ಡಾ. ಮಂಜುಳಾ ಹುಲ್ಲಹಳ್ಳಿ ಅವರ ಕವನ ‘ಪಾಪಿಗಳೆಂದರೆ ಯಾರು?’

ಪಾಪಿಗಳೆಂದರೆ ಯಾರು?

ಹಸಿವು ನೀರಡಿಕೆಯಲಿ ನೊಂದವರೇ?
ದಾರಿದ್ರ್ಯದ ಬೇಗೆಯಲಿ ಬೆಂದವರೇ?
ಸಿರಿತನದ ಅಮಲಲಿ ಮೆರೆದವರೇ?
ಅಧಿಕಾರದ ಕಿಚ್ಚಲಿ ಸರಿದವರೇ?
ಈ ಜಗದ ಮಹದ್ ವ್ಯೂಹ ರಚನೆಯಲಿ
ಪಾಪಿಗೂ ಉದ್ಧಾರವಿಹುದಲ್ಲ!
ಮನವಾಗಬೇಕು ಶುದ್ಧತೆಯ ಪರಿಪೂರ್ಣತೆ
ವಿವೇಕಾನಂದರ ನುಡಿಯಿದು ಹುಸಿಯಲ್ಲ.
ಮಾನವರಾರೂ ಪಾಪಿಗಳಲ್ಲ,
ಮಾನವತೆಗೆಂದೂ ದಾರಿದ್ರ್ಯವಿಲ್ಲ.
ಆಗಿರಬಹುದಾದ ತಪ್ಪುಗಳನೆಲ್ಲ ಒಪ್ಪ
ಮಾಡಲು ಶುದ್ಧಮನದ ಕಂಬನಿ ಸಾಕಲ್ಲ!
ನಿಜದ‌ ಎದೆಯ ಪಶ್ಚಾತ್ತಾಪದ ಅಗ್ನಿಯಲಿ
ಮಿಂದು ಪರಿಪೂರ್ಣರಾಗಿ ಬಂದವರೆಲ್ಲ
ಪಾಲುದಾರರು ಸವಿಯಲು ಅಮರಾನಂದದ
ವಿವೇಕನುಡಿ, ಸಾಧನೆಗಳ ಸವಿ ಬೆಲ್ಲ.

  • ಡಾ. ಮಂಜುಳಾ ಹುಲ್ಲಹಳ್ಳಿ

Leave a Reply

Your email address will not be published. Required fields are marked *