ಚನ್ನಪಟ್ಟಣ : ತಾಯಿ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗ!

ಚನ್ನಪಟ್ಟಣ (hairamanaagara.in) : ತನ್ನ ತಾಯಿಯು ಮರಣ ಹೊಂದಿದ ಸುದ್ದಿ ತಿಳಿದು ಮನನೊಂದು ಮಗನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಈಚೆಗೆ ನಡೆದಿದ್ದು, ತಡವಾಗಿ ವರದಿಯಾಗಿದೆ.
ಸೋಮಶೇಖರ್ (ಪವನ್) (23) ಆತ್ಮಹತ್ಯೆಗೆ ಶರಣಾದವರು. ಇವರ ತಾಯಿ ಸರೋಜ (44) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜ.6 ಗುರುವಾರದಂದು ಕೊನೆಯುಸಿರೆಳೆದಿದ್ದಾರೆ.
ಈ ವಿಷಯವನ್ನು ತಮ್ಮ ತಂದೆ ವಿ.ವೆಂಕಟೇಶ್ ರಿಂದ ತಿಳಿದ ಮಗ ಸೋಮಶೇಖರ್ ತಮ್ಮ ತಾಯಿಯ ಸಾವಿನ ನೋವನ್ನು ತಡೆದುಕೊಳ್ಳಲಾಗದೆ ಮನೆಯಲ್ಲಿಯೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುತತಿದ್ದರು ಎಂದು ತಿಳಿದುಬಂದಿದೆ. ತಾಯಿಯ ಸಾವಿನ ಸುದ್ದಿ ಜೀರ್ಣ ಮಾಡಿಕೊಳ್ಳುವ ಮೊದಲೆ ಅವರ ಮಗನ ಸಾವಿನ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಬಂದೆರಗಿದೆ.
ವೆಂಕಟೇಶ್ ಮಳೂರು ಬಳಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದ್ದು, ತಾಯಿ ಹಾಗೂ ಮಗನ ಮೃತದೇಹಗಳನ್ನು ನಗರದ ಸ್ಮಶಾನದಲ್ಲಿ ಜ.7 ರ ಶುಕ್ರವಾರದಂದು ಒಟ್ಟಿಗೆ ಸಂಸ್ಕಾರ ಮಾಡಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *