ವಿಶ್ವವೇ ಗಾಂಧೀಜಿ ಅವರ ತತ್ವಗಳನ್ನು ಗೌರವಿಸುತ್ತದೆ : ಡಾ.ಕೆ. ರಾಕೇಶ್ ಕುಮಾರ್

ರಾಮನಗರ (hairamanagara.in) : ಮಹಾತ್ಮ ಗಾಂಧೀಜಿ ಅವರು ಪಾಲಿಸಿದ ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹದ ಮೂಲಕ ಹೋರಾಟವನ್ನು, ಇಂದಿಗೂ ಭಾರತ ದೇಶ ಮಾತ್ರವಲ್ಲ ವಿಶ್ವದಲ್ಲೇ ಗೌರವಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.
ಭಾನುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹುತಾತ್ಮರ ದಿನಾಚರಣೆಯ ಅಂಗವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಾಣತೆತ್ತ ಹುತಾತ್ಮರಿಗೆ 2 ನಿಮಿಷಗಳ ಕಾಲ ಮೌನಾಚರಣೆ ಮಾಡಿ ನಂತರ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಮಹಾತ್ಮ ಗಾಂಧೀಜಿ ಅವರು ಕಾಲ್ನಡಿಗೆಯಲ್ಲಿ ದಂಡಿ ಯಾತ್ರೆ ನಡೆಸಿ ಬ್ರಿಟಿಷರಿಗೆ ಭಾರತದ ಶಕ್ತಿಯನ್ನು ತೋರಿಸಿದರು. ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ಹೋರಾಟಗಾರರು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅವರ ತತ್ವ ಮತ್ತು ಆದರ್ಶಗಳು ನಮಗೆ ದಾರಿ ದೀಪ ಎಂದರು.
ಸುಭಾಷ್ ಚಂದ್ರಬೋಸ್ ಅವರು ವಿಶ್ವವನ್ನು ಸುತ್ತಾಡಿ ಹಲವಾರು ನಾಯಕರೊಂದಿಗೆ ಚರ್ಚಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರಲು ತಮ್ಮ ಪ್ರಾಣವನ್ನೆ ದೇಶಕ್ಕಾಗಿ ನೀಡಿದರು.ಮಹಾತ್ಮ ಗಾಂಧೀಜಿ ಅವರು ತಿಳಿಸಿದ ಪರಿಸರ ಹಾಗೂ ನಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರತಿಯೊಬ್ಬರು ದೇಶಭಕ್ತರಾದರು. ಬ್ರಿಟಿಷರು ನಮ್ಮನ್ನು ಏಕೆ ಆಳಬೇಕು. ನಾವು ಸ್ವಾತಂತ್ರ್ಯ ರಾಗಿ ನಮ್ಮದೇ ಆದ ಸಂವಿಧಾನ ವನ್ನು ಜಾರಿಗೆ ತರಬೇಕು ಎಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ, ಮತ, ಲಿಂಗ, ಶ್ರೀಮಂತ-ಬಡವ ಎಂಬ ಬೇದ ಭಾವವಿರಲಿಲ್ಲ ಎಂದರು.
ಸ್ವಾತಂತ್ರ್ಯ ಕ್ಕೂ ಮೊದಲು ಜನರು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ತಿಳಿದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳ ತ್ಯಾಗವನ್ನು ನೆನಪಿಸಿಕೊಂಡು, ನಾವು ನಮ್ಮ ಜೀವನದಲ್ಲಿ ದೇಶ ಹಾಗೂ ಸಮಾಜಕ್ಕೆ ಯಾವ ರೀತಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಚಿಂತಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ ನಾವು ಇಂದು ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಬದುಕುತ್ತಿದ್ದೇವೆ. ಡಾ.ಬಿ.ಆರ್ ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದ ಅಡಿಯಲ್ಲಿ ಸ್ವಾತಂತ್ರವಾಗಿ, ಸಮಾನತೆಯ ಅಡಿಗಲ್ಲಿನ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರು.

ಬ್ರಿಟಿಷರು ಭಾರತೀಯರ ಹಕ್ಕು ಬಾಧ್ಯತೆಗಳನ್ನು ಮೊಟಕುಗೊಳಿಸಿ ,ಸರ್ವಾಧಿಕಾರಿಗಳಾಗಿ ಆಳ್ವಿಕೆ ಮಾಡುತ್ತಿದ್ದರು. ನಮ್ಮ ಭಾರತ ಸ್ವಾತಂತ್ರ್ಯವಾಗಬೇಕು ಎಂಬ ಕನಸಿನಲ್ಲಿ ಅಪಾರ ಜನರು ಹುತಾತ್ಮರಾಗಿದ್ದಾರೆ. ಭಾರತದ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಪಂಜಾಬ್‍ನ ಅಮೃತ್‍ಸರದಲ್ಲಿ ನಡೆದ ಜಲಿಯಾನ್ ವಾಲಾಭಾಗ್ ದುರಂತ ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು.
