ಸೋಲೂರು : ಈಡಿಗ ಮಹಾಸಂಸ್ಥಾನ ಮಠಕ್ಕೆ ಶ್ರೀವಿಖ್ಯಾನಂದ ಸ್ವಾಮೀಜಿ ನೂತನ ಪೀಠಾಧಿಪತಿ
ಮಾಗಡಿ (hairamanagara.in) : ತಾಲೂಕಿನ ಸೋಲೂರು ಈಡಿಗ ಮಹಾಸಂಸ್ಥಾನ ಮಠಕ್ಕೆ ಫೆ. 2 ರಂದು ಶ್ರೀವಿಖ್ಯಾನಂದ ಸ್ವಾಮೀಜಿ ಅವರನ್ನು ನೂತನ ಪೀಠಾಧಾರಣೆ ಮಾಡುವುದಾಗಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ರಾಜ್ಯಾಧ್ಯಕ್ಷ ಡಾ.ಎಂ. ತಿಮ್ಮೇಗೌಡ ಹೇಳಿದರು.
ತಾಲೂಕಿನ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 7 ವರ್ಷಗಳಿಂದ ನಮ್ಮ ಸಮುದಾಯಕ್ಕೆ ಶ್ರೀಗಳು ಇಲ್ಲದ ಕಾರಣ ಖಾಲಿ ಇದ್ದು ಸಮಾಜಕ್ಕೆ ಶ್ರೀವಿಖ್ಯಾನಂದ ಸ್ವಾಮೀಜಿ ಅವರು ಸೂಕ್ತ ಎಂದು ಸಮುದಾಯ ಗುರುತಿಸಿ ಪೀಠಾಧಿಕಾರಿಗಳನ್ನಾಗಿ ಮಾಡಲಾಗುತ್ತಿದೆ, ಸಮುದಾಯದ 26 ಪಂಗಡಗಳನ್ನು ಒಗ್ಗೂಡಿಸಿಕೊಂಡು, ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ರಾಜ್ಯದ ಪ್ರತಿ ತಾಲೂಕುಗಳಲ್ಲಿ ಶಾಲೆ ಆರಂಭಿಸಲಾಗುವುದು ಇದಕ್ಕೆ ಗುರುಗಳ ಅವಶ್ಯಕತೆಯಿಂದಾಗಿ ಗುರು ಇದ್ದರೆ ಗುರಿ ಮುಟ್ಟಬಹುದು ಎಂಬ ಅಭಿಲಾಷೆಯಿಂದ ಶ್ರೀವಿಖ್ಯಾನಂದ ಸ್ವಾಮೀಜಿ ಅವರಿಗೆ ಜವಬ್ದಾರಿ ನೀಡಲು ಪೀಠಾದಾರಣೆ ನಡೆಸಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.
ನೂತನ ಪೀಠಾಧಿಪತಿ ಶ್ರೀವಿಖ್ಯಾನಂದ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳ ಪರಂಪರೆಯಂತೆ ಆರ್ಯ ಈಡಿಗ ಮಹಾಸಂಸ್ಥಾನದಲ್ಲಿ ಜವಬ್ದಾರಿಯುತವಾಗಿ , ಶಿಸ್ತು ಬದ್ದವಾಗಿ, ಕ್ರಮವಾಗಿ ನಿಭಾಯಿಸಲು ಸಂಕಲ್ಪಮಾಡಿದ್ದೇವೆ. ಜನಾಂಗವನ್ನು ಸಂಘಟಿಸುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಲಾಗುವುದು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು, 26 ಪಂಗಡಗಳ ಕಟ್ಟಕಡೆಯ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿ ಸಮಾಜದಲ್ಲಿ ಮುಂದೆ ತಂದು ಅವರಿಗೆ ಉತ್ತಮ ಉದ್ಯೋಗ ಕಲ್ಪಿಸಿ ಜೀವನ ಶೈಲಿ ನೀಡಲಾಗುವುದು ಇದಕ್ಕೆ ಸಮುದಾಯವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಪಟ್ಟಾಭಿಷೇಕ ನಂತರ ಚಾಲನೆ ನೀಡಲಾಗುವುದು ಎಂದರು.
ವಕೀಲ ರಕ್ಷೀತ್ ಮಾತನಾಡಿ, ನೂತನ ಶ್ರೀಗಳು ಕಳೆದ ಆರು ತಿಂಗಳಿಂದ ರಾಜ್ಯವ್ಯಾಪ್ತಿಯ ಜಿಲ್ಲೆ, ತಾಲೂಕುಗಳಲ್ಲಿ ಸುಮಾರು 5 ಸಾವಿರ ಕಿಲೋಮೀಟರು ಸಂಚರಿಸಿ ಎಲ್ಲೆಡೆ ಸಭೆ ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮ ರೂಪಿಸಲು ಪೂರ್ವತಯಾರಿ ನಡೆಸಲಾಗಿತ್ತು, ಈ ಸಂಬಂಧ ಕರೋನಾದಿಂದಾಗಿ ಸರಳವಾಗಿ ಆಚರಿಸಲಾಗುವುದು, ಈಡಿಗ ಸಂಘ ಪ್ರಾರಂಭವಾಗಿ 75 ವರ್ಷ ಕಳೆದಿದ್ದು ಕೊವಿಡ್ ಬಳಿಕ ವಿಜೃಂಭಣೆ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಸಮುದಾಯದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಮಾಜಿ ಸಂಸದರು, ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದರು.
ಬಾಕ್ಸ್ : ಶ್ರೀವಿಖ್ಯಾನಂದ ಸ್ವಾಮೀಜಿ ಮಂಗಳೂರಿನ ಕುಪ್ಪೆಪದವಿನ ಸನ್ನಿಕಾಯಿಯಲ್ಲಿ ಮೇ. 25 1967 ರಂದು ಗೋಪಾಲ ಪೂಜಾರಿ, ಶಾಲಿನಿ ದಂಪತಿಯ ಪ್ರಥಮ ಪುತ್ರರಾಗಿ ಜನಿಸಿದ್ದು, ಕಿರಿಯ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಸೆಳೆತ, ಪರೋಪಕಾರ ಗುಣಗಳಿದ್ದ ಅವರಿಗೆ ವೈದ್ಯವೃತ್ತಿಯಲ್ಲಿ ತರಬೇತಿ ಪಡೆದಿದ್ದಾರೆ.
ಟ್ರಸ್ಟಿ ಸುಧಾಕರ್, ಮ್ಯಾನೇಜರು ಚಿದಾನಂದ್ ಪ್ರಮುಖವಾಗಿದ್ದರು.