ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದ ಕಲುಷಿತ ನೀರು ಸೇರುವುದನ್ನು ತಪ್ಪಿಸಿ : ಎಚ್.ಸಿ. ಬಾಲಕೃಷ್ಣ
ಮಾಗಡಿ (hairamanagara.in) : ತಿಪ್ಪಗೊಂಡನ ಹಳ್ಳಿ ಜಲಾಶಯದಿಂದ ಮಂಚನಬೆಲೆ ಜಲಾಶಯಕ್ಕೆ ಕಲುಷಿತ ನೀರು ಸೇರುತ್ತಿದ್ದು ಇದು ಎರಡನೇ ಬೈರಮಂಗಲ ಜಲಾಶಯವಾಗುವ ಮುನ್ನಾ ಕೂಡಲೇ ಸರಕಾರ ಕ್ರಮಕೈಗೊಳ್ಳುವಂತೆ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ತಾಲೂಕಿನ ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಸೇರುತ್ತಿರುವ ಕಲುಷಿತ ನೀರನ್ನು ವೀಕ್ಷಿಸಿ ಮಾತನಾಡಿದ ಅವರು, ಮಾಗಡಿ, ಬಿಡದಿ ಪುರಸಭೆ, ಮತ್ತು ಹಂಚಿಕುಪ್ಪೆ, ಮಾಡಬಾಳ್, ಅಜ್ಜನಹಳ್ಳಿ ಗ್ರಾ.ಪಂ.ಗಳ 33 ಗ್ರಾಮಗಳಿಗೆ ಕುಡಿಯುವ ನೀರುಸರಬರಾಜು ಮಾಡುವ ಮಂಚನಬೆಲೆ ಜಲಾಶಯ ಪ್ರಮುಖವಾಗಿದ್ದು ಇದು ಸಂಪೂರ್ಣ ಕಲುಷಿತವಾಗಿದ್ದು ಇದನ್ನು ತಡೆಗಟ್ಟಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಂಚನಬೆಲೆ ಜಲಾಶಯವನ್ನು ಸರಕಾರ ಪ್ರವಾಸಿ ಕೇಂದ್ರ ಮಾಡುವ ಮುನ್ನಾ ಜಲಾಶಯದ ನೀರನ್ನು ಶುದ್ದೀಕರಣ ಮಾಡಲು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬರುವ ಕಲುಷಿತ ನೀರು ತಡೆಗಟ್ಟಿ ಬರುವ ಕಲುಷಿತ ನೀರನ್ನು ಟೆನಾಲ್ ಕೊರೆದು ಬೇರೆಡೆ ಬಿಟ್ಟರೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಇಲ್ಲದಿದ್ದರೆ ಮಂಚನಬೆಲೆ ಜಲಾಶಯ ಎರಡನೇ ಬೈರಮಂಗಲ ಜಲಾಶಯವಾಗುತ್ತದೆ ಈ ಸಂಬಂಧ ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತರಲಾಗಿದೆ ಈ ವೇಳೆ ಜಲಾಶಯದ ನೀರಿನ ಪಿಎಚ್ ಯಾವ ಹಂತದಲ್ಲಿದೆ ಎಂದು ಪರೀಕ್ಷಿಸಿ ನಂತರ ಈ ಬಗ್ಗೆ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಬರುವ ಬಜೆಟ್ ನಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡೋಣ ಎಂದು ತಿಳಿಸಿದ್ದಾರೆ.
ನಾನು ಶಾಸಕನಾದ ವೇಳೆ ಮಂಚನಬೆಲೆ ಜಲಾಶಯದ ಪೈಪುಲೈನ್ ಕಾಮಗಾರಿಯನ್ನು ಅಜ್ಜನಹಳ್ಳಿಯಿಂದ ಅಂಕನಹಳ್ಳಿ ಮಾರ್ಗವಾಗಿ ಕೂಟಗಲ್ಲು ವರೆಗೆ ಪೈಪುಲೈನ್ ಅಳವಡಿಸಿದ್ದೆ, ಕಲುಷಿತ ನೀರನ್ನು ತಡೆಯದೆ ಇದ್ದರೆ ಜನರು ರಾಜಕಾರಣಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಲಿದ್ದಾರೆ,
ಕಣ್ಣ, ಎತ್ತಿನಹೊಳೆ, ಹೇಮಾವತಿ ಜಲಾಶಯ ಮೂಲದಿಂದ ಮಂಚನಬೆಲೆ ಜಲಾಶಯಕ್ಕೆ ನೀರು ಬಂದರೆ ತಿಪ್ಪಗೊಂಡನಹಳ್ಳಿ ಜಲಾಶಯ ನೀರು ನಮಗೆ ಬೇಕಿಲ್ಲ ಈ ಜಲಾಶಯದ ನೀರನ್ನು ಎಷ್ಟೆ ಶುದ್ದೀಕರಣಗೊಳಿಸಿದರು ಕಲುಷಿತ ನೀರು ಬಂದೆಬರುತ್ತದೆ, ಯಲಹಂಕ, ನೆಲಮಂಗಲ, ಜಿಂದಾಲು, ಬೆಂಗಳೂರಿನಿಂದ ಬರುವ ಕಲುಷಿತ ನೀರೆಲ್ಲಾ ತಿಪ್ಪಗೊಂಡನಹಳ್ಳಿಗೆ ಸೇರುತ್ತಿದೆ ಇದನ್ನು ತಡೆಗಟ್ಟಲು ಸರಕಾರದ ಗಮನಕ್ಕೆ ಸೆಳೆಯಲು ಬಿಡದಿ ಮತ್ತು ಮಾಗಡಿ ಪುರಸಭೆ ಸದಸ್ಯರು ಬೇಟಿ ನೀಡಿದ್ದೇವೆ ಎಂದರು.
ಮಂಚನಬೆಲೆ ಜಲಾಶಯವಾಗುವ ಮುನ್ನಾ ಇಲ್ಲಿದ್ದ ಬೇರೆಡೆ ಸ್ಥಳಾಂತರವಾಗಿರುವ ಸುಮಾರು 200 ಕುಟುಂಬಗಳು ಮೀನುಸಾಕಾಣಿಕೆ ನಂಭಿ ಜೀವನ ನಡೆಸುತ್ತಿದ್ದಾರೆ ಈ ಕಲುಷಿತ ನೀರಿನಿಂದ ಅನಾನುಕೂಲವಾಗುತ್ತಿದೆ ಸರಕಾರದ ಮಟ್ಟದಲ್ಲಿ ಚರ್ಚಿಸುತ್ತೇವೆ ಸಮಸ್ಯೆ ಬಗೆಹರಿಸದಿದ್ದರೆ ಕಾನೂನಾತ್ಮಕ ಅಥವ ಪ್ರತಿಭಟನೆ ನಡೆಸುತ್ತೇವೆ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಮಾತಿಗೆ ಗೌರವ ಕೊಟ್ಟು ಕಲುಷಿತ ತಡೆಗಟ್ಟಲು ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು, ಡಿ.ಕೆ.ಸುರೇಶ್, ಎಚ್.ಎಂ.ರೇವಣ್ಣ ಅವರ ಶ್ರಮದಿಂದ ಮಾಗಡಿ-ಬೆಂಗಳೂರಿಗೆ ನಾಲ್ಕು ಪಥದ ರಸ್ತೆಯಾಗಿದ್ದು, ಕೆಂಪೇಗೌಡ ಬಡಾವಣೆಗಳೆಲ್ಲಾ ಬಿಡಿಎ ಬಡಾವಣೆಯಾದರೆ ಬೆಂಗಳೂರಿನಿಂದ ನೈಸ್‍ರಸ್ತೆಗೆ ಬರಲು ಸುಮಾರು ಎರಡುಗಂಟೆ ಸಮಯ ಬೇಕಾಗಿದ್ದು ಈ ಸಂಬಂಧ ಸುಮ್ಮನಹಳ್ಳಿ ಅಥವ ವೆಸ್ಟ್‍ಆಫ್ ಕಾರ್ಡ್ ರಸ್ತೆಯಿಂದ ನೈಸ್ ರಸ್ತೆಯವರೆಗೆ ಎಲಿವೆಟೆಡ್ ಕಾರಿಡಾರ್ ನಿರ್ಮಿಸಿದರೆ ಬೆಂಗಳೂರಿನಿಂದ ಮಾಗಡಿಗೆ ಮುಕ್ಕಾಲು ಗಂಟೆಗೆ ಬರಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ನಾಲ್ಕುಪಥದ ರಸ್ತೆಗೆ ಅರ್ಥಬರುವುದಿಲ್ಲ ಈ ಬಗ್ಗೆ ಸರಕಾರ ಮುಂದಾಗಬೇಕು ಎಂದರು.
ಡಿ.ಕೆ.ಶಿವಕುಮಾರು, ಸಂಸದ ಡಿ.ಕೆ.ಸುರೇಶ್ ಮಂಜೂರು ಮಾಡಿಸಿದ ಹೇಮಾವತಿ ಯೋಜನೆಯ ಎಕ್ಸ್‍ಪ್ರೆಸ್ ಕ್ಯಾನಲ್ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಬರುವ ವಾತಾವರಣವಿದೆ ಆಗ ಎಕ್ಸ್‍ಪ್ರೆಸ್ ಕ್ಯಾನಲ್ ಮಾಡಿಸುತ್ತೇವೆ, ಎಕ್ಸ್‍ಪ್ರೆಸ್ ಕ್ಯಾನಲ್ ಮಾಡದಿದ್ದರೆ ಸರಕಾರ ಹೇಮಾವತಿ ನೀರಾವರಿ ಯೋಜನೆಗೆ ಸರಕಾರ ಬಿಡುಗಡೆಗೊಳಿಸುತ್ತಿರುವ ಹಣ ವೇಸ್ಟಾಗುತ್ತದೆ ಎಂದರು.
ಮೀನುಸಾಗಾಣಿಕೆದಾರರ ಸಂಘದ ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, 25 ವರ್ಷದಿಂದ ಜಲಾಶಯದ ನೀರು ಉತ್ತಮವಾಗಿತ್ತು ತಿಪ್ಪಗೊಂಡನಹಳ್ಳಿ ಜಲಾಶಯದ ಸತ್ತೆಯೆಲ್ಲಾ ಈ ಜಲಾಶಯಕ್ಕೆ ಬಂದು ಮೀನುಗಾರರಿಗೆ ಅನಾನುಕೂಲವಾಗಿದೆ. ಸುಮಾರು 5 ಲಕ್ಷರೂ ವೆಚ್ಚದಲ್ಲಿ ಅರ್ಧದಷ್ಟು ಸತ್ತೆ ಎತ್ತಿಸಿದರು ಪ್ರಯೋಜನವಾಗಿಲ್ಲ, ಈ ಸಮಸ್ಯೆ ಕುರಿತು ಎಚ್.ಸಿ.ಬಾಲಕೃಷ್ಣ ಅವರಿಗೆ ತಿಳಿಸಿದ್ದೇವೆ. ಜಲಾಶಯಕ್ಕೆ ಸೇರುವ ಕಲುಷಿತ ನೀರು ಸತ್ತೆಯನ್ನು ತಡೆಗಟ್ಟಲು ಸರಕಾರ ಮುಂದಾಗಬೇಕು, 250 ಮಂದಿ ಮೀನು ಹಿಡಿದು ಜೀವನ ನಡೆಸುತ್ತಿದ್ದಾರೆ ಸತ್ತೆ ಇರುವುದರಿಂದ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ವೇಳೆ ಇಲ್ಲಿನ ಮೀನುಗಾರರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ನನಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿದ್ದಾರೆ. ರಾಜ್ಯದಲ್ಲಿ ಮೀನುಗಾರರು ಎಲ್ಲಿದ್ದಾರೆ ಎಂದರೆ ಇಲ್ಲಿದ್ದಾರೆ ಎಂದರು.
ಜಿ.ಪಂ.ಮಾಜಿ ಸದಸ್ಯ ವಿಜಯ್ ಕುಮಾರು, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪುರಸಭಾ ಸದಸ್ಯರಾದ ಶಿವರುದ್ರಮ್ಮ ವಿಜಯ್ ಕುಮಾರು, ರಿಯಾಜ್, ಮಂಡಿ ಗುರುಸ್ವಾಮಿ, ಡೂಂಲೈಟ್ ಮೂರ್ತಿ, ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಹಂಚಿಕುಪ್ಪೆ ಗ್ರಾ.ಪಂ. ಅಧ್ಯಕ್ಷ ಡಿ.ಸಿ.ನರಸಿಂಹಯ್ಯ, ಮಾಜಿ ಅಧ್ಯಕ್ಷ ಡೋಲಾ ರಂಗನಾಥ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೀಬೇಗೌಡ, ಉಮೇಶ್ ಇದ್ದರು.