ಸ್ವಾತಂತ್ರ್ಯ ದ ಹಲವಾರು ಹೋರಾಟಗಳು ಪಂಜಾಬ್ ಹಾಗೂ ರಾಷ್ರ್ಟದ್ಯಾಂತ ನಡೆಯುತ್ತದೆ. ಹೋರಾಟದ ಸಮಯದಲ್ಲಿ ಪಂಜಾಬ್‍ನಲ್ಲಿ ಸಾರ್ವಜನಿಕರು ಎಲ್ಲಿಯೂ ಗುಂಪು ಕಟ್ಟಿಕೊಳ್ಳಬಾರದು ಎಂಬ ಆದೇಶವನ್ನು ಬ್ರಿಟಿಷರು ಜಾರಿಗೆ ತರುತ್ತಾರೆ. ಪಂಜಾಬ್‍ನಲ್ಲಿ ಉದ್ಯಾನವನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚಿಸಲು ಸೇರುತ್ತಾರೆ. ಗುಂಪುಗೂಡಬಾರದು ಎಂಬ ಆದೇಶವಿದ್ದರು ಗುಂಪುಗೂಡಿರುವುದನ್ನು ಕಂಡು ಜನರಲ್ ಡಯರ್ ಎಂಬುವವರು ಗುಂಡಿನ ಸುರಿಮಳೆಯನ್ನು ಸುರಿಸುತ್ತಾರೆ ಅಂದಾಜು 379 ಜನರು ಹುತಾತ್ಮರಾಗುತ್ತಾರೆ ಎಂದರು.
ಚೌರ ಚೌರಿ ಘಟನೆ, ಜಲಿಯನ್ ವಾಲಾಬಾಗ್ ಇಂತಹ ಹಲವಾರು ಘಟನೆಗಳು ಸ್ವಾತಂತ್ರಕ್ಕಾಗಿ ಹೋರಾಟ ಮಾಡುವಂತ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಅವರು ಸ್ವಾತಂತ್ರ್ಯ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡು ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಯಾವುದೇ ಹಿಂಸೆ ಇಲ್ಲೆದೆ ಅಹಿಂಸತ್ಮಾಕವಾಗಿ ಬ್ರಿಟಿಷರ ವಿರುದ್ಧಾಗಿ ಹೋರಾಟ ಮಾಡಬೇಕು, ಸ್ವಾತಂತ್ರ್ಯ ಪಡೆಯಬೇಕು ಎಂದು ಅಹಿಂಸಾತ್ಮಕ ರೇಖೆಯಲ್ಲಿ ಗಾಂಧೀಜಿಯವರು ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ಸಿಗುತ್ತದೆ. ಸಂವಿಧಾನ ಅಂಗೀಕಾರಗೊಂಡು ಭಾರತ ಪ್ರಜಾ ಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಳ್ಳುತ್ತೆ ಎಂದರು.
ಮಹಾತ್ಮ ಗಾಂಧೀಜಿಯವರು ಪ್ರಾಣ ತೆತ್ತ ದಿನದ ನೆನಪಿಗಾಗಿ ರಾಷ್ಟ್ರಕ್ಕಾಗಿ ಪ್ರಾಣ ಬಿಟ್ಟ ಎಲ್ಲಾ ಹುತಾತ್ಮರನ್ನು ನೆನೆಪಿಸಿಕೊಂಡು ಗೌರವ ಸಲ್ಲಿಸುವ ದಿನವೇ ಹುತಾತ್ಮ ದಿನ ಎಂದರು. ಮಹಾತ್ಮ ಗಾಂಧೀಜಿಯವರು ಈ ದೇಶ ಕಂಡ ಅಪ್ರತಿಮ, ಶ್ರೇಷ್ಟ ದಾರ್ಶನಿಕ ಹೋರಾಟಗಾರ. ಗಾಂಧೀಜಿಯವರು ನಾನು ಬಾಳುತ್ತಿರುವ ಬದುಕೆ ಒಂದು ಸಂದೇಶ ಎಂದಿದ್ದಾರೆ. ಅವರು ಬಹಳ ಸರಳತೆಯಿಂದ ಬದುಕಿದವರು ಹೇಳಿದಂತೆ ಬದುಕಿದವರು ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ನವೀನ್ ಹಳೆಮನೆ ಮಾತನಾಡಿ ಗಾಂಧಿ ಎನ್ನುವುದು ಒಂದು ವ್ಯಕ್ತಿ ಅಲ್ಲ, ಆಲೋಚನಾ ಕ್ರಮ, ಗಾಂಧೀಜಿಯವರು ಸತ್ಯದ ಮಾರ್ಗದಲ್ಲಿ ನಡೆದವರು, ಅಹಿಂಸವಾದಿ. ಹಿಂಸೆಯನ್ನು ಖಂಡಿಸಿದವರು. ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ತೋರಿಸಿಕೊಟ್ಟವರು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್, ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *