ಸೋಬಾನೆ ಕಲಾವಿದೆ ಚಿಕ್ಕಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ
ರಾಮನಗರ (hairamanagara.in) : ಕಳೆದ 45 ವರ್ಷಗಳಿಂದ ಹಾಡುತ್ತ ಬಂದ ಹಾಡುಹಕ್ಕಿಯ ಉತ್ಸಾಹ, ಇಳಿವಯಸ್ಸಿನಲ್ಲೂ ಬತ್ತಿಲ್ಲ. ಈವರೆಗಿನ ಜೀವನದಲ್ಲಿಡೀ ಹಾಡುತ್ತಾ ಕಳೆದ ಈ ಹಾಡುಹಕ್ಕಿಗೆ ಈ ಬಾರಿಯ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.
ಈ ಹಾಡು ಹಕ್ಕಿಯೇ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಬಿಜ್ಜಹಳ್ಳಿ ಗ್ರಾಮದ ಚಿಕ್ಕಮ್ಮ. 72ರ ಹರೆಯದ ಅಜ್ಜಿಗೆ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ದಿನ ಅವರ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಚಿಕ್ಕಮ್ಮ ಅವರದು ಜನಪದ ಕಲಾವಿದರ ಕುಟುಂಬ. ಚಿಕ್ಕಮ್ಮ ಅವರ ತಂದೆ ಚಿಕ್ಕಯ್ಯ ತಮಟೆ ಕಲಾವಿದರಾಗಿದ್ದರು, ತಾಯಿ ಚಿಕ್ಕಚೂಡಮ್ಮ ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಚಿಕ್ಕಮ್ಮ ಅವರಿಗೆ ಮುನಿಚಿಕ್ಕಮ್ಮ, ಮುನಿಚೂಡಮ್ಮ, ಗೌರಮ್ಮ, ಪುಟ್ಟಮ್ಮ, ಚಿಕ್ಕಮಣಮ್ಮ, ನಗಾರಿ ಮುನಿಯಪ್ಪ ಸೇರಿ ಐದು ಜನ ಸಹೋದರಿಯರು, ಒಬ್ಬ ಸಹೋದರ ಇದ್ದಾರೆ. ಇವರೆಲ್ಲರೂ ಕಲಾವಿದರಾಗಿದ್ದಾರೆ.

ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಚಿಕ್ಕಮ್ಮ ಶನಿವಾರ ‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ಜತೆ ಮನ ಬಿಚ್ಚಿ ಮಾತನಾಡಿದರು. ಗತಕಾಲದ ಬದುಕನ್ನು ಮೆಲುಕು ಹಾಕಿದರು.
‘ನಾನು ಶಾಲೆಗೆ ಹೋದವಳಲ್ಲ, ನನ್ನ ತಾಯಿ ಚಿಕ್ಕಚೂಡಮ್ಮ ಸೋಬಾನೆ ಪದಗಳನ್ನು ಹಾಡುತ್ತಿದ್ದರು, ಅವರಿಂದ ಕಲಿತುಕೊಂಡೆ. ತತ್ವಪದ, ಸೋಬಾನೆ ಪದ, ತೈಲೂರಮ್ಮನ ಪದ, ಪಟ್ಲುದಮ್ಮನ ಪದ, ಮೂಗುಮುದ್ದಮ್ಮನ ಪದ, ರಾಗಿಕಲ್ಲು ಪದ, ಸಿದ್ದಪ್ಪಾಜಿ ಕತೆ ಸೇರಿದಂತೆ ನೂರಾರು ಪದಗಳನ್ನು ಹಾಡುತ್ತೇನೆ’ ಎಂದು ತಿಳಿಸಿದರು.

‘ನಮ್ಮದು ಕಲಾವಿದರ ಕುಟುಂಬ, ನನ್ನ ತಂದೆ ಚಿಕ್ಕಯ್ಯ ತಮಟೆ ಕಲಾವಿದರಾಗಿದ್ದರು, ನನ್ನ ತಾಯಿ ಚಿಕ್ಕಚೂಡಮ್ಮ ಸೋಬಾನೆ ಪದಗಳನ್ನು ಹೇಳುತ್ತಿದ್ದರು, ನಾವು ಆರು ಜನ ಮಕ್ಕಳು, ಎಲ್ಲರೂ ಸೋಬಾನೆ ಪದಗಳನ್ನು ಹಾಡುತ್ತೇವೆ. ಈಗಲೂ ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ’ ಎಂದು ಅವರು ಹೇಳಿದರು.
ಮಾಶಾಸನ ಬರುವಂತಾಗಲಿ : ನನಗೆ ಈಗ ಇಳಿ ವಯಸ್ಸಾಗಿದೆ, ಆದರೆ ಮಾಶಾಸನ ಬರುತ್ತಿಲ್ಲ. ಮಾಶಾಸನ ಬಂದರೆ ಜೀವನ ನಡೆಸಲು ಅನುಕೂಲವಾಗುತ್ತದೆ. ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಸೋಬಾನೆ ಪದ ಸೇರಿದಂತೆ ಜನಪದ ಹಾಡುಗಳನ್ನು ಎಲ್ಲರೂ ಕಲಿತು ಕೊಂಡರೆ ಒಳ್ಳೆಯದು ಎಂದು ತಿಳಿಸಿದರು.
‘ಅಕಾಡೆಮಿ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಪತ್ರಿಕೆಗಳಲ್ಲಿ ಸುದ್ದಿ ಬಂದ ಮೇಲೆ ಪ್ರಶಸ್ತಿ ಸಿಕ್ಕಿದ್ದು ಗೊತ್ತಾಯಿತು. ಹೊಸಬರು ಆಸಕ್ತಿಯಿಂದ ಕಲಿಯಲು ಬಂದರೆ ಕಲಿಸುತ್ತೇನೆ’ ಎಂದು ಅವರು ಹೇಳಿದರು.

ಸೋಬಾನೆ ಕಲಾವಿದೆ ಚಿಕ್ಕಮ್ಮ ಅವರಿಗೆ 2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ ಎಂದು ಚಿಕ್ಕಮ್ಮ ಅವರ ಮಗ ಕೆ. ಕಾಳಯ್ಯ ಅವರು ತಿಳಿಸಿದರು. ಕಾಳಯ್ಯ ಅವರು ಕೂಡ ಕಲಾವಿದರಾಗಿದ್ದು, ಕಳೆದ 30 ವರ್ಷಗಳಿಂದ ಜನಪದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
- ಎಸ್. ರುದ್ರೇಶ್ವರ