ತೆಂಗಿನಕಲ್ಲು ಗ್ರಾಮದ ಕೆರೆಗೆ ಬಾಗಿನ ನೀಡಲು ಕಾಂಗ್ರೆಸ್-ಜೆಡಿಎಸ್ ಕಿತ್ತಾಟ
ರಾಮನಗರ (hairamanagara.in) : ತಾಲ್ಲೂಕಿನ ಕೈಲಾಂಚ ಹೋಬಳಿಯ ತೆಂಗಿನಕಲ್ಲು ಗ್ರಾಮದ ಕೆರೆಯು ಭರ್ತಿಯಾಗಿದೆ. ಈ ಕೆರೆ ತುಂಬಿಸುವ ಯೋಜನೆಯ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಸದ್ಯ ಪೈಪೋಟಿ ಶುರುವಾಗಿದೆ. ಸಂಸದ ಡಿ.ಕೆ. ಸುರೇಶ್ ಅವರ ಆಸಕ್ತಿಯಿಂದಾಗಿ ಈ ಯೋಜನೆ ಜಾರಿಗೊಂಡಿದೆ ಎಂದು ಹೇಳಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದೇ 29ರಂದು ಡಿ.ಕೆ. ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಕರೆಯಿಸಿ ಕೆರೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ತಾಲ್ಲೂಕು ಆಡಳಿತದ ಅನುಮತಿ ಕೋರಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಆಸಕ್ತಯಿಂದ ಈ ಯೋಜನೆ ಜಾರಿಗೊಂಡು ನೀರು ಹರಿದಿದೆ. ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರವೇನು ಇಲ್ಲ ಎಂದು ಜೆಡಿಎಸ್ ಆರೋಪಿಸಿದೆ. ಹೀಗೆ ಕೆರೆ ವಿಚಾರಕ್ಕೆ ಎರಡೂ ಪಕ್ಷಗಳ ಮುಖಂಡರ ನಡುವಿನ ಕಿತ್ತಾಟ ಗಮನಿಸಿದ ತಾಲ್ಲೂಕು ಆಡಳಿತ ಸಂಘರ್ಷ ತಪ್ಪಿಸುವ ಸಲುವಾಗಿ, ಕೋವಿಡ್ ಕಾರಣ ನೀಡಿ ಶುಕ್ರವಾರ ನಿಷೇಧಾಜ್ಞೆ ಆದೇಶ ಜಾರಿಗೊಳಿಸಿದೆ ಎನ್ನಲಾಗಿದೆ.

ಶುಕ್ರವಾರ ಸಂಜೆಯಿಂದಲೇ ಕೈಲಾಂಚ ಹೋಬಳಿಯ ತೆಂಗಿನಕಲ್ಲು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಂಡಿದ್ದು, ಇದೇ 30ರವರೆಗೂ ಜಾರಿಯಲ್ಲಿ ಇರಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದವರೆಗೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಹೈಕೋರ್ಟ್ ಸಹ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿತ್ತು. ಜನಸಂದಣಿ ಸೇರುವ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಎಚ್ಚರಿಸಿತ್ತು. ಈ ನಡುವೆಯೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅನುಮತಿ ಕೋರಿತ್ತು. ಆದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತೆ ಇಲ್ಲ ಎಂದು ರಾಮನಗರ ತಹಶೀಲ್ದಾರ್ ವಿಜಯ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
27 ಕೆರೆಗಳನ್ನು ತುಂಬಿಸುವ ಕಾರ್ಯ : ಕಾವೇರಿ ನೀರಾವರಿ ನಿಗಮದ ವತಿಯಿಂದ 2015–16ನೇ ಸಾಲಿನಲ್ಲಿ ₹145 ಕೋಟಿ ವೆಚ್ಚದಲ್ಲಿ ಕನಕಪುರ ತಾಲ್ಲೂಕಿನ 24 ಹಾಗೂ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ, ನೆಲಮಲೆ, ತೆಂಗಿನಕಲ್ಲು ಸೇರಿ ಒಟ್ಟು 27 ಕೆರೆಗಳನ್ನು ಪೈಪ್‌ಲೈನ್ ಮೂಲಕ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಬರೋಬ್ಬರಿ ಆರು ವರ್ಷಗಳ ಬಳಿಕ ಈ ಯೋಜನೆಯು ಕಾರ್ಯರೂಪಕ್ಕೆ ಬಂದಿದ್ದು, ಸದ್ಯ ಕೆರೆಗಳಿಗೆ ನೀರು ಹರಿದಿದೆ. ಮಳವಳ್ಳಿ ತಾಲ್ಲೂಕಿನ ಶಿಂಷಾ ನದಿ ಮೂಲಕ 82.85 ಕ್ಯುಸೆಕ್ ನೀರನ್ನು ಏತ ನೀರಾವರಿ ಮುಖೇನ ಮೇಲಕ್ಕೆತ್ತಿ ಕನಕಪುರ ತಾಲ್ಲೂಕಿನ ಕಂಚನಹಳ್ಳಿ ಪಂಪ್‌ಹೌಸ್‌ಗೆ ತಂದು, ಅಲ್ಲಿಂದ ಕಬ್ಬಾಳು ಪಂಪ್‌ಹೌಸ್‌ಗೆ ನೀರು ಹರಿಸಿ ಪೈಪ್‌ಲೈನ್ ಮೂಲಕ 27 ಕೆರೆಗಳನ್ನು ತುಂಬಿಸುವ ಕಾರ್ಯ ನಡೆದಿದೆ.