ಚನ್ನಪಟ್ಟಣ ನಗರಾಭಿವೃದ್ಧಿಗೆ 30 ಕೋಟಿ ಅನುದಾನ : ಸಿ.ಪಿ. ಯೋಗೇಶ್ವರ್
ನಗರೋತ್ಥಾನ ಯೋಜನೆಯಡಿ ಅನುದಾನ ಬಿಡುಗಡೆ | ನೂತನ ನಾಮಿನಿಸದಸ್ಯರ ಅಭಿನಂದನೆ ಸಮಯದಲ್ಲಿ ಹೇಳಿಕೆ
ಚನ್ನಪಟ್ಟಣ (hairamanagara.in) : ನಮ್ಮ ಪಟ್ಟಣದ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ ಬದ್ಧವಾಗಿದೆ. ನಗರದ ಅಭಿವೃದ್ಧಿ ಉದ್ದೇಶದಿಂದ ಬಿಜೆಪಿ ಸರ್ಕಾರ ನಗರೋತ್ಥಾನ ಯೋಜನೆಯಡಿಯಲ್ಲಿ ಚನ್ನಪಟ್ಟಣ ನಗರಸಭೆಗೆ 30 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಈ ಹಣ ಸದ್ಭಳಕೆ ಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮಲ್ಲರ ಮೇಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕರೆನೀಡಿದರು.
ನಗರದ 5ನೇ ಅಡ್ಡರಸ್ತೆಯ ಬಿಜೆಪಿ ಕಚೇರಿಯಲ್ಲಿ ನೂತನ ನಗರಸಭಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಗರದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ನಾಮಕರಣ ಗೊಂಡಿರುವ ಸದಸ್ಯರು ಕೆಲಸ ಮಾಡಬೇಕು,ನಮ್ಮ ಪಕ್ಷದ ಚುನಾಯಿತ ಸದಸ್ಯರ ಜೊತೆಗೂಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶ್ರಮಿಸಿ ಎಂದು ತಿಳಿಸಿದರು.
ನಗರದ ನಾಗರೀಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರದ ವತಿಯಿಂದ ನಾಮಕರಣ ಗೊಂಡಿರುವ 5ಮಂದಿ ಸದಸ್ಯರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಮ್ಮ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೆಲಿದೆ ಎಂದರು.
ನೂತನ ಸದಸ್ಯರು ನಗರಸಭಾ ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳುವ ಜೊತೆ, ಈ ಸಾಲಿನ ಬಜೆಟ್‍ನಲ್ಲಿ ಸರಿಯಾಗಿ ಜನಪರ ಕೆಲಸಗಳು ನಡೆಯುವಂತೆ ನೋಡಿಕೊಳ್ಳಿ. ನಗರಸಭೆಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ನೀಡುವ ಜೊತೆಗೆ ವಿವಿಧ ಮೂಲಗಳಿಂದ ಅನುದಾನ ಬರುತ್ತಿದ್ದು, ಎಲ್ಲವೂ ಜನರಿಗೆ ತಲುಪುವಂತೆ ನಮ್ಮ ಪಕ್ಷದ ಸದಸ್ಯರು ಹಾಗೂ ನಾಮಕರಣ ಗೊಂಡಿರುವ ಸದಸ್ಯರು ನೋಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ನಗರದ ಅಭಿವೃದ್ಧಿಗೆ ನಾನು ಸಹಕಾರ ನೀಡಲು ಬದ್ದವಾಗಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಎಲ್ಲಾರೀತಿಯ ನೆರವನ್ನು ನಾನು ಕೊಡಿಸುತ್ತೇನೆ. ನಮ್ಮ ಪಕ್ಷದ ನಗರಸಭಾ ಸದಸ್ಯರು ಹಾಗೂ ನಾಮಿನಿ ಸದಸ್ಯರು ಒಗ್ಗೂಡಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡ ಬೇಕು ಎಂದು ತಿಳಿಸಿದ ಅವರು, ನೂತನ ನಾಮನಿರ್ದೇಶಿತ ಸದಸ್ಯರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರಾದ ಲಿಂಗೇಗೌಡ, ಸಂತೋಷ್, ಉಮೇಶ್,ಸುಂದರ್, ರಂಗಸ್ವಾಮಿ(ಕೋಟೆಸ್ವಾಮಿ) ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ತಾಪಂ ಮಾಜಿ ಅಧ್ಯಕ್ಷ ಹರೂರುರಾಜಣ್ಣ, ಮುಖಂಡರಾದ ಮತ್ತೀಕೆರೆ ಚನ್ನೇಗೌಡ, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹಲವು ಕಾರ್ಯಕ್ರಮಗಳಲ್ಲಿ ಭಾಗಿ: ಇದೇ ವೇಳೆ ಯೋಗೇಶ್ವರ್ ಅವರು ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಗರದ ಎಲೇಕೇರಿಯ ನಗರಸಭಾ ಸದಸ್ಯ ಶ್ರೀನಿವಾಸಮೂರ್ತಿ ಅವರ ತಂದೆಯ ಉತ್ತರಕ್ರಿಯಾಧಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಬಳಿಕ ತಾಲೂಕಿನ ಹುಲುವಾಡಿ ಮತ್ತು ಕದರಮಂಗಲ ಗ್ರಾಮದ ಬಿಜೆಪಿ ಕಾರ್ಯಕರ್ತರ ಗೃಹ ಪ್ರವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಬಳಿಕ ಎಲೇಕೇರಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಶ್ ಅವರ ಜೊತೆ ಸ್ಥಳೀಯ ಮುಖಂಡರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದರು.