ರಾಮನಗರ ಒನ್ ಗ್ರಾಮೀಣ ಜನರು ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು, ಬಿಲ್‌ ಪಾವತಿಸುವುದು ಬಹಳ ಸುಲಭ

ರಾಮನಗರ (hairamanagara.in) : ಗ್ರಾಮೀಣ ಜನರು ಸರ್ಕಾರದ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಿ ಹೇಗೆ ಎಂದು ಅಲೆದಾಡಬೇಕಿಲ್ಲ. ವಿದ್ಯುತ್, ನೀರಿನ ಬಿಲ್, ಮೊಬೈಲ್ ರಿಚಾಜ್9 ಗಾಗಿ ಸುತ್ತಾಡಬೇಕಿಲ್ಲ. ತಮ್ಮ ಗ್ರಾಮ ಪಂಚಾಯಿತಿಯಲ್ಲಿರುವ ರಾಮನಗರ ಒನ್ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕೆಲಸಗಳು ಆಗುತ್ತದೆ.

ಜೀವನದ ಬಹಳಷ್ಟು ಕೆಲಸಗಳನ್ನು ಇಂದು ಡಿಜಿಟಲ್ ಆನ್ ಲೈನ್ ಮೂಲಕ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರು ಸಹ ಯಾವುದೇ ತೊಂದರೆ ಇಲ್ಲದೆ ಸರ್ಕಾರದ ಸೇವೆಗಳನ್ನು ಪಡೆಯಬೇಕು ಎಂದು ರಾಮನಗರ ಜಿಲ್ಲಾ ಪಂಚಾಯತ್ ಮತ್ತು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ. ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಇವರ ವತಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ಪ್ರಥಮ ಹಂತದಲ್ಲಿ ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಗುರುವಾರ ರಾಮನಗರ ತಾಲೂಕಿನ ಹರಿಸಂದ್ರ ಹುಣಸನಹಳ್ಳಿ ಬಿಳಗುಂಬ ಕೂಟಗಲ್ ಜಾಲಮಂಗಲ ಪಂಚಾಯಿತಿಗಳಲ್ಲಿ ರಾಮನಗರ ಒನ್ ನಾಗರಿಕ ಡಿಜಿಟಲ್ ಸೇವಾ ಕೇಂದ್ರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಚಾಲನೆ ನೀಡಿದರು.

ಚಾಲನೆ ನೀಡಿದ ನಂತರ ಗ್ರಾಮೀಣ ಜನರು ಮುಗ್ದರಾಗಿದ್ದು, ರಾಮನಗರ ಒನ್ ನಲ್ಲಿ ಕೆಲಸ ಮಾಡುವ ಡಿಜಿಟಲ್ ಸಖಿ‌ ಅವರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೇಕಿರುವ ದಾಖಲಾತಿಗಳ ಬಗ್ಗೆ ವಿವರ ನೀಡಿ. ನಿಗಧಿಪಡಿಸಿರುವ ಸೇವಾಶುಲ್ಕವನ್ನು‌ ಮಾತ್ರ ಪಡೆದುಕೊಳ್ಳಿ ಎಂದರು.

ರಾಮನಗರ ಒನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್ ಅವರು ಮಾತನಾಡಿ ರಾಮನಗರ ಒನ್ ನಲ್ಲಿ ಕಾರ್ಯನಿರ್ವಹಿಸಲು ಈಗಾಗಲೇ ಜಿಲ್ಲಾ ಹಂತದಲ್ಲಿ ಸಂಜೀವಿನಿ ಗುಂಪುಗಳ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ರಾಮನಗರ ಒನ್ ನಿಂದ ಸಂಜೀವಿನಿ ಗುಂಪುಗಳ ಬಲವರ್ಧನೆ ಹಾಗೂ ಜೀವನೋಪಾಯ ಕಲ್ಪಿಸಲು‌ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಚಿಕ್ಕ ಸುಬ್ಬಯ್ಯ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರೂಪೇಶ್, ಸಂಜೀವಿನಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಪುಸ್ತಕ ಬರಹಗಾರರು, ಡಿಜಿಟಲ್ ಸಖಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *