ಪೆಗಾಸಸ್ ಸ್ಪೈವೇರ್ ಬಳಕೆ ಆರೋಪ : ಪ್ರಧಾನಿ ರಾಜೀನಾಮೆಗೆ ಎಸ್ ಡಿಪಿಐ ಒತ್ತಾಯ
ರಾಮನಗರ (hairamanagara.in) : ಭಾರತದ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್ ಸ್ಪೈವೇರ್ ಬಳಕೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಎಸ್ ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ತಮ್ಮ ಅಹವಾಲು ಸಲ್ಲಿಸುವ ಸಂದರ್ಭದಲ್ಲಿ ಒಂದಷ್ಟು ಸಮಯ ಪ್ರತಿಭಟನೆ ನಡೆಸಿದ ಸಂಘಟನೆಗಳು, 2017 ರಲ್ಲಿ ಇಸ್ರೇಲ್‌ನೊಂದಿಗೆ 2 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಖರೀದಿ ಒಪ್ಪಂದದ ಭಾಗವಾಗಿ “ಮುಖ್ಯ ವಸ್ತುವಾಗಿ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಲಾಗಿದೆ ಎಂದು ಅಮೆರಿಕದ “ದಿ ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ವರದಿ ಮಾಡಿರುತ್ತದೆ.
ಇದನ್ನು ಉಲ್ಲೇಖ ಮಾಡಿದ್ದಲ್ಲಿ ನರೇಂದ್ರ ದಾಮೋದರ ದಾಸ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಭಾರತದ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಮುಂದಾಗಿರುವುದು ದುರ್ದೈವದ ಸಂಗತಿಯಾಗಿದೆ. ಈ ಕಾರಣದಿಂದ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಬೇಕು. ಇಲ್ಲವೇ, ರಾಷ್ಟ್ರಪತಿಗಳು ಪ್ರಧಾನಿ ಮೋದಿ ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ವಿರೋಧ ಪಕ್ಷಗಳ ರಾಜಕೀಯ ನಾಯಕರು, ಪತ್ರಕರ್ತರು, ಬುದ್ಧಿಜೀವಿಗಳು ಹಾಗೂ ಹೋರಾಟಗಾರರ ಖಾಸಗಿತನದ ಬೇಹುಗಾರಿಕೆ ನಡೆಸಿರುತ್ತದೆ ಎಂಬ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ನಮ್ಮ ಭಾರತದ ಸಂಸತ್ತಿನೊಳಗೆ ಈ ವಿಚಾರವಾಗಿ ಕೇಂದ್ರದ ಬಿ.ಜೆ.ಪಿ. ಸರ್ಕಾರ ಯಾವುದೇ ಚರ್ಚೆಯನ್ನು ಕೂಡ ಮಾಡಲು ತಯಾರಿಲ್ಲ. ಈ ವಿಚಾರವಾಗಿ ಕೇಳಲಾದ ಪ್ರಶ್ನೆಗಳಿಗೆ ತಾನು ಆ ರೀತಿಯ ಯಾವುದೇ ಬೇಹುಗಾರಿಕೆ ನಡೆಸಿಲ್ಲ ಎಂದು ಹೇಳಿಕೊಂಡಿತು. ಪೆಗಾಸಸ್ ಕುತಂತ್ರಾಂಶ ಖರೀದಿಯ ಮಾಹಿತಿಯನ್ನು ಕೇಳದ ಸಂದರ್ಭಗಳಲ್ಲಿ ಆಂತರಿಕ ಭದ್ರತೆಯ ಕಾರಣಗಳನ್ನು ಮುಂದೆ ಮಾಡಿ ಮಾಹಿತಿ ನೀಡಲು ನಿರಾಕರಣೆ ಮಾಡಲಾಗುತ್ತಿತ್ತು. ಭಾರತದ ಸರ್ವೋಚ್ಛ ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ತನಿಖೆಯನ್ನು ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಪೆಗಾಸಸ್ ಸ್ಪೈವೇರ್ ಕುರಿತಂತೆ ಅಮೆರಿಕದ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ವಿಚಾರವನ್ನು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರೂ ಕೂಡ ಪ್ರಸ್ತಾಪ ಮಾಡಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನ ಹಾಲಿ ಮೊತ್ತಕ್ಕಿಂತಲೂ ಎರಡು ಪಟ್ಟು ವೆಚ್ಚಕ್ಕೆ ಸರ್ಕಾರ ಹೊಸ ಸ್ಪೈವೇರ್ ಪಡೆದುಕೊಳ್ಳಬಹುದು ಎಂದು ಅನುಮಾನಿಸಿದ್ದಾರೆ ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
2017ರಲ್ಲಿ ಕೆಂದ್ರ ಸರ್ಕಾರವು ಪೆಗಾಸಸ್ ಸ್ಪೈವೇರ್ ಮೂಲಕ ದೇಶದ ಗಣ್ಯರು, ವಿರೋಧಪಕ್ಷಗಳ ಮುಖಂಡರು, ನಾನಾ ಸಂಘಟನೆಗಳ ಚಳುವಳಿಗಾರರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಸೇನೆ ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥರ ಫೋನ್ ಕರೆಗಳನ್ನು ಕದ್ದಾಲಿಸಿದೆ ಮಾತ್ರವಲ್ಲ, ಎಲ್ಲಾ ರೀತಿಯ ಕುತಂತ್ರ ಮಾಡಿ ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ ಎಂಬ ಅನುಮಾನ ದೇಶವಾಸಿಗಳಲ್ಲಿ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಈ ಸಂಬಂಧ ಸ್ಪಷ್ಟೀಕರಣ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಸ್ ಡಿ ಪಿಐ ಕಾನೂನು ಸಲಹೆಗಾರ, ಮುಖಂಡ ಚಾನ್ ಪಾಷಾ, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಶಕೀಲ್, ತಾಲ್ಲೂಕು ಅಧ್ಯಕ್ಷ ಸೈಯದ್ ಅಸಾದುಲ್ಲಾ, ಮುಖಂಡರಾದ ಮೆಹಬೂಬ್,ಆರೀಫ್ ಪಾಷಾ, ಅಮ್ಜದ್, ಅಸ್ಲಂ ಪಾಷಾ, ಅಜಿಜುಲ್ಲಾ ಷರೀಫ್, ಪಿಎಫ್ ಐ ತಾಲ್ಲೂಕು ಅಧ್ಯಕ್ಷ ಹುಮಯೂನ್ ಸೇರಿದಂತೆ ಮುಂತಾದವರು ಭಾವಗವಹಿಸಿದ್ದರು.