ಹರಟೆಕಟ್ಟೆಯಾದ ನಗರಸಭೆ ವಿಶೇಷ ಸಭೆ

ರಾಮನಗರ (hairamanagara.in) : ತುಮ್ಹೆ ಕಿಸೆ, ಕ್ಯಾ ಬೋಲ್ರಿಸೊ ಸಮಜ್ ಮೆ ನಯ್ ಆರೆ, ಉಸೆ ಬೋಲೋ…ಅರೆ ಭಾಯ್ ಉನೊ ಕೋನ್ ಮಾಲೂಮ್ ಕ್ಯಾ, ಇನ್ಕೆ ರಿಷ್ತೆಂಧಾರ…ಹೀಗೆ ಅನಗತ್ಯ ವಿಷಯಗಳ ಚರ್ಚೆ ನಡುವೆ ಗೊಳ್ ಎಂಬ ನಗೆ.
ಅಧ್ಯಕ್ಷರ ಏರು ಧ್ವನಿ, ಕೆಲ ಸದಸ್ಯರು ಆಗಾಗ ಎದ್ದು ನಿಂತು ಹಾಜರಿ ಹಾಕುವುದು. ಉಳಿದವರು ನಾವು ಇದ್ದೇವೆ ಎಂಬಂತೆ ಗದರುವುದು. ಆದರೆ ಗಂಭೀರ ವಿಷಯಗಳ ಚರ್ಚೆ ಮಾತ್ರ ಶೂನ್ಯ.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ವಿಶೇಷ ಸಭೆಯ ಮುಖ್ಯಾಂಶಗಳಿವು. ಅಷ್ಟಕ್ಕೂ ವಿಶೇಷ ಸಭೆಯನ್ನು ಕುಡಿಯುವ ನೀರು ಹಾಗೂ ಒಳಚರಂಡಿ ವಿಚಾರವಾಗಿ ಚರ್ಚಿಸುವ ಸಲುವಾಗಿ ಕರೆಯಲಾಗಿತ್ತು.
ಸಭೆಯಲ್ಲಿ ಚರ್ಚಿಸಲು ನಗರದಲ್ಲಿನ ಹಲವು ಸವಾಲು ಸಮಸ್ಯೆಗಳಿದ್ದವು. ಆದರೆ ಇಲ್ಲಿನ ಸದಸ್ಯರು ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕುರಿತು ವಿಶೇಷ ಸಭೆ ಕರೆದಿದ್ದರು. ಈ ಸಭೆಯಲ್ಲಿಯೂ ಸದಸ್ಯರು ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಲೇ ಇಲ್ಲ.

ಯುಜಿಡಿ ಕಳಪೆ ಕೆಲಸ, ಕುಡಿವ ನೀರಿನ ಕೊರತೆ, ಚರಂಡಿ ಕಾಮಗಾರಿಗಳ ಅರೆಬರೆ, ಹಲವು ಯೋಜನೆಗಳಿಗೆ ಹಿನ್ನಡೆ, ತೋಪೆದ್ದ ರಸ್ತೆಗಳು, ಬೀದಿ ದೀಪಗಳ ನಿರ್ವಹಣೆ ಕೊರತೆ ಹೀಗೆ ಸಾಲು ಸಾಲು ವಿಷಯಗಳು ಜನರನ್ನು ದಿನವೂ ಬಾಧಿಸುತ್ತಿವೆ.
ಇಷ್ಟಿದ್ದರೂ ವಿಶೇಷ ಸಭೆಯಲ್ಲಿ ಏನು ಮಾಡಬೇಕು? ಏನು ಕೇಳಬೇಕು? ಎಂಬ ಗೊಂದಲದಲ್ಲಿಯೇ ಇದ್ದ ನಗರಸಭೆ ಸದಸ್ಯರು, ಕೊನೆವರೆಗೂ ನಕ್ಕಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ಕೆಲ ಸದಸ್ಯರು ಏನನ್ನಾದರೂ ಕೇಳಲು ಮುಂದಾದರೆ, ಅಧ್ಯಕ್ಷೆ ಪಾರ್ವತಮ್ಮ ಏರು ಧ್ವನಿಯಲ್ಲಿ ಉತ್ತರ ನೀಡುತ್ತಿದ್ದರು. ಉಳಿದಂತೆ ಫೈರೋಜ್, ನಿಜಾಮುದ್ದೀನ್ ಷರೀಫ್, ಸೈಯದ್ ಮಜ್ಮಿಲ್ ಆಗಾ , ಕೆ.ರಮೇಶ್ ಅಲ್ಲಲ್ಲಿ ಸದ್ದು ಮಾಡಿದರು.
ಸದಸ್ಯರು ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ಆಯುಕ್ತ ನಂದಕುಮಾರ್ ಉತ್ತರಿಸುವಂತೆ ಸೂಚಿಸಿದಾಗ ಅಧಿಕಾರಿಗಳು ಒರಟಾಗಿ ನಡೆದುಕೊಳ್ಳುತ್ತಿದ್ದರು. ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳಬೇಕಾದ ಅಧ್ಯಕ್ಷೆ ಪಾರ್ವತಮ್ಮ ಮತ್ತು ಸದಸ್ಯರೆಲ್ಲರು ಮೂಕವಿಸ್ಮಿತರಾಗಿ ನೋಡುತ್ತಿದ್ದರು. ನಗರದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದ್ದ ಸಭೆ, ಹರಟೆ ಕಟ್ಟೆಯಂತೆ ಕಂಡುಬಂದಿತು.

Leave a Reply

Your email address will not be published. Required fields are marked *