ಹವಾಮಾನ ಬದಲಾವಣೆ : ತಡವಾಗಿ ಆರಂಭವಾಗುತ್ತಿರುವ ಮಾವಿನ ಋತು

ಈ ವರ್ಷ ಹೂ ಬಿಡುವ ಪ್ರಮಾಣ ಕುಂಠಿತಗೊಂಡಿದೆ. ಸತತವಾಗಿ ಸುರಿದ ಹಿಂಗಾರು ಮಳೆ, ಈಗ ಇಬ್ಬನಿ ಬೀಳುತ್ತಿರುವುದು ಇದಕ್ಕೆ ಕಾರಣ. ಜನವರಿ ಅಂತ್ಯದ ವೇಳೆಗೆ ಅಡಿಕೆ ಗಾತ್ರದಷ್ಟು ಮಾವಿನ ಮಿಡಿ ಕಾಣಿಸಬೇಕಿತ್ತು. ಆದರೆ, ಈಗ ಗಿಡಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿವೆ. ಇನ್ನೂ ಚುಗುರು, ಹೂ ಉದುರುವ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಇಳುವರಿಯೂ ಕುಸಿಯಲಿದೆ. ಮಾರ್ಚ್ ವೇಳೆಗೆ ಅಡ್ಡ ಮಳೆ ಬೀಳುವ ಸಂಭವವೂ ಇದೆ. ಇದು ಮಾವು ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ರಾಮನಗರ (hairamanagara.in) : ಹಣ್ಣುಗಳ ರಾಜ ಮಾವು. ಹೊಸ ವರ್ಷಕ್ಕೆ ಚಿಗುರು ಕಾಣಿಸಿಕೊಂಡು, ಬಂಗಾರ ವರ್ಣದ ಹೂಗಳಿಂದ ಮರಕ್ಕೆ ಶೋಭೆ ತುಂಬುತ್ತಿತ್ತು. ಆದರೆ, ಈ ವರ್ಷ ಜನವರಿ ಕೊನೆ ವಾರದಲ್ಲಿ ಸಣ್ಣ ಮೊಗ್ಗು ಬಿಟ್ಟು, ಮಾವಿನ ಋತುವನ್ನು ಮುಂದೂಡಿದೆ.
ವರ್ಷಾಂತ್ಯದ ತನಕ ಸತತ ಸುರಿದ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದರೆ, ಈಗ ಇಬ್ಬನಿಯ ಪ್ರಭಾವದಿಂದ ಮರಗಳು ಮತ್ತಷ್ಟು ಶೀತಕ್ಕೆ ಸಿಲುಕಿವೆ. ಇದು ಮಾವು ಬೆಳೆ ಗಾರರಲ್ಲಿ ಆತಂಕ ಸೃಷ್ಟಿಸಿದೆ.
ಅಕಾಲಿಕ ಮಳೆಯಿಂದ ಮಾವಿನ ಮರಗಳು ತಡವಾಗಿ ಹೂ ಬಿಡುತ್ತಿವೆ. ಈಗಾಗಲೇ ಮರದ ಚಿಗುರೆಲೆ ಕಾಣಿಸಿಕೊಂಡು, ಹೂವಿ ನಿಂದ ಸಮೃದ್ಧ ಆಗಬೇಕಿತ್ತು. ಆದರೆ, ಬೇಸಿಗೆ ಕಾಲಿಟ್ಟರೂ ಮರಗಳಿಗೆ ಬೇಕಾದ ಉಷ್ಣಾಂಶ ಸಕಾಲದಲ್ಲಿ ಸಿಗಲಿಲ್ಲ. ಮಾವಿಗೆ ಋತುಮಾನ ತಡವಾಗಿ ಆರಂಭವಾಗಿದೆ. ಹಾಗಾಗಿ, ಹೂವು ಬಿಡುವ ಪ್ರಮಾಣವೂ ಕುಠಿತ ಗೊಂಡಿದ್ದು, ರೈತರ ಚಿಂತೆ ಹೆಚ್ಚಿಸಿದೆ.

ಮಾವಿನ ಕೆಲವು ತಳಿಗಳು ವರ್ಷ ಪೂರ್ತಿ ಹೂ ಬಿಡುತ್ತವೆ. ಕೆಲವು ವರ್ಷ ಬಿಟ್ಟು ವರ್ಷ ಉತ್ತಮ ಫಸಲು ನೀಡು ತ್ತವೆ. ಆದರೆ, ಈ ವರ್ಷ ಹವಾಮಾನ ಬದಲಾವಣೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕಳೆದ ವರ್ಷ ಉತ್ತಮ ಬೆಳೆ ಬಂದರೂ, ಲಾಕ್‌ಡೌನ್ ಮತ್ತು ಕೋವಿಡ್‌ನಿಂದಾಗಿ ಬೆಲೆ ಸಿಗಲಿಲ್ಲ. ಈ ಬಾರಿ ತುಸು ಆದಾಯ ಬರುವ ನಿರೀಕ್ಷೆ ಇತ್ತು. ಬೆಳೆ ಕೈ ಹಿಡಿಯುವ ಸಾಧ್ಯತೆ ಕಾಣಿಸುತ್ತಿಲ್ಲ.
ಮೂಡು ಗಾಳಿ ಬೀಸಿದರೆ, ಹೆಚ್ಚಿನ ಹೂ ಬಿಡುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರದ್ದು. ಆದರೆ, ಗಾಳಿ ಬೀಸಲಿಲ್ಲ. ವ್ಯಾಪಾರಿಗಳು ಹೂ ನೋಡಿ ಗುತ್ತಿಗೆ ಪಡೆಯುವ ಸಮಯ ಮೀರಿತು. ಚಳಿ ಹೆಚ್ಚಾಯಿತು. ಗಿಡಗಳಲ್ಲಿ ಅಕಾಲಿಕ ಹೂ ಕಾಣಿಸಿಕೊಂಡಿದೆ. ಫಸಲು ಕಳೆದ ವರ್ಷಕ್ಕಿಂತ ಕಡಿಮೆಯಾಗುವುದು ಖಚಿತವಾಗಿದೆ.

ಈ ವರ್ಷ ಹೂ ಬಿಡುವ ಪ್ರಮಾಣ ಕುಂಠಿತಗೊಂಡಿದೆ. ಸತತವಾಗಿ ಸುರಿದ ಹಿಂಗಾರು ಮಳೆ, ಈಗ ಇಬ್ಬನಿ ಬೀಳುತ್ತಿರುವುದು ಇದಕ್ಕೆ ಕಾರಣ. ಜನವರಿ ಅಂತ್ಯದ ವೇಳೆಗೆ ಅಡಿಕೆ ಗಾತ್ರದಷ್ಟು ಮಾವಿನ ಮಿಡಿ ಕಾಣಿಸಬೇಕಿತ್ತು. ಆದರೆ, ಈಗ ಗಿಡಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿವೆ. ಇನ್ನೂ ಚುಗುರು, ಹೂ ಉದುರುವ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಇಳುವರಿಯೂ ಕುಸಿಯಲಿದೆ. ಮಾರ್ಚ್ ವೇಳೆಗೆ ಅಡ್ಡ ಮಳೆ ಬೀಳುವ ಸಂಭವವೂ ಇದೆ. ಇದು ಮಾವು ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *