“ಕುರುಕ್ಷೇತ್ರ” ಅಥವಾ “ಧರ್ಮರಾಜ್ಯ ಸ್ಥಾಪನೆ” ಪೌರಾಣಿಕ ನಾಟಕ ಪ್ರದರ್ಶನ
ರಾಮನಗರ (hairamanagara.in) : ಕಲೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ನಿರಂತರ ಪರಿಶ್ರಮ ಸತತ ಅಭ್ಯಾಸ ಕಲಿಕೆಯಿಂದ ಸಾಧನೆ ಮಾಡಬಹುದು. ಕಲೆ ರಕ್ತಗತವಾದುದಲ್ಲ, ಕಲಿಕೆಯಿಂದ ಸಾಧಿಸುವುದು ಎಂದು ಬಿಳಗುಂಬ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಪಣ್ಣ ನುಡಿದರು.
ಜೈಭೀಮ್ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಹಯೋಗದೊಂದಿಗೆ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಆಯೋಜಿಸಿದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಕಲಾವಿದರು ಪ್ರತಿಯೊಂದು ಗ್ರಾಮದಲ್ಲಿ ಇದ್ದಾರೆ. ಊರಿನ ಹಬ್ಬದ ಸಂದರ್ಭದಲ್ಲಿ ಪ್ರದರ್ಶನ ಮಾಡಲು ಸುಮಾರು 6 ತಿಂಗಳುಗಳ ಕಾಲ ಅಭ್ಯಾಸ ಮಾಡಿ ಸಂಕ್ರಾಂತಿ, ಗಣೇಶನ ಹಬ್ಬ, ಯುಗಾದಿ ಇನ್ನಿತರೇ ಹಬ್ಬಗಳ ಸಂದರ್ಭದಲ್ಲಿ, ರೈತರ ಹೊಲ ಕೆಲಸಗಳ ಬಿಡುವಿನ ಕಾಲದಲ್ಲಿ ಪ್ರದರ್ಶಿಸುತ್ತಿದ್ದರು, ಆದರೆ ಇತ್ತಿಚೇಗೆ ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ಕಡಿಮೆಯಾಗುತ್ತಿದೆ ಎಂದರು. ರಾಮಾಯಣ, ಮಹಾಭಾರತ ಪುರಾಣ ಕಾವ್ಯಗಳನ್ನು ನಾಟಕ ರೂಪಾಂತರ ಮಾಡಿ, ಅವರ ಆದರ್ಶ,ಸತ್ಯಸಂಧತೆ ಕೊಟ್ಟ ಮಾತಿಗೆ ತಪ್ಪದೆ ನಡೆಯುವಂತಹುದು, ಇಂತಹ ಅದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದ್ದರು ಎಂದರು.
ಗ್ರಾಮ ಪಂಚಾಯತಿ ಸದಸ್ಯ ವೆಂಕಟಸ್ವಾಮಿ ಮಾತನಾಡಿ, ಸರ್ಕಾರ ಜನಪದ ಕಲೆ, ಕಲಾವಿದರಿಗೆ ನೀಡುವ ಪ್ರೋತ್ಸಾಹವನ್ನು ರಂಗಭೂಮಿ ಕಲಾವಿದರಿಗೆ ನೀಡಬೇಕು ಐತಿಹಾಸಿಕ ವ್ಯಕ್ತಿಗಳನ್ನು ಕುರಿತಾಗಿರುವ ಸಾಮಾಜಿಕ ನಾಟಕ ಪ್ರದರ್ಶನಗಳು ಇಲ್ಲವಾಗುತ್ತಿದ್ದು, ಪೌರಾಣಿಕ ನಾಟಕಗಳು ನಗರಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಕೀಲರಾದ ಕಾಂತರಾಜು ಮಾತನಾಡಿ, ಜಾಗತೀಕರಣ ರಾಜಕೀಕರಣದಿಂದಾಗಿ ಗ್ರಾಮಗಳ ಒಗ್ಗಟ್ಟು ಮುರಿದಿದ್ದು, ಮನಸ್ಸುಗಳು ಛಿದ್ರವಾಗಿ ಗ್ರಾಮದಲ್ಲಿ ಹಿಂದೆ ನಡೆಯುತ್ತಿದ್ದ ಹಬ್ಬ ಹರಿ ದಿನಗಳು ಇಲ್ಲವಾಗಿವೆ. ಕೊರೋನಾದಿಂದಾಗಿ ಕಲಾವಿದರ ಬದುಕು ಅತಂತ್ರವಾಗಿದೆ. ಎಷ್ಟೋ ಜನ ಕಲಾವಿದರು ಜೀವ ಕಳೆದುಕೊಂಡಿದ್ದಾರೆ ಹಾಗಾಗಿ ಎಲ್ಲರೂ ಜಾಗೃತರಾಗಬೇಕು ಎಂದರು.
ಬಿಳಗುಂಬ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆಂಪೇಗೌಡ, ಯಜಮಾನ್ ಪುಟ್ಟಸ್ವಾಮಿ, ಪೂಜಾರಿ ಕಾಳಪ್ಪ, ಮೇಸ್ತ್ರಿ ರಾಮಯ್ಯ, ತಿಮ್ಮಯ್ಯ, ಮುನಿವೆಂಕಟಯ್ಯ ಉಪಸ್ಥಿತರಿದ್ದರು.