ಪ್ರವಾಸಿ ಸ್ಥಳಗಳು ಮನರಂಜನೆ ಹಾಗೂ ಉದ್ಯೋಗ ಕಲ್ಪಿಸುತ್ತದೆ : ಹರೀಶ್

ರಾಮನಗರ (hairamanagara.in) : ಪ್ರವಾಸಿ ಸ್ಥಳಗಳು ಒಂದೊಂದು ರೀತಿಯಲ್ಲಿ ಹೆಸರು ಪಡೆದುಕೊಂಡಿರುತ್ತದೆ. ಪ್ರವಾಸಿ ಸ್ಥಳಗಳು ಸಾರ್ವಜನಿಕರಿಗೆ ಮುಖ್ಯವಾಗಿ ಮನರಂಜನೆ ಹಾಗೂ ಉದ್ಯೋಗ ಕಲ್ಪಿಸುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ತಿಳಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ‌ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟ ಮಾಡಿದಂತಹ ಹಲವಾರು ಸ್ಥಳಗಳು ಇವತ್ತಿನ ದಿನ ಪ್ರವಾಸೋದ್ಯಮ ಸ್ಥಳಗಳಾಗಿ ಪರಿವರ್ತನೆ ಆಗಿದೆ. ಜಾನಪದ ಲೋಕ ಇಡೀ ನಾಡಿನಲ್ಲೇ ವಿಶೇಷ ಹೆಗ್ಗಳಿಗೆ ತಂದು ಕೊಟ್ಟ ಸ್ಥಳ. ಸಾಹಸ ಕ್ರೀಡಯೊಂದಿಗೆ ಪ್ರವಾಸೋದ್ಯಮ ನಡೆಸಬಹುದಾದ ಏಕಶಿಲಾ ಬೆಟ್ಟ ಸಾವನದುರ್ಗ, ರಾಮದೇವರ ಬೆಟ್ಟ ರಾಮನಗರ ಜಿಲ್ಲೆಯಲ್ಲಿದೆ. ಮಂಚನಬೆಲೆ, ಮೇಕೆದಾಟು, ಸಂಗಮ, ಚುಂಚಿ, ಫಾಲ್ಸ್ ಪ್ರಸಿದ್ಧವಾದ ಪ್ರವಾಸಿ ಸ್ಥಳಗಳಾಗಿವೆ. ಜಾನಪದ ಲೋಕದಲ್ಲಿ ಇಡೀ ಗ್ರಾಮೀಣ ಚಿತ್ರಣವೇ ಅಡಗಿದೆ, ಕಲಾವಿದರ ಕಲೆಯನ್ನು ಪ್ರೋತ್ಸಹಿಸಲು ಲೋಕಸಿರಿ ಕಾರ್ಯಕ್ರಮಗಳನ್ನು ಆಯೋಜಿಸಿ ಜಾನಪದ ಲೋಕ ಕಲೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮ್ಯಾನೇಜಿಂಗ್ ಟ್ರಸ್ಟಿ ಕರ್ನಾಟಕ ಜಾನಪದ ಪರಿಷತ್ತು ಆದಿತ್ಯ ನಂಜರಾಜ್ ಮಾತನಾಡಿ ಜಾನಪದ ಲೋಕ ಕಲಾವಿದರ ತವರು, ಪ್ರವಾಸಿಗರಿಗೆ ಅಚ್ಚುಮೆಚ್ಚು ತಾಣ. ಭಾರತ ದೇಶದಲ್ಲಿ ಇರುವಷ್ಟು ಪ್ರವಾಸಿ ತಾಣಗಳು ಬೇರೆ ಯಾವ ದೇಶದಲ್ಲೂ ಇಲ್ಲ.ವಿವಿಧ ಸ್ಥಳಗಳಿಂದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬರುತ್ತಾರೆ. ಪ್ರವಾಸಿಗರನ್ನು ಅತಿಥಿಗಳಾಗಿ ನೋಡಿಕೊಂಡರೆ ಭಾರತದ ಪ್ರವಾಸೋದ್ಯಮ ಬೆಳೆಯುತ್ತದೆ ಎಂದರು.

ಚಿಕ್ಕಮುದುವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕ ಎಚ್.ಎಸ್. ನಾಗೇಶ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಮನಗರಕ್ಕೆ ಗಾಂಧೀಜಿ ಅವರು ಆಗಮಿಸಿದ್ದರು. ಅವರು ಆಗ ರಾಮನಗರ-ಚನ್ನಪಟ್ಟಣ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು. ಅಹಿಂಸೆ ಹಾಗೂ ಸತ್ಯಗ್ರಹವೇ ಸ್ವಾತಂತ್ರ್ಯದ ಮೂಲ ಮಂತ್ರ ಮಾಡಿಕೊಂಡು, ಗಾಂಧೀಜಿ ಅವರು‌ ಸ್ವಾತಂತ್ರ್ಯ ಹೋರಾಟದಲ್ಲಿ ರೈತರು, ಸಾರ್ವಜನಿಕರನ್ನು ಪಾಲ್ಗೊಳ್ಳುವಂತೆ ಮಾಡಿದರು. ಈ ಹಿನ್ನಲೆಯಲ್ಲಿ ಗಾಂಧೀಜಿ ಅವರು ಸ್ವಾತಂತ್ರ್ಯ ದಲ್ಲಿ ಪಾಲ್ಗೊಂಡ ಅವಧಿಯನ್ನು ಗಾಂಧಿ ಯುಗ ಎಂದು ಕರೆಯುತ್ತೇವೆ ಎಂದರು.

ಮಹಾತ್ಮ ಗಾಂಧೀಜಿ ಅವರು ಸ್ವದೇಶಿ ವಸ್ತುಗಳ ಬಳಕೆ, ಆರ್ಥಿಕ ಸ್ವಾವಲಂಬನೆ, ಗುಡಿ ಕೈಗಾರಿಕೆಗೆ ಹೆಚ್ಚು ಒತ್ತನ್ನು ನೀಡಿದರು. ಶಿಕ್ಷಕ ಕೃಷ್ಣಯ್ಯ ಅವರು ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ‌ ರಾಮನಗರಕ್ಕೆ ಕರೆತಂದಿದ್ದರು, ಗಾಂಧೀಜಿ ಅವರು ಭಾಷಣದ ಮೂಲಕ ಜಿಲ್ಲೆಯ ಜನರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದರು ಎಂದು ಉಪನ್ಯಾಸ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಚನ್ನಪಟ್ಟಣದ ಆಟಿಕೆ ತಯಾರಕರಾದ ಶ್ರೀ ಪಾಪಣ್ಣ ಮತ್ತು ಶಿವಣ್ಣ ಹಾಗೂ ಆರ್.ವಿ. ಅನಸೂಯಬಾಯಿ ಅವರ ಕುಂಬಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್, ಜಾನಪದ ಲೋಕದ ಕ್ಯೂರೇಟರ್ ಯು.ಎಂ. ರವಿ, ರಂಗ ಸಹಾಯಕ ಪ್ರದೀಪ್. ಎಸ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *