ಸಂಕ್ರಾತಿ : ಎಳ್ಳು ಬೆಲ್ಲ ಕಬ್ಬಿನ ಜಲ್ಲೆ, ಗೆಣಸು, ರಾಸುಗಳನ್ನು ಅಲಂಕರಿಸುವ ವಸ್ತುಗಳ ವ್ಯಾಪಾರ ಸಾಧಾರಣ
ರಾಮನಗರ (hairamangara.in) : ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ವಿವಿಧೆಡೆಗಳಲ್ಲಿ ಎಳ್ಳು, ಬೆಲ್ಲ, ಕಬ್ಬಿನ ಜಲ್ಲೆ, ಗೆಣಸಿನ ವ್ಯಾಪಾರ ಸಾಧಾರಣವಾಗಿ ನಡೆಯುತ್ತಿದೆ.
ಶುಕ್ರವಾರ ಮುಂಜಾನೆಯಿಂದಲೇ ಗ್ರಾಹಕರು ಎಪಿಎಂಸಿ ಮಾರುಕಟ್ಟೆ, ಹಳೆ ಬಸ್ ನಿಲ್ದಾಣ ಸೇರಿದಂತೆ ನಗರದ ಇನ್ನಿತರ ಪ್ರಮುಖ ರಸ್ತೆ ಬದಿಗಳಲ್ಲಿ ಕಬ್ಬಿನ ಜಲ್ಲೆ, ಕಡಲೆಕಾಯಿ, ಅವರೆಕಾಯಿ, ಹೂ ವ್ಯಾಪಾರ ನಡೆಯುತ್ತಿದೆ.

ಎಳ್ಳು ಬೆಲ್ಲ ಸೇರಿದಂತೆ ಇನ್ನಿತರೆ ಪದಾರ್ಥಗಳ ಬೆಲೆ ಹೆಚ್ಚಾಗಿರುವುದಕ್ಕೆ ಗ್ರಾಹಕರು ಅಸಮಾಧಾನಗೊಂಡು ಕೊಂಡುಕೊಳ್ಳುತ್ತಿದ್ದರು. ರೈತರು ತಮಗೆ ರಾಸುಗಳನ್ನು ಸಿಂಗರಿಸಲು ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದ ಸಾಮಾನ್ಯವಾಗಿತ್ತು.

ನಾವು ಕಳೆದ ಹತ್ತು ವರ್ಷಗಳಿಂದ ಹಸುಗಳನ್ನು ಸಿಂಗರಿಸುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಮೂಗಿನ ದಾರ, ಹಗ್ಗ, ಪೀಪಿ, ಕರಿಹುರಿ, ಕತ್ತಿನ ಹುರಿ, ಪ್ಲಾಸ್ಟಿಕ್ ಹಾರಗಳು, ಕತ್ತಿನ ಗಂಟೆ, ಕುಚ್ಚು, ಕಳಸ, ನೀಲಿ, ಹಸಿವಿನ ಹಗ್ಗ, ಕತ್ತಿನ ಹುರಿ ಇವುಗಳನ್ನು ಕೊಂಡುಕೊಳ್ಳುವವರು ಕಡಿಮೆಯಾಗುತ್ತಿದ್ದಾರೆ. ಮೊದಲಾದರೆ ಸಂಕ್ರಾಂತಿ ಹಬ್ಬ ವಾರವಿರುವಾಗಲೆ ಇವುಗಳನ್ನೆಲ್ಲಾ ರೈತರು ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಹಬ್ಬ ನಾಳೆ ಇದ್ದರೂ ಇನ್ನು ವ್ಯಾಪಾರ ನಡೆಯುತ್ತಿಲ್ಲ’ ಎಂದು ವಿನಯ್ ‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ಗೆ ತಿಳಿಸಿದರು.

‘ಹಸಿವಿನ ಹಗ್ಗ, ಕರಿಹುರಿ, ಚಿಲಕಗಳನ್ನು ನಾವೇ ತಯಾರು ಮಾಡುತ್ತೇವೆ. ಚಾಮರಾಜನಗರ ಜಿಲ್ಲೆಯವರಾದ ಪ್ರತಿ ವರ್ಷವೂ ರಾಮನಗರದಲ್ಲಿ ಇವುಗಳನ್ನು ಮಾರಾಟ ಮಾಡುತ್ತೇವೆ. ಆದರೆ ಕಳೆದ ವರ್ಷದಿಂದ ವ್ಯಾಪಾರ ಸರಿಯಾಗಿ ಆಗುತ್ತಿಲ್ಲ. ನಾಟಿಹಸುಗಳ ಸಂತತಿ ಕಡಿಮೆಯಾಗುತ್ತಿರುವುದರಿಂದ ನಮಗೆ ವ್ಯಾಪಾರ ಕಡಿಮೆಯಾಗಿದೆ’ ಎಂದು ವಡ್ಡರಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
‘ಹಬ್ಬಹರಿದಿನಗಳು ಬಂದೊಡನೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಮೊದಲಾದರೆ ಎಳ್ಳು, ಬೆಲ್ಲದ ಅಚ್ಚು, ಒಂದು ತುಂಡು ಕಬ್ಬನ್ನು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳು ಬೀರುತ್ತಾರೆ. ಮೊದಲಾದರೆ ಎಳ್ಳು, ಬೆಲ್ಲ ಇನ್ನಿತರ ವಸ್ತುಗಳನ್ನು ನಾವೆ ಮನೆಯಲ್ಲಿ ಸಿದ್ದಪಡಿಸಿಕೊಳ್ಳುತ್ತಿದ್ದೇವು. ಆದರೆ ಇಂದು ಇವೆಲ್ಲಾ ರೆಡಿಮೇಡ್ ಪ್ಯಾಕೇಟ್ ಗಳಲ್ಲಿ ದೊರೆಯುತ್ತಿವೆ’ ಎಂದು ಗ್ರಾಹಕಿ ಕಾವ್ಯಕುಮಾರ್ ತಿಳಿಸಿದರು.

‘ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬವೆಂದೇ ಪ್ರತೀತಿ. ಗ್ರಾಮೀಣ ಭಾಗಗಳಲ್ಲಿ ಬೆಳೆಗಳು ಕಟಾವು ಆದ ನಂತರ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ನಂತರ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ನಾಳೆಗೆ ಧನುಮರ್ಾಸ ಕೊನೆಯಾಗಲಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಹೆಣ್ಣು ಮಕ್ಕಳು ಸ್ನಾನ ಮಡಿಗಳಿಂದ ದೇವರನ್ನು ಪೂಜಿಸಿ ನಂತರ ಮನೆಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬಿನ ಜಲ್ಲೆ ಹಂಚುವ ಪದ್ಧತಿ ಇಂದಿಗೂ ಇದೆ’ ಎಂದು ಗೃಹಿಣಿ ಜಿ. ಉಮಾಮಹೇಶ್ವರಿ ತಿಳಿಸಿದರು.