ಸರ್ಕಾರದ ಎಲ್ಲಾ ಸೇವೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಜನರಿಗೆ ದೊರೆಯಲಿವೆ : ಇಕ್ರಂ
ರಾಮನಗರ (hairamanagara.in) : ಸ್ಥಳೀಯವಾಗಿ ಸರ್ಕಾರದ ಸೇವೆಗಳು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ರಾಮನಗರ 1 ಸೇವಾ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ರಾಮನಗರ 1 ಸೇವಾ ಕೆಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ರಾಮನಗರ ತಾಲೂಕಿನ ಐದು ಗ್ರಾಪಂ ಕೇಂದ್ರಗಳಲ್ಲಿ ಗುರುವಾರ ಕೇಂದ್ರಗಳ ಉದ್ಘಾಟನೆ ಮಾಡಲಾಗಿದೆ. ಮುಂದೆ ಎಲ್ಲಾ ಗ್ರಾಪಂಗಳಲ್ಲಿ ಕೇಂದ್ರಗಳು ಸೇವೆ ನೀಡಲಿವೆ. ರಾಮನಗರ 1 ಕೇಂದ್ರದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಜನರಿಗೆ ಲಭ್ಯವಾಗಲಿವೆ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೇವೆಗಳು, ಕಂದಾಯ ಇಲಾಖೆಯ ಪಹಣಿ, ವಂಶವೃಕ್ಷ, ಆದಾಯ, ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವು ಸೇವೆಗಳನ್ನು ಕೇಂದ್ರದಲ್ಲಿ ಪಡೆಯಬಹುದಾಗಿದೆ.
ಕೇಂದ್ರದಲ್ಲಿ ಆನ್‍ಲೈನ್ ಖರೀದಿ, ರೈಲ್ವೆ ಟಿಕೇಟ್, ಪಾಸ್‍ಪೋರ್ಟ್ ಸೇವೆಗಳು, ವಿಮಾನ ಯಾನ ಟಿಕೇಟ್ ಸೇರಿದಂತೆ ಹಲವು ಸೇವೆಗಳನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ.ಹೆಚ್ಚುವರಿ ಶುಲ್ಕ ಪಡೆಯದೆ ಸರ್ಕಾರಿ ಶುಲ್ಕ ಪಡೆದು ಜನರಿಗೆ ರಾಮನಗರ 1 ಸೇವಾ ಕೇಂದ್ರ ಸೇವೆ ಒದಗಿಸಲಿದೆ ಇದರಿಂದ ಜನರಿಗೆ ಹೆಚ್ಚಿನ ಸಮಯ ದೂರದ ನಗರ ಪ್ರದೇಶಕ್ಕೆ ದಿನಗಟ್ಟಲೆ ಕಾದು ಸೇವೆ ಪಡೆಯುವುದು ತಪ್ಪುತ್ತದೆ. ಸಾರ್ವಜನಿಕರು ಗ್ರಾಪಂ ಕೇಂದ್ರಕ್ಕೆ ಭೇಟಿ ನೀಡಿ ಸೇವಾ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು, ಸದಸ್ಯರುಗಳು ಕೇಂದ್ರದ ಪ್ರಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಕೇಂದ್ರಗಳಿಂದ ಜನರಿಗೆ ಉತ್ತಮ ಸೇವೆ ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ ಮಾತನಾಡಿ ಬೆಂಗಳೂರು 1 ಸೇವೆಯಲ್ಲಿ ಪಡೆಯುತ್ತಿರುವ ಸೇವೆಗಳನ್ನೇ ಇನ್ನೂ ರಾಮನಗರ 1 ಸೇವೆಯಲ್ಲೂ ಜನರು ಪಡೆಯಬಹುದಾಗಿದೆ. ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ರಾಮನಗರ 1 ಕೇಂದ್ರ ಸ್ಥಾಪಿಸಲಾಗುತ್ತದೆ. ಪ್ರಾಯೋಗಿಕವಾಗಿ 5 ಕೇಂದ್ರಗಳಲ್ಲಿ ಚಾಲನೆಗೊಂಡಿವೆ. ಕಂಪ್ಯೂಟರ್ ಜ್ಞಾನ ಹೊಂದಿರುವ 20 ಜನರಿಗೆ ಸೇವಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಒಂದು ತಿಂಗಳ ತರಬೇತಿ ನೀಡಿ ಸೇವೆ ನೀಡಲು ಅಣಿಗೊಳಿಸಲಾಗಿದೆ.
ಸಾರ್ವಜನಿಕರು ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಭೇಟಿ ನೀಡಿ ಸಂಧ್ಯಾಸುರಕ್ಷೆ, ಅಂಗವಿಕಲರ ವೇತನ, ಪಹಣಿ, ವಿಧವಾ ಮಾಸಾಸನ, ಸರ್ಕಾರದ ಹಲವಾರು ಸೇವೆಗಳು, ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು, ಆನ್‍ಲೈನ್ ಖರೀದಿ, ಮೊಬೈಲ್ ರೀಚಾರ್ಜ್ ಸೇರಿದಂತೆ ಹಲವಾರು ಸೇವೆಗಳು ಮನೆ ಬಾಗಿಲಬಳಿ ಸಿಗಲಿವೆ. ಕೇಂದ್ರಗಳಿಗೆ ಯಾವುದೇ ಅಡಚಣೆ ಇಲ್ಲದಂತೆ ಸೇವೆ ಒದಗಿಸಲು ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ರೂಪೇಶ್‍ಕುಮಾರ್, ಪಿಡಿಓ ಬಿ.ಪಿ. ಕುಮಾರ್, ಗ್ರಾಪಂ ಅಧ್ಯಕ್ಷೆ ಮಂಜುಳ ವರದರಾಜು, ಉಪಾಧ್ಯಕ್ಷ ಪುಟ್ಟಸ್ವಾಮಿ ಸದಸ್ಯರಾದ ಹೆಚ್.ಎಸ್. ರಾಮಣ್ಣ, ಮಹೇಶ್, ಬೈರೇಗೌಡ, ಸುನಿತಾಬಾಯಿ, ಮುತ್ತುರಾಜು, ಸೋಮೇಶ್, ಹೇಮಾವತಿ ನಂಜುಂಡಯ್ಯ, ಪುನೀತ್‍ಕುಮಾರ್, ಲಕ್ಷ್ಮಮ್ಮ ಇದ್ದರು.