ಸಿದ್ದರಾಮಯ್ಯ ನೀವೊಬ್ಬರೇ ಗಂಡಸಾ ಯಾಕೆ ಆ ಕ್ಷೇತ್ರದಲ್ಲಿ ಗಂಡಸರು ಯಾರೂ ಇಲ್ವಾ : ಹೆಚ್. ವಿಶ್ವನಾಥ್
ಮೈಸೂರು (hairamanagara.in) : ಸಿದ್ದರಾಮಯ್ಯ ನೀವೊಬ್ಬರೆ ಗಂಡಸು, ಯಾಕೆ ಆ ಕ್ಷೇತ್ರದಲ್ಲಿ ಯಾರು ಗಂಡಸರು ಇಲ್ಲವಾ ನಿಮ್ಮನ್ನು ಯಾರು ಪ್ರಮುಖ ನಾಯಕರು ಕರೆಯುತ್ತಿದ್ದಾರೆ, ಯಾರೋ ಕೆಲವು ಚಮಚಗಳು ಕರೆಯುತ್ತಿದ್ದಾರೆ ಅಷ್ಟೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ. ಕಾಂಗ್ರೆಸ್ ಮುಗಿಸಿಯೇ ಅವರು ಹೋಗುವುದು. ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು. ಅಹಿಂದದವರನ್ನು ಉಪಯೋಗಿಸಿಕೊಂಡು ಸಿದ್ದರಾಮಯ್ಯ ದಡಕ್ಕೆ ಬಂದರು.
ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ ಎಲ್ಲರನ್ನು ಮುಗಿಸಿದರು. ಈಗ ಕುರುಬರ ಕ್ಷೇತ್ರಗಳಿಗೆ ಬೇರೆಯವರನ್ನು ಕರೆ ತರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಸಿದ್ದರಾಮಯ್ಯ ಯಾರನ್ನು ಬೆಳೆಯಲು ಬಿಡಲಿಲ್ಲ. ಅವರಿಗಿಂತ ಬಿಳಿ ಬಟ್ಟೆ ಬೇರೆ ಯಾರು ಹಾಕುವಂತಿಲ್ಲ. ನನ್ನನ್ನು ಮುಗಸಿದಿರಿ ಹೆಚ್,ಎಂ,ರೇವಣ್ಣನನ್ನು ಮುಗಿಸಿದಿರಿ. ಖರ್ಗೆ ಎಲ್ಲಿ ? ಪರಮೇಶ್ವರ್ ಎಲ್ಲಿ ? ರೋಷನ್ ಬೇಗ್ ಎಲ್ಲಿ ? ಇವರೆಲ್ಲರನ್ನೂ ಮುಗಿಸಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ತತ್ವ ಸಿದ್ದಾಂತ ಬೇರೆ ಸಿದ್ದರಾಮಯ್ಯ ಸಿದ್ಧಾಂತ ಬೇರೆ ಎಂದು ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಿಸ್ಟರ್ ಸಿದ್ದರಾಮಯ್ಯ 15 ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ. ನಾವು 17 ಜನ ಹೋದಾಗ ಏನೆಲ್ಲಾ ಮಾತನಾಡಿದ್ದೀರಿ. ಬೇರೆ ಪಕ್ಷದ ಶಾಸಕರು-ಸಚಿವರು ನನ್ನ ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದ್ದೀರಿ ಎಂದು ಹೇಳಿದರು.
ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೆ ಅನೈತಿಕತೆನಾ? ಜನರನ್ನು ದಡ್ಡರು ಅಂದುಕೊಂಡಿದ್ದೀರಾ. ಅವರಿಗೆ ಎಲ್ಲಾ ಗೊತ್ತಿದೆ, ನಿಮಗೆ ಪಾಠ ಕಲಿಸುತ್ತಾರೆ. ನನ್ನನ್ನು ಸಿಎಂ ಇಬ್ರಾಹಿಂರನ್ನು ಸಿದ್ದರಾಮಯ್ಯ ಜೀವ ಇರುವವರೆಗೂ ನೆನಪಿಸಿಕೊಳ್ಳಬೇಕು. ಎಸ್.ಆರ್.ಪಾಟೀಲ್ ಅವರನ್ನು ಮುಗಿಸಿದ್ದು ಸಿದ್ದರಾಮಯ್ಯ ಎಂದು ಆರೋಪಿಸಿದರು.
ಎಸ್,ಆರ್,ಪಾಟೀಲ್ ಗೆ ಟಿಕೆಟ್ ಕೊಡಲಿಲ್ಲ. ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಸಿದ್ದರಾಮಯ್ಯರಿಂದ. ಯಾರ ಮನೆ ಹಾಳಾದರೂ ನೀವು ಚೆನ್ನಾಗಿದ್ದೀರಾ. ನಿಮಗೆ ದೆಹಲಿಯಲ್ಲಿ ಯಾರು ಗೊತ್ತಿದ್ದರು? ಖರ್ಗೆ, ಎಸ್.ಎಂ.ಕೃಷ್ಣ ಸಹಾಯ ಮಾಡಿದ್ದಕ್ಕೆ ನೀವು ಕಾಂಗ್ರೆಸ್ ಪಕ್ಷ ಸೇರಿದ್ದು. ಕೃತಜ್ಞತೆಯೇ ಇಲ್ಲದ ಜನ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೆದ್ದು ತೋರಿಸಲಿ.
ಸಿಎಂ ಇಬ್ರಾಹಿಂ ಸರಿಯಾಗಿಯೇ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಈಗ ಕ್ಷೇತ್ರ ಹುಡುಕುತ್ತಿದ್ದಾರೆ. ಅವರನ್ನು ಕ್ಷೇತ್ರಕ್ಕೆ ಕರೆಯುತ್ತಿರುವ ವಿಚಾರವಾಗಿ ಮಾತನಾಡಿ, ಏನು ಕೊಬ್ಬರಿ ಮಿಠಾಯಿ ಕೊಟ್ಟು ಕರೆಯುತ್ತಿದ್ದಾರಾ, ಈಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತರೆ 49 ಸಾವಿರ ಮತಗಳಿಂದ ಸೋಲುತ್ತಾರೆ ಎಂದು ವಿಶ್ವನಾಥ್ ಭವಿಷ್ಯ ನುಡಿದರು.