18 ವರ್ಷ ಮೇಲ್ಪಟ್ಟವರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ : ಎಚ್. ಜೆ. ಮರುಳಾಸಿದ್ದಾರಾಧ್ಯ

ರಾಮನಗರ (hairamanagara.in) : ಭಾರತದ ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದೆ. ಮತದಾನದ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ 18 ವರ್ಷ ಮೇಲ್ಪಟ್ಟವರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಎಚ್.ಜೆ. ಮರುಳಾಸಿದ್ದಾರಾಧ್ಯ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಕಮಿಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
ಆಯೋಜಿಸಲಾಗಿದ್ದ ರಾಷ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ನಿಸ್ವಾರ್ಥ ಹಾಗೂ ಉತ್ತಮ ಮನೋಭಾವ ಹೊಂದಿದವರನ್ನು ನಿಷ್ಪಕ್ಷಪಾತವಾಗಿ ಯಾವುದೇ ಆಮಿಷಗಳಿಗೆ ಒಳಗಾಗದೇ ಆಯ್ಕೆ ಮಾಡಬೇಕು. ಪ್ರತಿಯೊಬ್ಬರೂ ಮತದಾನದ ದಿನದಂದು ತಪ್ಪದೇ ಮತದಾನ ಮಾಡಿ ಎಂದರು.

ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡಿ ಸುಭದ್ರ ದೇಶ ನಿರ್ಮಾಣಕ್ಕೆ ಮತದಾನ ಶಕ್ತಿಯುತ ಅಸ್ತ್ರ. ಜಾತಿ, ಮತ, ಧರ್ಮ, ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು. ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 85-90 ರಷ್ಟು ಮತದಾನವಾಗುತ್ತದೆ. ನಗರ ಪ್ರದೇಶದಲ್ಲಿ ಶೇ 65- 70 ರಷ್ಟು ಮಾತ್ರ ಮತದಾನವಾಗುತ್ತದೆ. ನಗರ ಪ್ರದೇಶದ ಜನರು ಹೆಚ್ಚು ಹೆಚ್ಚು ಮತದಾನದ ಪ್ರಕ್ರಿಯೆಯಲ್ಲಿ ಪಲ್ಗೊಳ್ಳಬೇಕು ಎಂದರು.

ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ‌ ವಿಜೇತರಾದವರನ್ನು ನೋಡಬಹುದು. ಇಲ್ಲಿ ಒಂದು ಮತದ ಪ್ರಾಮುಖ್ಯತೆ ತಿಳಿಯುತ್ತದೆ ಎಂದರು.

ಪ್ರತಿ ವರ್ಷ ಮತದಾರರ ಪಟ್ಟಿಯಲ್ಲಿ 20 ರಿಂದ 25 ಸಾವಿರ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗುತ್ತದೆ. ಇಲ್ಲಿ ಹೆಚ್ಚಿನ‌ ಭಾಗ ಯುವ ಮತದಾರರು ಇರುತ್ತಾರೆ.ಐದು ವರ್ಷಕ್ಕೆ ಲೆಕ್ಕಾಚಾರ ಮಾಡಿದರೆ ಸುಮಾರು ಒಂದು ಲಕ್ಷದಷ್ಟು ಯುವ ಮತದಾರರು ಇರುತ್ತಾರೆ. ಯುವ ಮತದಾರರು ದೇಶದ ಭವಿಷ್ಯ ನಿರ್ಧಾರ ಮಾಡುತ್ತಾರೆ ಎಂದರು.

ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರದೀಪ್ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರು‌ ಸಂವಿಧಾನ ರಚಿಸುವಾಗ ಭಾರತದಲ್ಲಿ ಶೇ. 90 ರಷ್ಟು ಜನ ಕೃಷಿಕರಾಗಿದ್ದರು. ವಿದ್ಯವಂತರ ಸಂಖ್ಯೆ ಕಡಿಮೆ ಇತ್ತು‌. ಆದರೂ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿ ಪ್ರಜಾಪ್ರಭುತ್ವ ಆಡಳಿತ ನೀಡಿದರು. ಯೋಧರು ದೇಶದ ರಕ್ಷಣೆಗಾಗಿ ಜೀವವನ್ನು ಲೆಕ್ಕಿಸದೇ ಗಡಿಯಲ್ಲಿ ಕೆಲಸ‌ಮಾಡಿತ್ತಿದ್ದಾರೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿರುವ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು‌.

ಕಾರ್ಯಕ್ರಮದಲ್ಲಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಸಿದ್ದಲಿಂಗ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್‌, ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತೀಶ್ ಸೇರಿದಂತೆ ಇನ್ನಿತರ ಗಣ್ಯರು‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *