ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರನ್ನು ವಜಾಗೊಳಿಸಲು ಛಲವಾದಿ ಮಹಾಸಭಾ ಒತ್ತಾಯ

ರಾಮನಗರ (hairamanagara.in) : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಲ್ಲಿಕಾರ್ಜುನ್‍ಗೌಡ ಅವರನ್ನು ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಛಲವಾದಿ ಮಹಾಸಭಾ ರಾಮನಗರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಉಚ್ಚ ನ್ಯಾಯಾಲಯದ ಮುಖ್ಯ ನಾಯಾಧೀಶರು ಹಾಗೂ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಮನಗರ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಛಲವಾದಿ ಮಹಾಸಭಾದ ಪದಾಧಿಕಾರಿಗಳು, ರಾಯಚೂರು ಜಿಲ್ಲಾ ಸೆಷನ್ಸ್ ಕೋರ್ಟ್ ಆವರಣದಲ್ಲಿ ದಿನಾಂಕ: 26.01.2022 ರಂದು 73ನೇ ಗಣರಾಜ್ಯೋತ್ಸವ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ಸೆಷನ್ಸ್ ಕೋರ್ಟ್‍ನ ನ್ಯಾಯಾಧೀಶ ಮಲ್ಲಿಕಾರ್ಜುನ್‍ಗೌಡ ಪಟ್ಟು ಹಿಡಿದು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಸರಕಾರಿ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ತೆರವುಗೊಳಿಸಿ ಭಾರತದ ಸಂವಿಧಾನಕ್ಕೆ ಮತ್ತು ಇವರ ವೃತ್ತಿ ಗೌರವಕ್ಕೆ ಅಪಮಾನ ಮಾಡಿದ್ದಲ್ಲದೆ, ಭಾರತರತ್ನ ಮಹಾನಾಯಕ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುತ್ತಾರೆ. ಈ ಸಾರ್ವಜನಿಕ ನಡೆ ದೇಶದ್ರೋಹ ಕೃತ್ಯವಾಗಿದ್ದು ಮತ್ತು ನ್ಯಾಯಾಧೀಶರ ಸ್ಥಾನಕ್ಕೆ ಅನರ್ಹರಾಗಿದ್ದಾರೆ. ಈ ತಕ್ಷಣ ಇವರನ್ನು ಹುದ್ದೆಯಿಂದ ಅನರ್ಹಗೊಳಿಸಿ ಗಡಿಪಾರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಚೆಲುವರಾಜು, ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ರಕಾಶ್, ಮುಖಂಡರಾದ ಶಿವಶಂಕರ್, ಗುರುಮಲ್ಲಯ್ಯ, ಗುಡ್ಡೆ ವೆಂಕಟೇಶ್ ಸಂತೋಷ್, ಶೇಷಪ್ಪ ಇದ್ದರು.

Leave a Reply

Your email address will not be published. Required fields are marked *