ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಸಂಕಲ್ಪ ಮಾಡಿ: ಡಾ.ಎಸ್. ಶಶಿಧರ್
ರಾಮನಗರ (hairamanagara.in) : ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಹೆಣ್ಣು ಮಕ್ಕಳ ಸುರಕ್ಷತೆ, ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಂಕಲ್ಪಮಾಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್. ಶಶಿಧರ್ ಸಲಹೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ರಾಮನಗರ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಹೆಣ್ಣು ಮಗುವನ್ನು ಸಮಾಜವು ನೋಡುವ ದೃಷ್ಠಿಕೋನವನ್ನು ಉತ್ತಮ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಗರ್ಭದಾರಣ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನ, ಲಿಂಗ ಆಯ್ಕೆ ನಿಷೇದ ಕಾಯ್ದೆ – 1994 ರ ಪ್ರಕಾರ ಲಿಂಗ ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಇದರ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸ ಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡುತ್ತಾ ಇಂದಿನ ಹೆಣ್ಣು ಮಗುವೆ, ನಾಳಿನ ಜಗತ್ತನ್ನು ಮುನ್ನೆಡೆಸಬೇಕು. ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶವನ್ನು ಸೃಷ್ಠಿಸುವುದು, ದೃಷ್ಠಿಕೋನ ಬದಲಾಯಿಸುವುದು, ಗೌರವ ಮತ್ತು ಮೌಲ್ಯ ಖಾತರಿಗೊಳಿಸುವುದು, ಮೂಲ ಭೂತ ಹಕ್ಕುಗಳನ್ನು ಒದಗಿಸುವುದು, ಲಿಂಗಾನುಪಾತ ಕುಸಿಯದಂತೆ ಕಾರ್ಯಯೋಜನೆ ರೂಪಿಸುವುದು, ಹೆಣ್ಣು ಮಗುವಿನ ಮಹತ್ವದ ಬಗ್ಗೆ ಸಮಾಜ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಪ್ರಸವ ಪೂರ್ವ ಲಿಂಗ ಪತ್ತೆ ನಿಷೇದ, ಬಾಲ್ಯ ವಿವಾಹ ಪದ್ಧತಿಗೆ ನಿರ್ಬಂಧ, ಜೊತೆಗೆ ಹೆಣ್ಣು ಮಕ್ಕಳ ಬೆಳವಣಿಗೆಗೆ ಪ್ರಸವ ಪೂರ್ವ ಆರೋಗ್ಯ ಸೇವೆಯ ಸೌಲಭ್ಯ ಒದಗಿಸುವುದು. ಶಿಕ್ಷಣ, ಶುಚಿತ್ವ, ಪೌಷ್ಟಿಕ ಆಹಾರ ನೀಡುವುದು ಹಾಗೂ ಅತ್ಯಾಚಾರ, ವರದಕ್ಷ್ಷಿಣೆ ಕಿರುಕುಳ, ಮಕ್ಕಳ ಅಪಾಹರಣ ಇತರೆ ಚಟುವಟಿಕೆಗಳ ಬಗ್ಗೆ ಕಟ್ಟೆಚ್ಚರವಹಿಸುವುದು ಪೋಷಕರ ಮತ್ತು ಸಮುದಾಯದ ಜವಾಬ್ಧಾರಿಯಾಗಿರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞರಾದ ಡಾ. ಗೀತಾ, ಡಾ. ನಳಿನಾ, ಮಕ್ಕಳ ತಜ್ಞರಾದ ಶಶಿರೇಖಾ, ಶುಶ್ರೂಷಣಾಧಿಕಾರಿ ಗಣೇಶ್, ಸವಿತಾ, ಜಿಲ್ಲಾ ಪಂಚಾಯತ್, ಎಸ್.ಬಿ.ಸಿ.ಸಿ ಸಂಯೋಜಕರಾದ ಸುರೇಶ್‍ಬಾಬು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಉಮಾದೇವಿ, ಆರೋಗ್ಯ ಸಿಬ್ಬಂದಿ, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಹಾಗೂ ಸಾರ್ವಜನಿಕರು ಹಾಜರಿದ್ದರು.