ಮಾರ್ಚ್-12 ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ
ರಾಮನಗರ (hairamanagara.in) : ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿಆಗಬಹುದಾದ ಪ್ರಕರಣಗಳನ್ನು ಮುಂಬರುವ ಮಾರ್ಚ್ 12 ರಂದು ನಡೆಯುವ ಮೆಗಾ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್ ಅನುಷ್ಠಾನ ಕುರಿತು ಮಂಗಳವಾರ ಮಾಹಿತಿ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಬಿ.ಜಿ. ರಮಾ ಅವರು, ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಇರುವ 20 ಬೆಂಚ್ ಗಳಲ್ಲಿ ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ. ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಆನ್ ಲೈನ್ : ಜಿಲ್ಲೆಯಾದ್ಯಂತ ಇರುವ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಮಾ. 12 ರಂದು ಏಕ ಕಾಲಕ್ಕೆ ಮೆಗಾ ಲೋಕ ಅದಾಲತ್ ನ ಕಲಾಪಗಳು ನಡೆಯಲಿವೆ. ಕಕ್ಷಿದಾರರನ್ನು ಹೊರತು ಪಡಿಸಿದರೆ, ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು ಇಲ್ಲವೆ ಆನ್ ಲೈನ್ ಮೂಲಕವೂ ಭಾಗವಹಿಸಬಹುದು. ಅವಶ್ಯಕತೆ ಕಂಡು ಬಂದಲ್ಲಿ ಕಕ್ಷಿದಾರರನ್ನು ಆನ್ ಲೈನ್ ಮೂಲಕ ಸಂಪರ್ಕಿಸಲಾಗುವುದು ಎಂದು ಸತ್ರ ನ್ಯಾಯಾಧೀಶರು ತಿಳಿಸಿದರು.
ರಾಜಿ ಪ್ರಕರಣಗಳು: ಜಿಲ್ಲೆಯಲ್ಲಿ ಒಟ್ಟು 45,318 ಪ್ರಕರಣಗಳು ಬಾಕಿ ಇದ್ದು, ಇವುಗಳ ಪೈಕಿ ವಿವಿಧ ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಅವರು ತಿಳಿಸಿದರು.
ರಾಜಿಗೆ ಒತ್ತು: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಕ್ರಿಮಿನಲ್ ಪ್ರಕರಣಗಳು, ನೆಗೋಷಲ್ ಇನ್ಸ್‍ಟ್ರೂಮೆಂಟ್ ಕಾಯಿದೆ (NI Act) ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು (Money Recovery Suits), ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು(Labour dispute Cases), ಗಣಿ ಮತ್ತು ಭೂ ವಿಜ್ಞಾನ ಪ್ರಕರಣಗಳು(MMDR), ವೈವಾಹಿಕ ಪ್ರಕರಣಗಳು(Matrimonial Dispute Cases), ಭೂಸ್ವಾಧೀನ ಪ್ರಕರಣಗಳು(LAC Cases), ಆಸ್ತಿ ವಿಭಾಗದ ಪ್ರಕರಣಗಳು(Partion Suits), ನಿರ್ಧಿಷ್ಟ ಪ್ರಕರಣಗಳು(Specific Performance Cases), ಜಾರಿ ಪ್ರಕರಣಗಳು(Execution Cases), ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ(Other Civil Cases), ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸದ ಪ್ರಕರಣಗಳು(Birth Cases), ಲಘು ವಾಜ್ಯ ಪ್ರಕರಣಗಳು(Petty Cases), ಇತರೆ ಕ್ರಿಮಿನಲ್ ಪ್ರಕರಣಗಳು(Other Criminal Cases), ಭೂಸ್ವಾಧೀನ ಜಾರಿ ಪ್ರಕರಣಗಳು (Lac Execution Cases), ಜೀವನಾಂಶ ಪ್ರಕರಣಗಳು, ಕೌಟುಂಬಿಕ ದೌರ್ಜಜ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಗೆ ಸಂಬಂದಿಸಿದ ಪ್ರಕರಣಗಳು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ ಎಂದು ವೆಂಕಟಪ್ಪ ಅವರು ತಿಳಿಸಿದರು.
ಕೋವಿಡ್-19: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ಮಾರ್ಚ್ 12 ರಂದು ಆನ್ ಲೈನ್ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ನ್ಯಾಯಾಲಯಕ್ಕೆ ಬರದೇ ಒಂದೇ ಒಂದು ಬಾರಿಗೆ ನ್ಯಾಯಸಮ್ಮತವಾಗಿ ರಾಜಿ ಇಲ್ಲವೆ ಸಂಧಾನದ ಮೂಲಕ ಇವುಗಳನ್ನು ಹೆಚ್ಚಿನ ಶುಲ್ಕವಿಲ್ಲದೆ ಎರಡೂ ಕಡೆಯವರು ಆನ್ ಲೈನ್ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸದಸ್ಯ ಕಾರ್ಯದರ್ಶಿಗಳು ತಿಳಿಸಿದರು.