ಕೊರೊನಾ ಮಹಾಸ್ಪೋಟಕ್ಕೆ ಕಾಂಗ್ರೆಸ್ ಪಕ್ಷದವರು ಕಾರಣರಾಗಿದ್ದಾರೆ : ನಂದಿನಿಗೌಡ ಆರೋಪ

ಕನಕಪುರ (hairamanagara.in) : ಕೋವಿಡ್‌ನ 3ನೇ ಅಲೆಯಲ್ಲಿ ಜನರ ಜೀವ ಕಾಪಾಡಿ ರೋಗವನ್ನು ತಡೆಗಟ್ಟುವುದನ್ನು ಬಿಟ್ಟು ಕಾಂಗ್ರೆಸ್‌ ಪಕ್ಷದವರು ಪಾದಯಾತ್ರೆ ನಡೆಸುವ ಮೂಲಕ ಕೊರೊನಾ ಮಹಾಸ್ಪೋಟಕ್ಕೆ ಕಾರಣವಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಆರೋಪಿಸಿದರು.
ಕನಕಪುರ ತಾಲ್ಲೂಕಿನಲ್ಲಿ ಕಳೆದ 4 ದಿನಗಳಿಂದ ನಡೆದ ಮೇಕೆದಾಟು ಪಾದಯಾತ್ರೆ ಮತ್ತು ಅದರಲ್ಲಿ ಸೇರುತ್ತಿರುವ ಸಾವಿರಾರು ಜನರನ್ನು ಕುರಿತು ಪತ್ರಿಕಾ ಹೇಳಿಕೆ ನೀಡಿ ಅವರು ಮಾತನಾಡಿದರು.
ಕೋವಿಡ್‌-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ತನ್ನ 2ನೇ ಅಲೆಯಲ್ಲಿ ಕೋಟ್ಯಾಂತರ ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಅದನ್ನು ಮನದಲ್ಲಿಟ್ಟುಕೊಂಡು ಇಡೀ ವಿಶ್ವ ಕೋವಿಡ್‌ ತಡೆಗೆ ಮುಂದಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಇಬ್ಬರೂ ಸೇರಿ ಕೋವಿಡ್‌ ತಡೆಗೆ ಹೋರಾಟ ನಡೆಸಬೇಕಿದೆ ಎಂದರು.
ಆದರೆ ಕಾಂಗ್ರೆಸ್‌ ಪಕ್ಷದವರು ರಾಜ್ಯ ಸರ್ಕಾರಕ್ಕೆ ಸಹಕಾರ ಕೊಡುತ್ತಿಲ್ಲ, ಅದರ ಬದಲು ಕೋವಿಡ್‌ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದೆ. ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಹರಿಸಿಕೊಂಡು ಅಣೆಕಟ್ಟೆ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.
ಮೇಕೆದಾಟು ಜಲಾಶಯ ಆಗಬೇಕೆಂಬುದು ರಾಜ್ಯದ ಜನತೆಯ ಅಭಿಲಾಷೆ, ಅದಕ್ಕಾಗಿ ಕಾಂಗ್ರೆಸ್ಸಿಗರು ಹೋರಾಟ ನಡೆಸುವುದಕ್ಕೆ ಮುಂದೆ ಸಮಯವಿದೆ. ಇಂದು ಹೋರಾಟದ ಸಂದರ್ಭವಲ್ಲ. ಕೋವಿಡ್‌ ತಡೆಗೆ ಬೇರೆ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಕೈಗೊಂಡಿರುವ ನಿಯಮಗಳನ್ನೇ ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಅದಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಬೇಕೆಂದರು.
ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರೇ ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರುವುದರಿಂದ ಕೊರೊನಾ ವೈರಸ್‌ ಹರಡುವುದಿಲ್ಲ, ಸೋಂಕು ಹೆಚ್ಚಾಗುವುದಿಲ್ಲ. ಪರಿಸರದಲ್ಲಿ ಸೋಂಕು ತನ್ನಿಂದ ತಾನೆ ಹೆಚ್ಚಾಗಿ ಹರಡುತ್ತಿದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇವರ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಏಕೆ ಕೋವಿಡ್‌ ನಿಯಮ ಜಾರಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ಸಿಗರಿಗೆ ಸುಮ್ಮನೆ ಕೂರಲು ಆಗುತ್ತಿಲ್ಲ. ಜನ ಗುಂಪು ಗೂಡುವುದರಿಂದ ಕೋವಿಡ್‌ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ, ಅವರಿಗೆ ಇದು ಗೊತ್ತಿದ್ದರೂ ಉದ್ದೇಶ ಪೂರ್ವಕವಾಗಿಯೇ ಕೋವಿಡ್‌ ಹರಡಲು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಜಿಲ್ಲೆಯಲ್ಲಿ ಕೋವಿಡ್‌ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್‌ ಪಕ್ಷದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರೇ ನೇರ ಕಾರಣರಾಗುತ್ತಾರೆ. ಜನತೆಯ ಜೀವದ ಜತೆ ಚೆಲ್ಲಾಟ ಆಟವಾಡುವುದು ಸರಿಯಲ್ಲ, ಜಿಲ್ಲೆಯ ಜನತೆ ಎಂದಿಗೂ ಇವರನ್ನು ಕ್ಷಮಿಸುವುದಿಲ್ಲ, ಮುಂದೆ ಇದಕ್ಕೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *