ಕುಡಿಗಳು’ ಎಂಬ ಪುಸ್ತಕ ಹೊರತರಲು ಶ್ರಮಸಿದ್ದಾರೆ.
ಗಿರಿಜನ ಅಭಿವೃದ್ಧಿ, ಸಮಾಜ ಕಾರ್ಯಗಳಲ್ಲಿ ಸೇವೆ ಸಲ್ಲಿಸಿರುವ ಗಿರಿಜನ ಮುಖಂಡರಿಗೆ ನೀಡುವ ಸೇವಾ ಪ್ರಶಸ್ತಿಗೆ ಮಹದೇವಯ್ಯ (ಮೊ: 9686291701) ಭಾಜನರಾಗಿದ್ದಾರೆ.
ವರದಿ : ಕೃಷ್ಣಮೂರ್ತಿ ಇರುಳಿಗ
ಮೊ: 9538613503