ಪತಿ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆ
ರಾಮನಗರ (hairamanagara.in) : ಗಂಡನ ಕಿರುಕುಳ ತಾಳಲಾರದೇ ತವರು ಮನೆಯಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ. ಜಾನ್ಹವಿ (23) ಮೃತ ಗರ್ಭಿಣಿಯಾಗಿದ್ದು, ಕಳೆದ 9 ತಿಂಗಳ ಹಿಂದೆ ಕರ್ಣ ಎಂಬುವನ ಜತೆ ವಿವಾಹವಾಗಿತ್ತು.
ಗಂಡ ಕರ್ಣ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದವನಾಗಿದ್ದು, ಕಳೆದ ಹಲವು ತಿಂಗಳಿಂದ ಹೊಡೆದು ಬಡೆದು ಚಿತ್ರ ಹಿಂಸೆ ಕೊಡುತ್ತಿದ್ದ ಎಂದು ಜಾನ್ಹವಿ ಪೋಷಕರ ಆರೋಪಿಸಿದ್ದಾರೆ.
ಗಂಡನ ಹಿಂಸೆ ತಾಳಲಾಗದೇ ಕಳೆದ ಒಂದು ತಿಂಗಳ ಹಿಂದೆ ತವರು ಮನೆಗೆ ಬಂದಿದ್ದ ಐದು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತವರು ಮನೆಗೆ ಬಂದರೂ ಫೋನ್ ಮಾಡಿ ಗಂಡ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮನೆಯಲ್ಲಿದ್ದ ತಾಯಿ ಕೂಡ ಕೆಲಸಕ್ಕೆಂದು ಹೊರಗೆ ಹೋಗಿದ್ದ ವೇಳೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಐಜೂರು ಪೊಲೀಸ್ ಠಾಣಾ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.