ಮಾಜಿ ಪಟೇಲರುಗಳಿಗೆ ನೀಡುತ್ತಿರುವ ಮಾಸಿಕ ಭತ್ಯೆಯನ್ನು ಹೆಚ್ಚಿಸಲು ಮನವಿ
ಚನ್ನಪಟ್ಟಣ (hairamanagara.in) : ರಾಜ್ಯದಲ್ಲಿ ಮಾಜಿ ಪಟೇಲರುಗಳಿಗೆ ನೀಡುತ್ತಿರುವ ಮಾಸಿಕ ಭತ್ಯೆಯನ್ನು ಹೆಚ್ಚಿಸುವಂತೆ ಜಿಲ್ಲಾ ಮಾಜಿ ಪಟೇಲರ ಹಿತರಕ್ಷಣಾ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.
ಸಧ್ಯ ಮಾಜಿ ಪಟೇಲರುಗಳಿಗೆ ಸರ್ಕಾರ 3 ಸಾವಿರ ರೂ. ಭತ್ಯೆ ನೀಡುತ್ತಿದ್ದು ಅದು ಯಾವುದಕ್ಕೂ ಸಾಲದಾಗಿದೆ. ಸರ್ಕಾರ ಮಾಸಿಕ ಭತ್ಯೆಯನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಜಿಲ್ಲಾ ಸಂಘದ ಅಧ್ಯಕ್ಷ ಪಟೇಲ್ ಬಿ.ಸಿ.ಶಿವಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ ಜೆ.ಸಿ.ನಂಜುಂಡಸ್ವಾಮಿ ಅವರು ಆಗ್ರಹಪಡಿಸಿದ್ದಾರೆ.
ರಾಜ್ಯದಲ್ಲಿ ಮೊದಲು ಸಾವಿರ ಪಟೇಲರು ಭತ್ಯೆ ಪಡೆಯುತ್ತಿದ್ದರು, ಪ್ರಸ್ತುತ ರಾಜ್ಯದಲ್ಲಿ 706 ಮಂದಿ ಭತ್ಯೆ ಪಡೆಯುತ್ತಿದ್ದಾರೆ. ಇತ್ತೀಚಿನ ವರ್ಷದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, 660 ಮಂದಿ ಮಾತ್ರ ಬದುಕಿ ಉಳಿದಿದ್ದಾರೆ. ಇವರಿಗೆ 85-90ವರ್ಷ ವಯಸ್ಸಾಗಿದೆ. ಕೆಲವರಿಗೆ ಓಡಾಡಲು ಆಗದ ಪರಿಸ್ಥಿತಿ ಇದೆ, ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದಾರೆ, ಅವರ ಆಸರೆಗಾಗಿ ಸರ್ಕಾರ ಭತ್ಯೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಪಟೇಲರು ಗ್ರಾಮಗಳಲ್ಲಿ ಅರಳಿಕಟ್ಟೆ ನ್ಯಾಯ, ತೀರ್ಮಾನ ಮಾಡುತ್ತಾ ಸರ್ಕಾರಿ ಗೋಮಾಳ, ಅರಣ್ಯ ರಕ್ಷಣೆ ಮಾಡಿದ್ದಾರೆ, ಇವರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಿಲ್ಲ. ಹಿರಿತನಕ್ಕೆ ಮನ್ನಣೆ ನೀಡಿ ಮಾನವೀಯ ದೃಷ್ಟಿಯಿಂದ ಭತ್ಯೆ ಹೆಚ್ಚಳ ಮಾಡಬೇಕು. ಭತ್ಯೆ ಹೆಚ್ಚಳ ಮಾಡುವಂತೆ ಮಾಡಿರುವ ಮನವಿ ಕಂದಾಯ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಮಂಜೂರಾತಿಗೆ ರವಾನೆಯಾಗಿದ್ದು, ಸಂಬಂಧಪಟ್ಟವರು ಕಡತವನ್ನು ಪರಿಶೀಲಿಸಿ ಮಂಜೂರಾತಿ ನೀಡಬೇಕು ಎಂದು ಶಿವಮಲ್ಲಿಕಾರ್ಜುನಗೌಡ ಹಾಗೂ ನಂಜುಂಡಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.