ರೀಲರ್ ಗಳು ರೈತರೊಂದಿಗೆ ಸೌಹಾರ್ದದಿಂದ ವರ್ತಿಸಬೇಕು : ಕೆ. ರವಿ
ರಾಮನಗರ (hairamanagara.in) : ರಾಮನಗರ ರೇಷ್ಮೆಗೂಡು ಮಾರುಕಟ್ಟೆಯು ದೇಶದ ದೊಡ್ಡ ಗೂಡು ಮಾರುಕಟ್ಟೆಯಾಗಿದೆ. ಇಲ್ಲಿಗೆ ನಿತ್ಯ 400–500 ಬೆಳೆಗಾರರು ಹಾಗೂ 600–800 ರೀಲರ್ಗಳು ಬರುತ್ತಾರೆ. ಬೆಳಿಗ್ಗೆ ಕೇವಲ ಒಂದು ಗಂಟೆ ಅವಧಿಯಲ್ಲಿಯೇ ಹರಾಜು ಮತ್ತು ದರ ಅಂಗೀಕಾರ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ರೀಲರ್ಗಳು ರೈತರೊಂದಿಗೆ ಸಹಕರಿಸಿ ಸೌಹಾರ್ದದಿಂದ ವರ್ತಿಸುವುದು ಅಗತ್ಯವಾಗಿದೆ ಎಂದು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ. ರವಿ ತಿಳಿಸಿದರು.
ರಾಮನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ನೋಡಿಕೊಳ್ಳಲೆಂದೇ ರೈತರನ್ನು ಒಳಗೊಂಡ ಸಲಹಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ತಿಳಿಸಿದರು.
ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ ರಾಮನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತನ ಮೇಲೆ ಹಲ್ಲೆ ಯತ್ನ ನಡೆದಿದ್ದು ದುರದೃಷ್ಟಕರ. ಈಗಾಗಲೇ ತಪ್ಪಿತಸ್ಥ ರೀಲರ್ ಮೇಲೆ ಕ್ರಮ ಕೈಗೊಂಡಿದ್ದು, ಮಾರಾಟ ವ್ಯವಸ್ಥೆ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಮಿತಿ ಸದಸ್ಯರು ಸಭೆ ಸೇರಿ ಸಂಬಂಧಿಸಿದ ರೀಲರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆವು. ಅದರಂತೆ ಈಗಾಗಲೇ ಅಧಿಕಾರಿಗಳು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ರೀಲರ್ನ ಪಾಸ್ವರ್ಡ್ ಬ್ಲಾಕ್ ಮಾಡಿದ್ದು, ಅವರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಂಡಿದ್ದಾರೆ. ರೈತರು ಹಾಗೂ ರೀಲರ್ಗಳು ಸುಗಮವಾಗಿ ವಹಿವಾಟು ನಡೆಸುವಂತೆ ಸದ್ಯ ಮಾರುಕಟ್ಟೆಯಲ್ಲಿ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.