ಡಾ. ಅಂಕನಹಳ್ಳಿ ಪಾರ್ಥ ಅವರ ಮಕ್ಕಳ ಕಥೆ ‘ಭೂಮಿ ತಲೆಕೆಳಗಾದರೆ…!’
ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಧರ್ಮದಿಂದ ರಾಜ್ಯಭಾರ
ಮಾಡುತ್ತಿದ್ದ, ಶತ್ರು ಸೈನ್ಯದ ಮೇಲೆ ಯುದ್ಧಕ್ಕೆ ಹೋಗಿ ಯುದ್ಧ ಮಾಡದೆ
ಸುಮ್ಮನೆ ನಿಂತ, ಶತ್ರು ಸೈನಿಕರು ಅವನನ್ನು ಕೊಂದು ಹಾಕಿದರು. ಆ ರಾಜ
ಸತ್ತು ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ. ದಟ್ಟವಾದ ಕಾಡಿನಲ್ಲಿ ಸಿಂಹ ನಿರ್ಭಯವಾಗಿ
ವಾಸಿಸುತ್ತಿತ್ತು.
ಆ ಕಾಡಿನ ಪಕ್ಕದಲ್ಲಿ ಒಂದು ಸಮುದ್ರವಿತ್ತು. ಅದರ ಪಕ್ಕದಲ್ಲಿ ಕಾಡಿನ
ಅಂಚಿನಲ್ಲಿ ಒಂದು ಮಾವಿನ ಮರ, ತಾಳೆಯ ಮರಗಳ ತೋಪಿತ್ತು. ಒಂದು
ದಿನ ಮೊಲವೊಂದು ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಅದರ ಕನಸಿನಲ್ಲಿ
ಭೂಮಿ ತಲೆಕೆಳಗಾಗುವ ಕನಸು ಬಿತ್ತು. ನಿದ್ರೆಯಿಂದ ಎಚ್ಚೆತ್ತ ಮೊಲ ಭೂಮಿ
ಕೆಳಗೆ ಬಿದ್ದರೆ ಏನು ಮಾಡುವುದು ಎಂದು ಯೋಚಿಸಲು ಶುರು ಮಾಡಿತು.
ಹೀಗೆ ಯೋಚಿಸುತ್ತಿರುವಾಗ ಬೇಲದ ಹಣ್ಣೊಂದು ತೊಟ್ಟು ಕಳಚಿ ತಾಳೆಗರಿಯ
ಮೇಲೆ ಬಿದ್ದು ಶಬ್ದವಾಯಿತು. ಮೊದಲೇ ಕೆಟ್ಟ ಕನಸು ಕಂಡ ಮೊಲ
ಭಯಭೀತನಾಗಿ ಭೂಮಿ ತಲೆಕೆಳಗಾಗುತ್ತಿದೆ ಎಂದು ಭಾವಿಸಿ ಪ್ರಾಣ
ಉಳಿಸಿಕೊಳ್ಳುವ ಎಂದು ಒಂದೇ ಸಮನೆ ಓಡತೊಡಗಿತ್ತು.
ಹೀಗೆ ಮೊಲ ಕಾಡಿನ ಕಡೆ ಓಡುತ್ತಿರುವಾಗ ತೋಪಿನ ಮಧ್ಯಭಾಗದಲ್ಲಿ
ಮತ್ತೊಂದು ಮೊಲ ಸಿಕ್ಕಿತು. ಯಾಕೆ ಹೀಗೆ ಒಂದೇ ಸಮನೆ ಓಡುತ್ತಿರುವೆ?
ಎಂದು ಕೇಳಿತು. ಓಡುತ್ತಾ ಹೇಳಿತು, ಇನ್ನೊಂದು ಮೊಲವು ಅದರ ಹಿಂದೆಯೇ
ಓಡಲಾರಂಭಿಸಿತು. ಹೀಗೆ ಒಂದರ ಹಿಂದೊಂದು ಮೊಲಗಳ ಹಿಂಡು
ಓಡತೊಡಗಿದವು.
ತೋಪಿನಲ್ಲಿ ಮೇಯುತ್ತಿದ್ದ ಹಸು, ಎಮ್ಮೆ, ಮೇಕೆ, ಮೊಲದ ಹಿಂಡನ್ನು
ನೋಡಿ ಹೀಗೇಕೆ ಓಡುತ್ತಿರುವೆ ಎಂದು ಕೇಳಿದವು. ಭೂಮಿ ತಲೆಕೆಳಗಾಗುತ್ತಿದೆ
ಎಂದು ಓಡುತ್ತಿದ್ದೆವು. ಇದನ್ನು ಕೇಳಿದ ಹಸುಗಳ ಹಿಂಡು, ಎಮ್ಮೆ ಹಿಂಡು,
ಕುರಿ ಹಿಂಡುಗಳು ಒಂದರ ಹಿಂದೊಂದು ಓಡಲಾರಂಭಿಸಿದವು. ಅವುಗಳ
ಸಾಲು ಒಂದು ಯೋಜನದಷ್ಟು ಉದ್ದವಾಗಿತ್ತು.
ಓಡುತ್ತಾ ಓಡುತ್ತಾ ಕಾಡನ್ನು ಸೇರಿದವು. ಕಾಡಿನಲ್ಲಿದ್ದ ಆನೆ, ಹುಲಿಗಳ
ಹಿಂಡು ಅವುಗಳ ಮುಂದೆ ಓಡುತ್ತಿದ್ದವು. ದಾರಿಯಲ್ಲಿ ಸಿಂಹದ ಹೊಟ್ಟೆಯಲ್ಲಿ
ಹುಟ್ಟಿದ ರಾಜ. ಪ್ರಾಣಿಗಳ ಮೆರವಣಿಗೆಯನ್ನು ಕಂಡು ಎಲ್ಲಿಗೆ ಪಯಣ ಎಂದು
ಕೇಳಿತು. ಭೂಮಿ ಬೀಳುತ್ತಿದೆ ಎಂದು ಓಡತೊಡಗಿದ್ದವು. ರಾಜ ಯೋಚಿಸಿ
ಇವು ಹೀಗೆ ಓಡುತ್ತಾ ಹೋದರೆ ಎಲ್ಲವೂ ಸತ್ತು ಹೋಗುತ್ತವೆ. ಇವುಗಳನ್ನು
ಬದುಕಿಸಬೇಕೆಂದು ಸಿಂಹ ಪ್ರಾಣಿಗಳ ಮುಂಭಾಗಕ್ಕೆ ನೆಗೆದು ಮೂರು ಸಲ
ಸಿಂಹನಾದ ಮಾಡಿತ್ತು. ಪ್ರಾಣಿಗಳೆಲ್ಲಾ ಹೆದರಿ ನಿಂತವು.
ಭೂಮಿ ತಲೆಕೆಳಗಾಗುತ್ತಿರುವುದನ್ನು ನೋಡಿದವರು ಯಾರು ಎಂದು
ಪ್ರಶ್ನೆ ಮೂಡಿತು. ಆನೆ, ಹುಲಿಯ ಮೇಲೆ ಹೇಳಿತು, ಹುಲಿ, ಹಸುವಿನ ಮೇಲೆ
ಹೇಳಿತು, ಹಸು ಮೊಲ ನೋಡಿದೆ ಎಂದಿತು. ಸಿಂಹ ಮೊಲವನ್ನು ತನ್ನ
ಹೆಗಲ ಮೇಲೆ ಕೂರಿಸಿಕೊಂಡು ತೋಪಿನ ಬಳಿ ಬಂದಿತು. ಇಲ್ಲಿಯೇ ಭೂಮಿ
ತಲೆಕೆಳಗಾಗಿ ಬೀಳುತ್ತಿದೆ ಎಂದಿತು. ಸಿಂಹ ಪರಿಶೀಲನೆ ಮಾಡಿ, ಮೊಲದ
ಮಾವಿನ ಹಣ್ಣು ತಾಳೆ ಗರಿಯ ಮೇಲೆ ಬಿದ್ದಿರುವುದನ್ನು ತಿಳಿಯಿತು. ಇದು
ಭೂಮಿ ತಲೆಕೆಳಗಾಗಿ ಬಿದ್ದಿರುವ ಶಬ್ದವಲ್ಲ, ಮಾವಿನ ಹಣ್ಣು ತಾಳೆಗರಿಯ
ಮೇಲೆ ಬಿದ್ದ ಶಬ್ದ, ನೀನು ತಪ್ಪು ತಿಳಿದುಕೊಂಡಿರುವೆ ಎಂದು ಹೇಳಿ ಮತ್ತೆ
ತನ್ನ ಬೆನ್ನಿನ ಮೇಲೆ ಮೊಲವನ್ನು ಕೂರಿಸಿಕೊಂಡು ಪ್ರಾಣಿಗಳಿದ್ದ ಜಾಗಕ್ಕೆ
ಬಂದಿತು. ನಿಜ ಸಂಗತಿಯನ್ನು ತಿಳಿಸಿತು, ಪ್ರಾಣಿಗಳಿಗೆಲ್ಲಾ ಧೈರ್ಯ ಹೇಳಿತು,
ಪ್ರಾಣಿಗಳು ಸಿಂಹವನ್ನು ಕೊಂಡಾಡಿದವು.

ಮಕ್ಕಳ ಕಥೆ – ಡಾ. ಅಂಕನಹಳ್ಳಿ ಪಾರ್ಥ
ಸಾಹಿತಿ, ಸಾಂಸ್ಕೃತಿಕ ಸಂಘಟಕ
ಮೊ: 9632497558