ಯೋಗೇಶ್ವರ್ ನಿವಾಸದಲ್ಲಿ ದಲಿತಪರ ಸಂಘಟನೆಗಳ ಸಭೆ : ಯೋಗೇಶ್ವರ್ ಜೊತೆಗೆ ನಿಲ್ಲುವ ವಾಗ್ದಾನ

ಯೋಗೇಶ್ವರ್ ಪರ ದಲಿತ ಮುಖಂಡರ ಒಲವು

ಚನ್ನಪಟ್ಟಣ (hairamanagara.in) : ತಾಲೂಕಿನಲ್ಲಿ ಕೆಲ ವರ್ಷಗಳಿಂದ ದಲಿತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ದಲಿತರ ಪರವಾಗಿ ಕೆಲಸ ಮಾಡುವ ಯೋಗೇಶ್ವರ್ ಅವರನ್ನು ತಾಲೂಕು ದಲಿತ ಸಮುದಾಯ ಒಕ್ಕೊರಲಿನಿಂದ ಬೆಂಬಲಿಸ ಬೇಕು ಎಂದು ತಾಲೂಕಿನ ದಲಿತ ಮುಖಂಡರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ 5ನೇ ಅಡ್ಡರಸ್ತೆಯಲ್ಲಿರುವ ಯೋಗೇಶ್ವರ್ ಅವರ ನಿವಾಸದಲ್ಲಿ ಸಭೆ ನಡೆಸಿದ ತಾಲೂಕಿನ ವಿವಿಧ ದಲಿತ ಮುಖಂಡರು, ಕೆಲ ವರ್ಷಗಳಿಂದ ತಾಲೂಕಿನಲ್ಲಿ ದಲಿತರ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸುವುದಿರಲಿ, ದಲಿತರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯ ಬೇಕು ಎಂದಾದಲ್ಲಿ ನಾವೆಲ್ಲ ಮುಂದಿನ ದಿನಗಳಲ್ಲಿ ಯೋಗೇಶ್ವರ್ ಅವರ ಜೊತೆ ನಿಲ್ಲಬೇಕು ಎಂದು ದಲಿತ ಮುಖಂಡರು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನದ ವಿಚಾರದಲ್ಲಿ ದಲಿತರಿಗೆ ಅವಮಾನವಾಗಿದೆ. ಭವನವನ್ನು ಪೂರ್ಣಗೊಳಿಸದೆ ಉದ್ಘಾಟನೆ ಮಾಡುವ ಮೂಲಕ ನಮ್ಮ ಭಾವನೆಗಳ ಜೊತೆ ಆಟವಾಡಿದ್ದಾರೆ. ಉದ್ಘಾಟನೆಗೊಂಡು ವರ್ಷ ಕಳೆದರೂ ಭವನವನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಿಲ್ಲ. ಕಾಟಾಚಾರದ ಉದ್ಘಾಟನೆ ನಡೆಸಿ ನಮ್ಮ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸ ಬಾರದು ಎಂದು ದಲಿತ ಮುಖಂಡರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ದಲಿತರ ಕುಂದುಕೊರತೆ ಸಭೆ ನಡೆದಿಲ್ಲ, ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ಮನೆಯಲ್ಲಿ ಸಾವು ಸಂಭವಿಸಿದಾಗ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಡಾ.ಅಂಬೇಡ್ಕರ್ ಮತ್ತು ಜಗಜೀವನ್‍ರಾಂ ಭವನ ನಿರ್ಮಾಣ ವಾಗಿಲ್ಲ. ಬಗ್‍ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ದಲಿತರು ಅರ್ಜಿ ಹಾಕಿ ಹಲವಾರು ವರ್ಷಗಳು ಕಳೆದಿವೆಯಾದರೂ ಇನ್ನೂ ಮಂಜೂರಾತಿ ಮಾಡಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ದಲಿತರಿಗೆ ನೀಡಿ ಯಾವ ವಾಗ್ದಾನವನ್ನೂ ಪೂರ್ಣಗೊಳಿಸಿಲ್ಲ. ದಲಿತರ ಕುಂದುಕೊರತೆ ಕೇಳುವ ಸೌಜನ್ಯವನ್ನೂ ಅವರು ತೋರುತ್ತಿಲ್ಲ. ತಾಲೂಕಿನ ಎಸ್ಸಿ ಎಸ್ಟಿ ಹಾಸ್ಟೆಲ್‍ಗಳ ಕುಂದುಕೊರತೆಯನ್ನು ಪರಿಹರಿಸಿಲ್ಲ. ದಲಿತರಿಗೆ ಯಾವುದೇ ರೀತಿಯ ಸ್ಪಂದನೆ ತಾಲೂಕು ಆಡಳಿತದಿಂದ ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ಸಿಗಬೇಕಿದೆ ಎಂದರು.
ಈ ಹಿಂದೆ ಯೋಗೇಶ್ವರ್ ಅವರು ನಮಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ಕಾರಣದಿಂದಾಗಿ ನಾವು ಸ್ವಲ್ಪ ದೂರ ಉಳಿದಿದ್ದೆವು. ಇವರು ಬದಲಾಯಿಸಿಕೊಂಡು ನಮ್ಮ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ದಲಿತರು ಯೋಗೇಶ್ವರ್ ಅವರ ಪರವಾಗಿ ನಿಲ್ಲ ಬೇಕು ಎಂದು ತಿಳಿಸಿದ ದಲಿತ ಮುಖಂಡರು, ತಾಲೂಕಿನ ಅಭಿವೃದ್ಧಿ ಮತ್ತು ದಲಿತ ಸಮುದಾಯದ ಏಳ್ಗೆಗೆ ನಾವೆಲ್ಲ ಒಳ್ಳೆಯ ರಾಜಕೀಯ ತೀರ್ಮಾನ ಮಾಡಬೇಕಿದೆ ಎಂದು ತಿಳಿಸಿದರು.
ದಲಿತರನ್ನು ನಾನು ಎಂದೂ ಕಡೆಗಣಿಸಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯೋಗೇಶ್ವರ್, ನಾನು ಅಧಿಕಾರದಲ್ಲಿದ್ದಾಗ ಎಂದೂ ದಲಿತರನ್ನು ಕಡೆಗಣಿಸಿಲ್ಲ. ದಲಿತರಿಗೆ ಎಲ್ಲಾ ರೀತಿಯ ಪ್ರಾತಿನಿಧ್ಯತೆಯನ್ನು ನಾನು ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ಕೆಲ ವಿಚಾರಗಳಲ್ಲಿ ಸುಮ್ಮನೆ ನನ್ನ ವಿರುದ್ಧ ತಪ್ಪು ಮಾಹಿತಿ ನೀಡಿ ನಿಮ್ಮ ನನ್ನ ನಡುವೆ ಅಂತರ ಸೃಷ್ಟಿಮಾಡಿದರು. ಹಿಂದಿನದನ್ನು ನಾವು ಚರ್ಚಿಸುವುದು ಬೇಡ, ತಾಲೂಕಿನ ಅಭಿವೃದ್ಧಿಗಾಗಿ ನೀವೆಲ್ಲರೂ ನನಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಕೆಲ ಮಂದಿಯ ವ್ಯವಸ್ಥಿತ ಪಿತೂರಿಯಿಂದಾಗಿ ನನ್ನ ಮತ್ತು ದಲಿತ ಸಮುದಾಯದ ಬಾಂಧವ್ಯವನ್ನು ಕೆಡಿಸಲಾಯಿತು. ಮುಂದೆ ಈಗಾಗದಂತೆ ನೋಡಿಕೊಳ್ಳೋಣ, ತಾಲೂಕಿನ ದಲಿತರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತಿದ್ದೇನೆ. ನನ್ನಿಂದ ನಿಮಗೆ ಏನಾದರೂ ಸಮಸ್ಯೆಯಾಗಿದ್ದರೆ ನೇರವಾಗಿ ತಿಳಿಸಿ, ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಪಕ್ಷ ಎಂದೂ ದಲಿತ ವಿರೋಧಿಯಲ್ಲ, ದಲಿತರ ಪರವಾದ ಕೆಲಸಗಳನ್ನು ಮಾಡುತ್ತಿದೆ. ಕೆಲ ರಾಜಕೀಯ ಪಕ್ಷಗಳು ವೋಟಿನ ಅಸೆಗಾಗಿ ಬಿಜೆಪಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಾರೆ. ಬಿಜೆಪಿ ಪಕ್ಷದ ದಲಿತರಿಗೆ ಸಾಕಷ್ಟು ಅಧಿಕಾರ ಮತ್ತು ಅವಕಾಶಗಳನ್ನು ನೀಡಿದೆ. ಈದೇಶದ ರಾಷ್ಟ್ರಪತಿ ಹುದ್ದೆಯಂತಹ ಉನ್ನತ ಹುದ್ದೆಗೆ ದಲಿತರನ್ನು ಆಯ್ಕೆಮಾಡಿರುವುದೇ ಬಿಜೆಪಿಯ ದಲಿತಪರ ಕಾಳಜಿಗೆ ಸಾಕ್ಷಿಯಾಗಿದೆ. ಬಿಜೆಪಿ ಬಗ್ಗೆ ದಲಿತರು ಯಾವುದೇ ಕಾರಣಕ್ಕೂ ತಪ್ಪು ಅಭಿಪ್ರಾಯ ತಳೆಯುವುದು ಬೇಕಿಲ್ಲ ಎಂದರು.
ತಾಲೂಕಿನಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾಕಷ್ಟು ಬಾರಿ ಪ್ರಯತ್ನಿಸಿದ್ದೇನೆ. ಕೆಲ ಗ್ರಾಮಗಳಲ್ಲಿ ಸ್ಮಶಾನ ಮಂಜೂರಾಗಿದೆ. ಮತ್ತೆ ಕೆಲ ಗ್ರಾಮಗಳಲ್ಲಿ ಜಮೀನು ಇಲ್ಲದ ಕಾರಣ ಸಮಸ್ಯೆಯಾಗಿದೆ. ಈಗಲೂ ಖಾಸಗಿ ವ್ಯಕ್ತಿಗಳು ಜಮೀನು ಮಾರಾಟ ಮಾಡುವುದಿದ್ದರೆ ತಿಳಿಸಿ ನಾನು ಸರ್ಕಾರದ ಮಟ್ಟದಲ್ಲಿ ಮಾತನಾಡಿ ನಿಮಗೆ ಸ್ಮಶಾನ ಮಂಜೂರು ಮಾಡಿಸಿಕೊಡುತ್ತೇನೆ. ಟ್ರಸ್ಟ್‍ಗಳ ಸಮಸ್ಯೆಯ ಬಗ್ಗೆ ಸಂಬಂಧಿಸಿದವವರೊಂದಿಗೆ ಚರ್ಚಿಸುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆಗೂ ಬೆಂಬಲಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ನೀಲಕಂಠನಹಳ್ಳಿ ಭರತ್, ಬಿಎಸ್‍ಪಿ ಕುಮಾರ್, ಕೆಂಚಪ್ಪ, ಸಂಕಲಗೆರೆ ಕೃಷ್ಣ, ಪ್ರದೀಪ್‍ರಾಂಪುರ, ಚಕ್ಕಲೂರು ಚೌಡಯ್ಯ, ಮಧುಹೊಸಹಳ್ಳಿ, ಚಕ್ಕೆರೆ ಗಂಗಾಧರ್, ಹೊಂಗನೂರು ಶಿವು, ಬಾಚಹಳ್ಳಿ ಪ್ರದೀಪ್, ಅಂಬೇಡ್ಕರ್ ನಗರ ಕುಮಾರ್, ರಾಂಪುರ ಅರುಣ್, ನೀಲಸಂದ್ರ ಸಿದ್ದರಾಮು, ಡಾ.ರವಿಕುಮಾರ್, ಇಂಜಿನಿಯರ್ ಶಂಕರಪ್ಪ, ಕೃಷ್ಣಪ್ಪ ಮೈಲನಾಯ್ಕನಹಳ್ಳಿ, ಗಿರೀಶ್ ಕೋಡಂಬಹಳ್ಳಿ, ಹನುಮಂತು ಕೋಡಂಬಹಳ್ಳಿ, ಅಂಬೇಡ್ಕರ್ ನಗರ ನಾಗೇಶ್, ಸತೀಶ್, ರಾಜೇಶ್.ಆರ್. ಅಂದಾನಿ.ಪಿ. ಸುನೀಲ್, ಬಸವರಾಜು, ಗಂಗಾಧರ್, ಪ್ರಕಾಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *