ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಬೆಲೆ ಕಟ್ಟಲಾಗದು : ಸಿಂ. ಲಿಂ. ನಾಗರಾಜು

ಚನ್ನಪಟ್ಟಣ (hairamanagara.in) : ದೇಶದ ರಕ್ಷಣೆಗೆ ಪ್ರಾಣ ನೀಡಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಅಂತಹ ಮಹನೀಯರನ್ನು ಸ್ಮರಿಸಿ ನಮಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಸಿಂ.ಲಿಂ.ನಾಗರಾಜು ಹೇಳಿದರು.
ಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು . ಸ್ವತಂತ್ರ ಭಾರತದ ಪಾಲಿಗೆ 30ನೇ ಜನವರಿ 1948 ಕರಾಳ ದಿನ. ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಬಾಪು ಹತ್ಯೆಗೀಡಾದರು. ಸತ್ಯ, ಅಹಿಂಸೆ ಮತ್ತು ಅಸಹಕಾರ ಚಳವಳಿಯಿಂದ ಜಗತ್ತಿನಾದ್ಯಂತ ಮಹಾತ್ಮ ಎಂದೇ ಚಿರಪರಿಚಿತರಾಗಿದ್ದ ಗಾಂಧಿ ಅವರನ್ನು ನಾಥುರಾಮ್ ಗೊಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ.ಮಹಾತ್ಮ ಗಾಂಧಿ ಸೇರಿದಂತೆ ಭಗತ್ ಸಿಂಗ್ ,ಚಂದ್ರಶೇಖರ್ ಅಜಾದ್,ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ಭಾರತ ದೇಶ ಸ್ವಾತಂತ್ರ್ಯಗಳಿಸಿದ್ದು ಅಂತಹ ಎಲ್ಲಾ ಮಹನೀಯರನ್ನು ಸ್ಮರಿಸಿ ನಮಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಎಸ್ ಡಿಎಂಸಿ ಸಮಿತಿ ಸಮನ್ವಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ನಮ್ಮ ರಾಷ್ಟ್ರದ ಹೆಮ್ಮೆ. ನಾವು ಅವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ಬಲಿದಾನ ಕೊಟ್ಟಿದ್ದಾರೆ. ಇವರನ್ನು ಸ್ಮರಿಸಲು ಜನವರಿ 30 ರ ಈ ದಿನವನ್ನು ಭಾರತದಲ್ಲಿ ಹುತಾತ್ಮರ ದಿನ ಅಥವಾ ಸರ್ವೋದಯ ದಿನವೆಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ಅವರ ತ್ಯಾಗ ಬಲಿದಾನ ಮತ್ತು ಆದರ್ಶ ಜೀವನವನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವನ್ನು ಮಾಡಬೇಕಿದೆ ಎಂದರು .
ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ ಮಾತನಾಡಿ ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಲ್ಲಿ ಅಗ್ರಗಣ್ಯರು . ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರ ಗಳಿಂದ ಭಾರತಮಾತೆಯನ್ನು ದಾಸ್ಯದಿಂದ ಬಿಡುಗಡೆ ಗೊಳಿಸಿ ಎಲ್ಲಾ ಭಾರತೀಯರನ್ನು ಒಟ್ಟುಗೂಡಿಸಿ ಜಾಗತಿಕ ಮನ್ನಣೆಗಳಿಸಿದ ಮಾನವತಾವಾದಿಯಾಗಿದ್ದಾರೆ . ಗಾಂಧೀಜಿಯವರು ಸ್ವಾವಲಂಬನೆಯ ಜೀವನವನ್ನು ತೋರಿಸಿಕೊಟ್ಟವರು, ದೇಶವನ್ನು ರಾಜಕೀಯ ದಾಸ್ಯದಿಂದ ಮುಕ್ತವಾಗಿಸಿದವರು, ಅವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳನ್ನು ಪಾಲಿಸುವುದು ನಮ್ಮೆಲ್ಲರ ಗುರಿಯಾಗಬೇಕು , ಹುತಾತ್ಮರ ದಿನದಂದು ಗಾಂಧೀಜಿ ರವರನ್ನು ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ನಾಮಿನಿ ಸದಸ್ಯರಾದ ಉಮೇಶ್ ,ಭಾರತ ವಿಕಾಸ ಪರಿಷತ್ ಕಾರ್ಯದರ್ಶಿ ಬಿ .ಎನ್. ಕಾಡಯ್ಯ ,ಲಿಪಿಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ,ರಮೇಶ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಧುಸೂದನ್,ರಂಗಭೂಮಿ ಕಲಾವಿದರಾದ ದಶವಾರ ಮಹೇಶ್ ,ಬೆಳಕೆರೆ ಕೆಂಪೇಗೌಡ ,ಅಬ್ಬೂರು ಆನಂದ್, ಉಪನ್ಯಾಸಕ ಇಂದ್ರಕುಮಾರ್ , ಶಂಕರ್, ದೊಡ್ಡಾಚಾರಿ, ರಾಮಲಿಂಗಯ್ಯ, ಮಹೇಶ್, ಜಾನಪದ ಕಲಾವಿದ ಚಕ್ಕೆರೆ ಸಿದ್ಧರಾಜು ,ರಮೇಶ್, ಅರುಣ್ ಕುಮಾರ್, ಅನಿತಾ, ಶಿಕ್ಷಕರಾದ ದೇವರಾಜು , ಕರಿಯಪ್ಪ ,ಮೊದಲಾದವರು ಉಪಸ್ಥಿತರಿದ್ದರು .ಸಂಗೀತ ವಿದ್ವಾನ್ ಕೃಷ್ಣಮೂರ್ತಿ ಮತ್ತು ಜಾನಪದ ಕಲಾವಿದ ದೊಡ್ಡಮಳೂರು ಮಹಾದೇವ ರವರು ಮಹಾತ್ಮ ಗಾಂಧೀಜಿಯವರ ಪ್ರಿಯವಾದ ‘ರಘುಪತಿ ರಾಘವ ರಾಜಾ ರಾಮ್ ಮತ್ತು ವೈಷ್ಣವ ಜನತೋ’ ಹಾಡು ಗಳನ್ನು ಸುಶ್ರಾವ್ಯವಾಗಿ ಹಾಡಿದರು. ಹುತಾತ್ಮರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು .

Leave a Reply

Your email address will not be published. Required fields are marked *