ಜನರ ಒಡನಾಡಿ ಡಿ.ಟಿ. ರಾಮು

ಲೇಖನ : ಡಾ. ಭಗತ್ ರಾಮ್ ಡಿ.ಆರ್.

ಡಿ.ಟಿ. ರಾಮು ಈ ಹೆಸರು ಕೇಳಿದೊಡನೆ ಇಂದಿಗೂ ಹಳೇ ಮೈಸೂರು ಪ್ರಾಂತ್ಯದ ಜನರಿಗೆ ಏನೋ ಒಂದು ಸೆಳೆತ, ಪ್ರೀತಿ, ಅಭಿಮಾನ. ಸದಾ ಹಸನ್ಮುಖಿ, ಸುಂದರ ಎತ್ತರದ ನಿಲುವು, ಶುಭ್ರ, ಶ್ವೇತ ವರ್ಣದ ಜುಬ್ಬ, ಪಂಚೆ ಅದಕ್ಕೆ ಭೂಷಣವಿಟ್ಟಂತೆ ಹೆಗಲ ಮೇಲೆ ಒಂದು ಉಲ್ಲನ್ ಶಾಲು ಎಂಥವರು ಅವರನ್ನು ನೋಡಿದೊಡನೆ ಎದ್ದು ಗೌರವಿಸುವಂತಹ ವ್ಯಕ್ತಿ ಮತ್ತು ವ್ಯಕ್ತಿತ್ವ.
ಇಷ್ಟಕ್ಕೂ ಡಿ.ಟಿ. ರಾಮುರವರು ಹಲವಾರು ಬಾರಿ ಶಾಸಕರಾಗಿದ್ದವರೂ ಅಲ್ಲ. ಆದರೂ ತಮಗೆ ಸಿಕ್ಕಿದ್ದ ಒಂದು ಸಂಪೂರ್ಣ ಅವಧಿಯ ಶಾಸಕತ್ವದಲ್ಲಿಯೇ ಅವರು ಕೈಗೊಂಡ ಕೆಲಸಗಳಿಂದಾಗಿ ಚನ್ನಪಟ್ಟಣದ ಶಾಸಕರಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ಅವರ ಪಾರದರ್ಶಕ ಮತ್ತು ನಿಷ್ಕಲ್ಮಷ ರಾಜಕಾರಣ.
ಶ್ರೀಯುತ ಡಿ.ಟಿ. ರಾಮುರವರು ದಿನಾಂಕ 07-11-1937 ರಲ್ಲಿ ಶ್ರೀ ತಣ್ಣೀರಯ್ಯ ಮತ್ತು ಶ್ರೀಮತಿ ಈರಮ್ಮನವರ 8 ಜನ ಮಕ್ಕಳಲ್ಲಿ ನಾಲ್ಕನೇ ಮಗನಾಗಿ, ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ದೇವರಹಳ್ಳಿ ಗ್ರಾಮದಲ್ಲಿ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದರು.

ತಂದೆ ದಿ. ತಣ್ಣೀರಯ್ಯನವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದವರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು. ತಣ್ಣೀರಯ್ಯನವರು ಆಗಿನ ಕಾಲದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ದೇವರಹಳ್ಳಿಯಿಂದ ಸಿಂಗರಾಜಪುರದಲ್ಲಿ ಇದ್ದ ಶಾಲೆಗೆ ಸೈಕಲ್ ಅಥವಾ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು.
ಒಡಹುಟ್ಟಿದವರಲ್ಲಿ ಮೊದನೆಯ ಮಗ ಸ್ವಾತಂತ್ರ್ಯ ಚಳುವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವರು. ಎರಡನೆಯವರು ಶಾರದ ಎಂಬ ಸಹೋದರಿ, ಮೂರನೆಯವರು ಡಿ.ಟಿ.ಕೃಷ್ಣ, ದೇವರಹಳ್ಳಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ನಾಲ್ಕನೆಯವರು ಶ್ರೀಯುತ. ಡಿ.ಟಿ. ರಾಮುರವರು. ಐದನೆಯವರು ಶ್ರೀ ಡಿ.ಟಿ. ಪುಟ್ಟಸ್ವಾಮಿ, ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದವರು. ಆರನೆಯವರು ಶ್ರೀ. ಡಿ.ಟಿ. ನಾಗರಾಜುರವರು ಸಣ್ಣ ಕರಕುಶಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಏಳನೆಯ ಮತ್ತು ಎಂಟನೆಯವರು ಅವಳಿ ಜವಳಿಗಳು. ಅವರೇ ಮಾಜಿ ಮಂತ್ರಿ ಶ್ರೀ ಡಿ.ಟಿ. ಜಯಕುಮಾರ್ ಮತ್ತು ವಿಜಯಾ ಬ್ಯಾಂಕ್ ಅಧಿಕಾರಿಯಾಗಿದ್ದ ಶ್ರೀ ಡಿ.ಟಿ. ವಿಜಯ್ ಕುಮಾರ್.

ಬಾಲ್ಯ ಮತ್ತು ವಿದ್ಯಾಭ್ಯಾಸ
ಶ್ರೀ ಡಿ.ಟಿ. ರಾಮುರವರು ತಮ್ಮ ಬಾಲ್ಯದ ದಿನಗಳಲ್ಲಿ ದೇವರಹಳ್ಳಿಯ ಸುಂದರವಾದ ಪ್ರಕೃತಿಯ ವಾತಾವರಣದಲ್ಲಿ ಸ್ವಾತಂತ್ರ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿದ್ದರಿಂದ ಸಹಜವಾಗಿಯೇ ಸಮಾಜ ಸೇವೆಗಾಗಿ ಅವರ ಮನ ತುಡಿಯುತ್ತಿತ್ತು. ಪ್ರಾಥಮಿಕ ಶಿಕ್ಷಣವನ್ನು ಶೆಟ್ಟಿಹಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪೂರೈಸಿದರು. ನಂತರ ಚನ್ನಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಂದುವರಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಅಲ್ಲಿ ಬಿ.ಎಸ್‍ಸಿ. ಪದವಿ ಪೂರೈಸಿದರು ಮತ್ತು ಕಾನೂನು ಅಧ್ಯಯನ ನಡೆಸಿದರು.ಆಗಿನ ಕಾಲದಲ್ಲಿ ಪದವಿ ಗಳಿಸಿದೊಡನೆ ಸುಲಭವಾಗಿ ಉತ್ತಮ ಕೆಲಸಗಳು ಹುಡುಕಿಕೊಂಡು ಬರುತ್ತಿದ್ದವು. ಅಂತೆಯೇ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಎಂಬ ಉನ್ನತ ಹುದ್ದೆ ತಾನಾಗಿಯೇ ಹುಡುಕಿಕೊಂಡು ಬಂದಿತ್ತು.

ಆದರೆ ಸಮಾಜಮುಖಿ ಡಿ.ಟಿ. ರಾಮುರವರಿಗೆ ಇದಾವುದೂ ಬೇಕಿರಲಿಲ್ಲ. ಆ ಹುದ್ದೆಯನ್ನು ಪಡೆದುಕೊಳ್ಳುವ ಗೊಡವೆಗೆ ಹೋಗಲೇ ಇಲ್ಲ. ಅದೇ ಅವರ ಬದುಕಿನ ಒಂದು ಮಹತ್ವದ ತಿರುವು.
ಆಗಲೇ ಅವರು ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ ಕ್ಷೇತ್ರ. ಸ್ವತ: ಶಿಕ್ಷಕರ ಮಗನಾಗಿ ತಂದೆಯವರಂತೇ ತಾವೂ ಸಹ ಆದರ್ಶ ಶಿಕ್ಷಕನಾಗಬೇಕೆಂಬ ಹಂಬಲದಿಂದ ಬಡ ವಿದ್ಯಾರ್ಥಿಗಳಿಗಾಗಿ, ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಮದ್ದೂರು ಮತ್ತು ಮಂಡ್ಯದಲ್ಲಿ ಟ್ಯುಟೋರಿಯಲ್ಸ್ ಗಳನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಮಳವಳ್ಳಿ ಮತ್ತು ಚನ್ನಪಟ್ಟಣಗಳಲ್ಲಿಯೂ ಹಂತ ಹಂತವಾಗಿ ಟ್ಯುಟೋರಿಯಲ್ಸ್‍ಗಳನ್ನು ಪ್ರಾರಂಭಿಸಿದರು.
ಅವುಗಳು ಯಾವ ರೀತಿ ಜನಪ್ರಿಯತೆ ಗಳಿಸಿದವೆಂದರೆ ಡಿ.ಟಿ. ರಾಮುರವರ ಟ್ಯುಟೋರಿಯಲ್‍ಗೆ ಮಕ್ಕಳನ್ನು ಸೇರಿಸಿದರೆ, ಆಗಿನ ಕಾಲದ ವಿದ್ಯಾಭ್ಯಾಸದ ಮಹತ್ತರ ಘಟ್ಟ ಎಸ್.ಎಸ್.ಎಲ್.ಸಿ. ಯನ್ನು ಖಚಿತವಾಗಿ ಉತ್ತೀರ್ಣರಾಗುತ್ತಾರೆ ಎಂಬ ಭರವಸೆ ಮತ್ತು ನಂಬಿಕೆ ಪೋಷಕರಲ್ಲಿ ಇತ್ತು. ಇದು ಅತಿಶಯೋಕ್ತಿಯೇನೂ ಅಲ್ಲ. ಡಿ.ಟಿ. ರಾಮುರವರು ಸೀಮೆಸುಣ್ಣ ಹಿಡಿದು ಕಪ್ಪುಹಲಗೆಯ ಮುಂದೆ ಪಾಠ ಮಾಡಲು ನಿಂತರೆ ಎಂಥಹ ದಡ್ಡನಿಗೂ ಕಠಿಣವಾದ ವಿಷಯಗಳು ಸುಲಭವಾಗಿ ಅರ್ಥವಾಗುತ್ತಿದ್ದವು. ಆ ಕಂಚಿನ ಕಂಠದಲ್ಲಿ ಸೊಗಸಾಗಿ ದೊಡ್ಡ ಧ್ವನಿಯಲ್ಲಿ ಕಿಕ್ಕಿರಿದ ಕೊಠಡಿಯಲ್ಲಿ ಪಾಠ ನಡೆಯುತ್ತಿದ್ದರೆ, ಎಷ್ಟೋ ಹುಡುಗರು ಕೊಠಡಿಯ ಆಚೆಯೂ ಕುಳಿತು ಪಾಠ ಕೇಳುತ್ತಿದ್ದರು.
ಈ ನಾಲ್ಕೂ ಕಡೆಗಳಲ್ಲಿ ಪಾಠ ಮಾಡಲು ಬಹುಶ: ಆ ಕಾಲದಲ್ಲಿ ಅತ್ಯಂತ ವಿರಳವಾಗಿ ಉಪಯೋಗಿಸುತ್ತಿದ್ದಂತಹ ಅಂದಿನ ಯುವಕರ ಕನಸಿನ ದ್ವಿಚಕ್ರ ವಾಹನ ಜಾವಾ ಬೈಕಿನಲ್ಲಿ ಆ ನಾಲ್ಕೂ ಊರುಗಳಲ್ಲಿ ಪಾಠ ಮಾಡಲು ಸುತ್ತಾಡುತ್ತಿದ್ದರು. ಕ್ರಮೇಣವಾಗಿ ಅವರ ಜನಪ್ರಿಯತೆ ಉತ್ತುಂಗಕ್ಕೇರಲು ತೊಡಗಿ ಜನಸಂಪರ್ಕ ಹಾಗೂ ಜನನಾಯಕರುಗಳ ಸಂಪರ್ಕವೂ ಹೆಚ್ಚಾಗಿ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಪ್ರಜಾ ಸೋಷಿಯಲಿಸ್ಟ್ (ಪಿ.ಎಸ್.ಪಿ.) ಪಾರ್ಟಿ ಮುಖಾಂತರ ರಾಜಕೀಯ ಪ್ರವೇಶವೂ ಆಯಿತು.

ರಾಜಕೀಯ ರಂಗ
ಹೀಗೆ ಪಿ.ಎಸ್.ಪಿ. ಪಾರ್ಟಿಯ ಮುಖಾಂತರ ರಾಜಕೀಯ ಪ್ರವೇಶ ಮಾಡಿ ಆ ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷರೂ ಆದರು.
ನಂತರ ಕನಕಪುರ ಗಾಂಧಿಯೆಂದೇ ಖ್ಯಾತಿವೆತ್ತ ದಿ. ಕರಿಯಪ್ಪನವರ ಶಿಷ್ಯರಾಗಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ಕರಿಯಪ್ಪನವರ ಅತ್ಯಂತ ಪ್ರೀತಿಯ ಶಿಷ್ಯರಾಗಿ ರಾಜಕೀಯ ನಡೆ ಪ್ರಾರಂಭಿಸಿದರು. ಬದುಕಿನ ಉದ್ದಕ್ಕೂ ಡಿ.ಟಿ.ರಾಮುರವರು ಕರಿಯಪ್ಪನವರನ್ನು ಸದಾ ಸ್ಮರಿಸುತ್ತಿದ್ದರು. ಹಾಗೆಯೇ ಅವರು ಕಾಲವಾದ ನಂತರವೂ ಕನಕಪುರಕ್ಕೆ ಹೋದಾಗಲೆಲ್ಲ ಅವರ ಸಮಾಧಿ ಬಳಿ ತೆರಳಿ ಪುಷ್ಪಗುಚ್ಛವಿರಿಸಿ ಗೌರವಿಸುತ್ತಿದ್ದರು.
ಹೀಗೆ ಎಲ್ಲಾ ನಾಲ್ಕೂ ಊರುಗಳಲ್ಲಿ ಅತ್ಯಂತ ಜನಪ್ರಿಯ ಶಿಕ್ಷಕರಾಗಿ ಹೊರಹೊಮ್ಮುತ್ತಿರುವಾಗ ಚನ್ನಪ್ಟಣದ ರಾಜಕಾರಣ ಅವರನ್ನು ಕೈಬೀಸಿ ಕರೆಯುತ್ತಿತ್ತು.
ಚನ್ನಪಟ್ಟಣದ ಎಲ್ಲಾ ವರ್ಗಗಳ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ರಾಮುರವರು ಅಂದಿನ ಜನಪ್ರಿಯನಾಯಕ ದಿವಂಗತ ಬಿ.ಕೆ. ಪುಟ್ಟರಾಮಯ್ಯನವರ ಗರಡಿ ಪ್ರವೇಶಿಸಿದ್ದರು ನಂತರದ ದಿನಗಳಲ್ಲಿ ಅವರ ಅತ್ಯಂತ ಪ್ರೀತಿ ಪಾತ್ರರಾದ ಶಿಷ್ಯರಾಗಿದ್ದರು.
ಇತ್ತ ಮದ್ದೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಎಸ್.ಎಂ. ಕೃಷ್ಣ ರವರು ಲಂಡನ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ಮದ್ದೂರಿಗೆ ಆಗಮಿಸಿದ್ದರು. ಅಲ್ಲಿಂದ ನಂತರ ನಡೆದ ಘಟನೆಗಳೇ ಅದ್ಬುತ.
ಹೀಗೆ ಸದಾ ಬೈಕಿನಲ್ಲಿ ಕಪ್ಪು ಕನ್ನಡಕ ಧರಿಸಿ ಶುಭ್ರ ಶ್ವೇತವಸ್ತ್ರದಾರಿಯಾಗಿ ಸಂಚರಿಸುತ್ತಿದ್ದ ಡಿ.ಟಿ. ರಾಮುರವರು ಎಲ್ಲರ ಮನವನ್ನೂ ಸೂರೆಗೊಂಡಿದ್ದರು ಹಾಗೂ ಅವರ ಬಗ್ಗೆ ಅಭಿಮಾನದ ಮಾತುಗಳು ಬಹಳ ಚಾಲ್ತಿಯಲ್ಲಿದ್ದವು. ಇದು ಹೇಗೋ ಸನ್ಮಾನ್ಯ ಎಸ್.ಎಂ. ಕೃಷ್ಣ ರವರ ಕಿವಿಗೂ ಬಿತ್ತು. ಅವರನ್ನು ನೋಡಲೆಂದೇ ಸೋಮನಹಳ್ಳಿಯ ಅವರ ಮನೆಯ ಬಾಲ್ಕಾನಿಯಲ್ಲಿ ನಿಂತು ಡಿ. ಟಿ. ರಾಮುರವರ ಬರುವಿಕೆಗಾಗಿ ಕಾಯುತ್ತಿದ್ದರಂತೆ. ಇದನ್ನು ಸ್ವತ: ಕೃಷ್ಣರವರೇ ರಾಮುರವರ ಶ್ರದ್ಧಾಂಜಲಿ ಸಭೆಯಲ್ಲಿ ಬಹಳ ಸ್ವಾರಸ್ಯವಾಗಿ ಬಣ್ಣಿಸಿದ್ದರು.
ಹೀಗೆಯೇ ಹಲವಾರು ದಿನಗಳಿಂದ ರಾಮುರವರ ಚಲನವಲನಗಳನ್ನು ಗಮನಿಸುತ್ತಿದ್ದ ಶ್ರೀ ಎಸ್. ಎಂ. ಕೃಷ್ಣರವರು ರಾಮುರವರನ್ನು ಭೇಟಿ ಮಾಡಬೇಕೆಂಬ ಹಂಬಲವನ್ನು ತಮ್ಮ ಆಪ್ತರೊಂದಿಗೆ ವ್ಯಕ್ತಪಡಿಸಿದರಂತೆ. ಅದರಂತೆಯೇ ಅವರಿಬ್ಬರ ಪರಿಚಯವೂ ಆಯಿತು. ನಂತರದ ದಿನಗಳಲ್ಲಿ ಅವರಿಬ್ಬರು ಅತ್ಯಂತ ಆತ್ಮೀಯರಾಗಿ ಒಂದೇ ಬೈಕಿನಲ್ಲಿ ಓಡಾಡುತ್ತಿದ್ದರು. ಜನರು ಇವರನ್ನು ರಾಮ-ಕೃಷ್ಣರೆಂದೇ ಸಂಬೋಧಿಸುತ್ತಿದ್ದರು. ಇವರಿಬ್ಬರು ಎಲ್ಲಿ ನಿಂತರೂ ಇವರನ್ನು ನೋಡಲು ಜನಜಂಗುಳಿಯೇ ಸೇರುತ್ತಿತ್ತಂತೆ. ಹೀಗೆ ಇವರಿಬ್ಬರ ಒಡನಾಟ ಸಾಗುತ್ತಿರುವಾಗಲೇ ಶ್ರೀಯುತ ಕೃಷ್ಣರವರು ರಾಜಕೀಯ ಮುಖಂಡರ ಒತ್ತಾಯದಿಂದ ಮದ್ದೂರಿನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ಆ ಕಾಲದಲ್ಲಿ ಮಂಡ್ಯ ಮತ್ತು ಮದ್ದೂರು ಭಾಗಗಳಲ್ಲಿ ಡಿ.ಟಿ. ರಾಮು ರವರ ಭಾಷಣ ಕೇಳಲು ಜನ ಜಾತ್ರೆಯೇ ಸೇರುತ್ತಿತ್ತು.
ರಾಮುರವರು ಇಷ್ಟು ಗಟ್ಟಿಯಾಗಿ ಕೃಷ್ಣರವರ ಬೆಂಬಲಕ್ಕೆ ನಿಂತ ಕಾರಣದಿಂದ ಅವರ ಮೇಲೆ ಎರಡು ಬಾರಿ ಹಲ್ಲೆಗಳು ನಡೆದವು.


ವೈವಾಹಿಕ ಜೀವನ
ದಿನಾಂಕ 31-05-1964 ರಂದು ಹಾಸನ ಜಿಲ್ಲೆ ಅರಸೀಕೆರೆಯ ಎ. ದಾಸಪ್ಪನವರ ಎರಡನೆಯ ಮಗಳಾದ ವಸುಂಧರಾ ಅವರನ್ನು ಅರಸೀಕೆರೆಯಲ್ಲಿ ವಿವಾಹವಾದರು. ನಂತರ ದೇವರಹಳ್ಳಿಯಲ್ಲಿ ಆರತಕ್ಷತೆ. ಶ್ರೀಯುತ ಡಿ.ಟಿ. ರಾಮುರವರಂತೆಯೇ ಅವರ ಶ್ರೀಮತಿಯೂ ಸಹ ಡಿ.ಟಿ. ರಾಮುರವರ ಎಲ್ಲಾ ಸುಖದು:ಖಗಳಲ್ಲಿ ಭಾಗಿಯಾಗುತ್ತಿದ್ದರು. ರಾಮುರವರಾದರೋ ಸದಾ ಅವರ ಉಪಾಧ್ಯಾಯ ವೃತ್ತಿಯ ಜೊತೆಗೆ ಬಿಡುವೇ ಇಲ್ಲದೆ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗುತ್ತಿದ್ದರು.

ಮನೆಯೇ ಗುರುಕುಲ
ಮದ್ದೂರಿನ ಬಸ್ ನಿಲ್ದಾಣದ ಬಳಿಯ ಭೈರಶೆಟ್ಟ ಕಾಂಪೌಂಡ್ ಪಕ್ಕ ಮನೆ ಮಾಡಿದ್ದ ಗುರುಗಳಾದ ಶ್ರೀ ಡಿ.ಟಿ. ರಾಮುರವರ ಮನೆಯಂತು, ಅಕ್ಷರಶ: ಗುರುಕುಲವೇ ಆಗಿತ್ತು. ಸದಾ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ದೂರದ ಹಳ್ಳಿಗಳಿಂದ ಬರುತ್ತಿದ್ದ ಎಷ್ಟೋ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಊಟೋಪಚಾರಗಳು ದಿನ ನಿತ್ಯವೂ ಜರುಗುತ್ತಿತ್ತು. ಹಾಗೂ ಎಷ್ಟೋ ವಿದ್ಯಾರ್ಥಿಗಳು ಅಲ್ಲಿಯೇ ವಾಸಿಸುತ್ತಿದ್ದರು. ಇದ್ಯಾವುದಕ್ಕೂ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ರಾಮುರವರಷ್ಟೇ ತಾಳ್ಮೆಯ ಪ್ರತಿರೂಪವಾಗಿದ್ದರು ಅವರ ಶ್ರೀಮತಿಯವರು.
ಹೀಗೆ ಬದುಕಿದ ಅವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು
ಮೊದಲನೆಯವರು ಶ್ರೀ ಸುಭಾಶ್ ರಾಮ್, ವೃತ್ತಿಯಲ್ಲಿ ಎಂಜಿನೀಯರ್.
ಎರಡನೆಯವರು ಶ್ರೀ. ಅಶೋಕ್ ರಾಮ್, ವೃತ್ತಿಯಲ್ಲಿ ಪತ್ರಕರ್ತರು.
ಮೂರನೆಯವರು ಶ್ರೀ ಡಾ. ಭಗತ್ ರಾಮ್, ವೃತ್ತಿಯಲ್ಲಿ ವೈದ್ಯರು (ಅರವಳಿಕೆ ತಜ್ಞರು).ನಾಲ್ಕನೆಯವರು ಶ್ರೀ ಹರ್ಷಾ ರಾಮ್, ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನೀಯರ್ ಹಾಗೂ ಅಮೇರಿಕಾದ ಫಿಲಿಪ್ಸ್ ಕಂಪನಿಯಲ್ಲಿ ಕೆಲಸ.
ಐದನೆಯವರು ಡಾ. ಶಾರದಶ್ರೀ, ಅಮೇರಿಕಾದಲ್ಲಿ ನವಜಾತ ಶಿಶುಗಳ ತಜ್ಞೆ.
ಸಹೋದರರಾದ ಡಿ.ಟಿ. ಜಯಕುಮಾರ್ ಮತ್ತು ಡಿ.ಟಿ. ವಿಜಯಕುಮಾರ್ ಇಬ್ಬರನ್ನೂ ತಮ್ಮ ಮಕ್ಕಳೊಂದಿಗೆ ಮಕ್ಕಳಂತೆಯೇ ಬೆಳೆಸಿದ್ದು ಒಂದು ವಿಶೇಷ. ಹಾಗೆ ಅವರು ಅಣ್ಣನವರ ಟ್ಯುಟೋರಿಯಲ್ಸ್‍ಗಳಲ್ಲಿ ಪಾಠ ಸಹ ಮಾಡುತ್ತಿದ್ದರು.
ಇದಾದ ಸ್ವಲ್ಪ ದಿನಗಳಲ್ಲಿ ರಾಮುರವರು ಮದ್ದೂರಿನ ಹಳೆಯ ಬಸ್ ನಿಲ್ದಾಣದ ಬಳಿ ಪ್ರಿಂಟಿಂಗ್ ಪ್ರೆಸ್ ಒಂದನ್ನು ಪ್ರಾರಂಭಿಸುತ್ತಾರೆ. ಇದರ ಉದ್ಘಾಟನೆಗೆ ದಿವಂಗತ ಕರಿಯಪ್ಪನವರನ್ನು ಕರೆಸಿದ್ದರು.

ಹೀಗೆ ಸದಾ ಕ್ರಿಯಾಶೀಲರಾಗಿದ್ದ ರಾಮುರವರು ಚನ್ನಪಟ್ಟಣ, ಮಂಡ್ಯ, ಮದ್ದೂರಿನ
ಅಪಾರ ಜನ ಸಂಪರ್ಕ ಸಾಧಿಸಿ ಪ್ರೀತಿ ವಿಶ್ವಾಸ ಗಳಿಸಿದ್ದರು. ಈ ಮದ್ಯೆ ಅವರ ತಮ್ಮನವರಾದ ಶ್ರೀ. ಡಿ.ಟಿ. ಜಯಕುಮಾರ್ ರವರಿಗೆ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ದೊರೆಯಿತು. ಅದಾದ ನಂತರ ನಡೆದ ಘಟನೆಗಳೇ ಅದ್ಭುತ. ಮುಂದೆ ಅವರು ರಾಮುರವರಂತೆಯೇ ಅಪಾರ ಜನ ಮನ್ನಣೆಗಳಿಸಿ ನಂಜನಗೂಡಿನಲ್ಲಿ 3 ಭಾರಿ ಶಾಸಕರಾಗಿ, ಮಂತ್ರಿಗಳಾಗಿ ಜನಸೇವೆ ಮಾಡಿದರು.
ಅದು 70ರ ದಶಕ. ಮತ್ತು ಅದು ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರು ಪರ್ವದ ದಿನಗಳು. ಇತ್ತ ಚನ್ನಪಟ್ಟಣದಲ್ಲೂ ಹಲವು ರಾಜಕೀಯ ಮೇಲಾಟದ ಮಧ್ಯೆ ಸುಯೋಗವೆಂಬಂತೆ ರಾಮುರವರಿಗೆ ಕಾಂಗ್ರೆಸ್‍ನಿಂದ 1978 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆಯಿತು.
ಕಾಂಗ್ರೆಸ್‍ನಿಂದ ಟಿಕೆಟ್ ಏನು ಅಷ್ಟು ಸುಲಭವಾಗಿ ದೊರೆತಿರಲಿಲ್ಲ. ಕಾರಣಾಂತರಗಳಿಂದ ಇನ್ನೊಬ್ಬರ ಕೈತಪ್ಪಿದ್ದರಿಂದ ಆಗ ಯಾರಿಗೆ ಎಂಬ ಕುತೂಹಲ ಉಂಟಾದಾಗ ಜನರ ಮಧ್ಯದಿಂದ ಕೂಗಿಬಂದ ಹೆಸರೇ ಡಿ.ಟಿ. ರಾಮು. ಆಗ ಸ್ವಲ್ಪ ಅಡೆತಡೆಗಳು ಉಂಟಾದಾಗ ಅವರನ್ನು ಬಲವಾಗಿ ಸಮರ್ಥಿಸಿಕೊಂಡವರು. ನಾಗವಾರದ ಶ್ರೀ ಕಪನೀಗೌಡರು, ಕಾಶೀ ಬೋರೆಗೌಡರು ಹಾಗೂ ಇನ್ನೂ ಅನೇಕ ಮುಖಂಡರುಗಳು. ಇದಕ್ಕೆ ಪೂರಕವೆಂಬಂತೆ ಸನ್ಮಾನ್ಯ ದಿವಂಗತ ಕರಿಯಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಮುರವರಿಗೆ ಟಿಕೆಟ್ ಕೊಟ್ಟರೆ ಮಾತ್ರ ತಾವು ಕನಕಪುರದಲ್ಲಿ ಚುನಾವಣೆಯಲ್ಲಿ ನಿಲ್ಲುವುದಾಗಿ ಹಠ ಹಿಡಿದರು ಇದರ ಫಲವಾಗಿ ರಾಮುರವರು ಚುನಾವಣೆಗೆ ನಿಲ್ಲುವಂತಾಯಿತು. ಮುಂದೆ ನಡೆದಿದ್ದು ಇತಿಹಾಸ.
1978 ರಲ್ಲಿ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಶ್ರೀಯುತ ರಾಮುರವರು ಭರ್ಜರಿ ಜಯಗಳಿಸಿ ವಿಧಾನಸಭೆ ಪ್ರವೇಶಿದರು. ತಮಗೆ ಸಿಕ್ಕಿದ ಈ ಒಂದು ಅದ್ಬುತ ಅವಕಾಶವನ್ನು ಬಳಸಿಕೊಂಡು ರಾಮುರವರು ಅತ್ಯಂತ ಪ್ರಾಮಾಣಿಕವಾಗಿ ಜನ ನಿಷ್ಠೆಯಿಂದ ದುಡಿದರು.
ಕಗ್ಗತ್ತಲಿನಿಂದ ಮುಳುಗಿದ್ದ ಹಳ್ಳಿಗಳು, ಕನಿಷ್ಠ ಸೈಕಲ್ ತಿರುಗಾಡಲು ಅರ್ಹವಲ್ಲದ ರಸ್ತೆಗಳು, ನಿತ್ಯವೂ ರೋಗದಿಂದ ಬಳಲುವ ಮಂದಿಗೆ ಸೂಕ್ತ ಚಿಕಿತ್ಸೆ ನೀಡಲು ಅವಶ್ಯವಿದ್ದ ಆಸ್ಪತ್ರೆಯ ಕೊರತೆ, ವಿದ್ಯಾಕ್ಷೇತ್ರದಲ್ಲಿ ಸಮಸ್ಯೆಗಳ ಮದ್ಯೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಠದಿಂದ ಕೆಲಸ ಮಾಡಿದರು''. ಇಷ್ಟೆಲ್ಲಾ ಅಭಿವೃದ್ದಿ ಮಾಡಿಯೂ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಸೇವೆ ಮಾಡಿದರೂ ನಂತರದ ವಿಧಾನಸಭಾ ಚುನಾವಣೆಗೆ ಅವರಿಗೆ ಟಿಕೆಟ್ ದೊರಕದಿದ್ದದ್ದು ಅವರ ದುರಾದೃಷ್ಟವೇ ಸರಿ. ಆದರೂ ದೃತಿಗಡೆದೆ, ಜನರ ನಡುವೇ ಇದ್ದು ಅವರ ಸೇವೆಗಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ತ್ಯಾಗಿ ಡಿ.ಟಿ. ರಾಮುರವರು. ಹೀಗೆ ಬದುಕು ಮುಂದುವರೆಯುತ್ತಿದ್ದಾಗ ಅವರ ಜೀವನಕ್ಕೆ ಮಾರಕವೆಂಬಂತೆ ಬಂದಿದ್ದೇ ಸಕ್ಕರೆ ಖಾಯಿಲೆ. ಅದು ಅವರನ್ನು ಯಾವ ಪರಿ ಕಾಡಿತ್ತೆಂದರೆ ಕಾಲಿನಲ್ಲಿ ಒಂದು ಸಣ್ಣ ಗುಳ್ಳೆಯಾಗಿ ಊದಿಕೊಂಡು ಗಾಂಗ್ರೀನ್ ಆಗಿ ಪಾದದ ಬೆರಳನ್ನು ಕತ್ತರಿಸುವ ಮಟ್ಟಿಗೆ ತಲುಪಿತು. ಅತ್ತ ಅವರ ತಮ್ಮ ನಂಜನಗೂಡಿನಲ್ಲಿ ಸತತವಾಗಿ ಜಯಭೇರಿ ಭಾರಿಸುತ್ತಾ ರಾಜಕೀಯ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದರು. ಬಹುಶಃ ಅದು ರಾಮುರವರಿಗೆ ಸಮಾಧಾನದ ವಿಷಯವಾಗಿತ್ತು. ಅತ್ಯಂತ ಪ್ರೀತಿ ಪಾತ್ರರಾದ ತಮ್ಮಂದಿರುಗಳೆಂದರೆ ಅವರಿಗೆ ಪ್ರಾಣ. ಈ ಅಣ್ಣ ತಮ್ಮಂದಿರ ಪ್ರೀತಿ ಹೇಳತೀರದು. ಯಾವಾಗಲೂ ಒಬ್ಬರನ್ನೊಬ್ಬರು ಸ್ಮರಿಸುತ್ತಲೇ ಇದ್ದರು. ಶ್ರೀ ಡಿ.ಟಿ. ರಾಮುರವರು ಇಂಡೋ-ರಷ್ಯಾ ಬಾಂಧವ್ಯದ ಸಂಸ್ಥೆಗೂ ಸದಸ್ಯರಾಗಿದ್ದರು. ಆಗ ಅವರ ಮನೆಗೆ ಅಲ್ಲಿನ ರಷ್ಯಾದ ಮಂತ್ರಿ, ಮಹೋದಯರು ಬಂದಿದ್ದರು. ಮತ್ತು ರಾಮುರವರು ಶಾಸಕರ ಗೃಹನಿರ್ಮಾಣ ಸಂಘದ ಅಧ್ಯಕ್ಷರೂ ಆಗಿದ್ದರು. ರಾಮುರವರ ಮನೆಯ ಆವರಣ ಅಕ್ಷರಶಃ ರಾಜಕೀಯ ಚಟುವಟಿಕೆಗಳ ಮೈದಾನವೇ ಆಗಿತ್ತು.

ಎಷ್ಟೋ ಸಭೆ ಸಮಾರಂಭಗಳು ಆ ಆವರಣದಲ್ಲಿಯೇ ಜರುಗಿ ಹೋಗಿದ್ದವು. ಹೀಗೆಯೇ ಜೀವನ ಸಾಗುತ್ತಿದ್ದಾಗ 1996 ರಲ್ಲಿ ಆಗಸ್ಟ್ ತಿಂಗಳಲ್ಲಿ ಖಾಯಿಲೆ ಬಿದ್ದು ಬಹಳ ಕಾಲ ಆಸ್ಪತ್ರೆಗೆ ದಾಖಲಾದರು. ಬೌರಿಂಗ್, ಜಯದೇವ, ಮಣಿಪಾಲ್ ಹಾಗೂ ಭಗವಾನ್ ಮಹಾವೀರ್ ಆಸ್ಪತ್ರೆಗಳಲ್ಲಿ ಕೊನೆಯ ದಿನಗಳನ್ನು ದೂಡಿ ದಿನಾಂಕ 06- 01-1997 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 7.30 ರಲ್ಲಿ ಇಹಲೋಕ ತ್ಯಜಿಸಿದರು. ಬದುಕಿನಲ್ಲಿ ಇನ್ನೊಬ್ಬರ ಉಪಕಾರಕ್ಕಾಗಿಯೇ ದುಡಿದ ಜೀವ ವಿಧಿವಶರಾದಾಗ ಅಂದಿನ ಹಣಕಾಸಿನ ಮಂತ್ರಿಯಾಗಿದ್ದ ಶ್ರೀಯುತ. ಸಿದ್ಧರಾಮಯ್ಯನವರು ಮೊದಲು ಬಂದು ಡಿ.ಟಿ. ಜಯಕುಮಾರ್ ಮತ್ತು ಕುಟುಂಬದ ಸದಸ್ಯರನ್ನು ಸಂತೈಸುತ್ತಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಸ್ಪತ್ರೆಗೆ ದೌಡಾಯಿಸಿ ಬಂದು ಸಂತಾಪ ಸೂಚಿಸಿದರು. ಇತ್ತ ಚನ್ನಪಟ್ಟಣದಲ್ಲಿ ಜನ ಸಾಗರವೇ ಶೋಕತಪ್ತವಾಗಿ ಪಾರ್ಥಿವ ಶರೀರದ ಬರುವಿಕೆಯನ್ನು ಕಾಯುತ್ತಿತ್ತು. ಇವರ ಅಂತಿಮ ಯಾತ್ರೆ ಮೈಸೂರು ರಸ್ತೆಯಿಂದ ಪೇಟೆ ಬೀದಿಯ ಮೂಲಕ ಗಾಂಧಿ ಭವನಕ್ಕೆ ಬಂದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಾನು ಬಡತನವನ್ನು, ಬಡವರನ್ನು ಹತ್ತಿರದಿಂದ ಕಂಡಿದ್ದೇನೆ. ನೊಂದವರಿಗೆ ನೋವಿನಿಂದ ನರಳುವವರಿಗೆ, ನಾನು ಧ್ವನಿಯಾಗಬೇಕು. ಅವರ ಸೇವಕನಾಗಿ ಬದುಕಬೇಕು. ಇದೆಲ್ಲಾ ರಾಜಕಾರಣದಲ್ಲಿ ಸಾಧ್ಯವೇ” ಎಂಬ ಪ್ರಶ್ನೆ ಅವರನ್ನು ಸದಾ ಕಾಡುತ್ತಿತ್ತು. ಎಲ್ಲಾ ಕಷ್ಟಗಳ ನಡುವೆಯೂ ರಾಮುರವರು ಅದನ್ನು ಸಾಧ್ಯ ಮಾಡಿ ತೋರಿಸಿದ್ದು ನಿಜಕ್ಕೂ ಅದ್ಭುತ”.

ಸದನದಲ್ಲಿ ಡಿ.ಟಿ. ರಾಮು
ಶಾಸಕ ಡಿ.ಟಿ. ರಾಮು ರವರು ಸಭೆಯಲ್ಲಿ ಮಾಡಿದ ಭಾಷಣಗಳು ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಶಿಕ್ಷಕರು ಹೀಗೆ ಸಮಾಜದ ವಿವಿಧ ವರ್ಗಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತವೆ.
ರಾಮುರವರು ನೀಡಿದ ಹಲವು ಸಲಹೆಗಳು ಮುಂದೆ ಜನಪ್ರಿಯ ಕಾರ್ಯಕ್ರಮಗಳಾಗಿ ರೂಪುಗೊಂಡಿದ್ದುಂಟು. ಉದಾ: ರಾಮುರವರು ನೀಡಿದ ಸಲಹೆ ಕಾರ್ಯರೂಪಕ್ಕೆ ಬಂದು ವಿಧವೆಯರಿಗೆ ಮಾಸಾಶನ ದೊರೆಯುವಂತಾಯಿತು.

ಲೇಖನ : ಡಾ. ಭಗತ್ ರಾಮ್ ಡಿ.ಆರ್.
ಅರವಳಿಕೆ ತಜ್ಞರು,
ವಿಕ್ಟೋರಿಯಾ ಆಸ್ಪತ್ರೆ
ಬೆಂಗಳೂರು.
ಮೊ : 8970827758

Leave a Reply

Your email address will not be published. Required fields are marked *