ಬಮೂಲ್ ಶಿಬಿರ ಕಚೇರಿಯಲ್ಲಿ ಗಲಾಟೆ
ಮಾರೇಗೌಡನದೊಡ್ಡಿ ಎಂಪಿಸಿಎಸ್ ಕಾರ್ಯದರ್ಶಿ ಹುದ್ದೆ ವಿವಾದ | ವಿಸ್ತರಣಾಧಿಕಾರಿ ವಿರುದ್ಧ ಗ್ರಾಮಸ್ಥರು ಗರಂ
ವಿಸ್ತರಣಾಧಿಕಾರಿಯ ಧೋರಣೆಯಿಂದ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದು, ಕಾನೂನನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಪ್ರೇಮಕ್ಕೆ ಬಿದ್ದು ಬೇಕಾಬಿಟ್ಟಿ ಹುದ್ದೆಯನ್ನು ನೀಡಿದ್ದಾರೆ. ಅಧಿಕಾರಿಯ ವರ್ತನೆ ಸರಿಯಲ್ಲ ಎಂದು ಆಕ್ರೋಶವ್ಯಕ್ತೊಡಿಸಿದ್ದಾರೆ.
ಚನ್ನಪಟ್ಟಣ (hairamanagara.in) : ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಮಾರೇಗೌಡನದೊಡ್ಡಿ ಗ್ರಾಮದ ಕೆಲ ಮಂದಿ ಬಮೂಲ್ ಶಿಬಿರದ ಕಚೇರಿಯಲ್ಲಿ ಗಲಾಟೆ ಮಾಡಿರುವ ಪ್ರಸಂಗ ಮಂಗಳವಾರ ನಡೆದಿದೆ.
ಬಮೂಲ್ ಕಚೇರಿಗೆ ಆಗಮಿಸಿದ ಮಾರೇಗೌಡನದೊಡ್ಡಿ ಗ್ರಾಮಸ್ಥರು, ನಮ್ಮ ಗ್ರಾಮದ ಹಾಲು ಉತ್ಪಾದರ ಸಂಘಕ್ಕೆ ಏಕಾಏಕಿ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರೇಗೌಡನದೊಡ್ಡಿ ಎಂಪಿಸಿಎಸ್ ಆಡಳಿತಾಧಿಕಾರಿಯಾಗಿರುವ ವಿಸ್ತರಣಾಧಿಕಾರಿ ಚಂದ್ರಶೇಖರ್ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ.
ಎರಡೂ ಕಡೆಯವರ ನಡುವೆ ಮಾತಿಗೆ ಮಾತುಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಕೈ ಮಿಲಾಯಿಸಿರುವ ಘಟನೆ ಸಹ ನಡೆದಿದೆ ಎನ್ನಲಾಗಿದ್ದು, ಕಚೇರಿಯ ಪೀಠೋಪಕರಣಗಳನ್ನು ಜಖಂ ಗೊಳಿಸಿರುವ ಪ್ರಸಂಗ ಸಹ ನಡೆದಿದ್ದು, ಕೆಲ ಕಾಲ ಬಮೂಲ್ ಶಿಬಿರದ ಕಚೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುದಾಖಲಾಗಿಲ್ಲ.
ಘಟನೆಯ ಹಿನ್ನೆಲೆ: ತಾಲೂಕಿನ ಮಾರೇಗೌಡನದೊಡ್ಡಿ ಗ್ರಾಮ ಎಂಪಿಸಿಎಸ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಸ್ವಾಮಿ ಎಂಬುವರ ವಿರುದ್ಧ ಹಣದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಮೂಲ್ ನಿಂದ ನೋಟೀಸ್ ನೀಡಲಾಗಿತ್ತು. ಈ ಸಂಬಂಧ 4.20 ಲಕ್ಷ ರೂ. ಹಣವನ್ನು ಅವರು ಸಂಘಕ್ಕೆ ಕಟ್ಟಿದ್ದಾರೆ ಎಂದು ಅವರ ಬೆಂಬಲಿಗರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಂಘದ ಆಡಳಿತ ಮಂಡಳಿ ಸೂಪರ್‍ಸೀಡ್‍ಆಗಿ 3 ತಿಂಗಳು ಕಳೆದಿದ್ದು, ಮೂರು ತಿಂಗಳಿಂದ ಈ ಮಾರ್ಗದ ಬಮೂಲ್ ವಿಸ್ತರಣಾಧಿಕಾರಿಯಾಗಿರುವ ಚಂದ್ರಶೇಖರ್ ಡೇರಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. ಸೋಮವಾರ ಇವರು ಕಾರ್ಯದರ್ಶಿ ಶಿವಸ್ವಾಮಿ ಅವರನ್ನು ವಜಾಗೊಳಿಸಿ ಹೊಸದಾಗಿ ಗ್ರಾಮದ ರೂಪ ಎಂಬುವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಬಮೂಲ್ ಅಧಿಕಾರಿ ಈರೀತಿ ಏಕಾಏಕಿ ವಜಾಗೊಳಿಸಿ, ಯಾವುದೇ ನೋಟೀಸ್ ನೀಡದೆ ಹೊಸ ಕಾರ್ಯದರ್ಶಿಯನ್ನು ನೇಮಕಮಾಡಿರುವುದು ನಿಯಮ ಬಾಹೀರ ಎಂದು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಬಮೂಲ್ ಶಿಬಿರದ ಕಚೇರಿಗೆ ಬಂದು ವಿಸ್ತರಣಾಧಿಕಾರಿ ಚಂದ್ರಶೇಖರ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಯಾವುದೇ ನೋಟೀಸ್ ನೀಡದೆ ಕಾರ್ಯದರ್ಶಿಯನ್ನು ವಜಾಮಾಡಿರುವುದು ಯಾಕೆ, ರಾತ್ರೋರಾತ್ರಿ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಿರುವುದು ಸರಿಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಸಂಘದ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದೇ ಇರುವಾಗ ನೀವು ಏಕಾಏಕಿ ಮೂರನೇ ವ್ಯಕ್ತಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಹಿಂದಿನ ಕಾರ್ಯದರ್ಶಿಯನ್ನು ವಜಾಗೊಳಿಸುವುದು ಅನಿವಾರ್ಯವಾಗಿದ್ದಲ್ಲಿ, ಸಂಘದ ಹಾಲು ಪರೀಕ್ಷಕ ಅಥವಾ ಸಹಾಯಕನಿಗೆ ಪ್ರಭಾರ ಕರ್ತವ್ಯ ವಹಿಸಬಹುದಾಗಿತ್ತು. ಹೊಸದಾಗಿ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಕೆರಳಿಸಿದ ಚಂದ್ರಶೇಖರ್ ಮಾತು: ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದನೆ ನೀಡದ ವಿಸ್ತರಣಾಧಿಕಾರಿ ಚಂದ್ರಶೇಖರ್, ಇಲ್ಲಿ ನಾನೇ ಸುಪ್ರೀಂ, ನಾನು ನನ್ನಿಷ್ಟ ಬಂದಂತೆ ಮಾಡುತ್ತೀನಿ, ನೀವ್ಯಾರು ನಮ್ಮನ್ನು ಕೇಳಲು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಮೂಲ್ ಅಧ್ಯಕ್ಷರ ಸಮ್ಮುಖದಲ್ಲೇ ಗಲಾಟೆ
ಬಮೂಲ್ ಕಚೇರಿಯಲ್ಲಿ ಇಷ್ಟೆಲ್ಲಾ ರದ್ದಾಂತ ನಡೆದಾಗ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಕಚೇರಿಯಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಆದರೆ, ಈ ಗಲಾಟೆಯ ವಿಚಾರದಲ್ಲಿ ಅವರು ಯಾವುದೇ ನಿಲುವನ್ನು ಪ್ರಕಟಿಸದೆ ನಿಮ್ಮ ಸಮಸ್ಯೆ ನನಗೆ ಸಂಬಂಧಿಸಿಲ್ಲ, ಇಲ್ಲಿ ಗಲಾಟೆ ಮಾಡಬೇಡಿ ನಿಮ್ಮ ಗ್ರಾಮದಲ್ಲೇ ಹೋಗಿ ಪರಿಹರಿಸಿಕೊಳ್ಳಿ ಎಂದು ಹೇಳಿ ಈವಿವಾದದಿಂದ ದೂರ ಉಳಿದರು ಎಂದು ಮೂಲಗಳು ಮಾಹಿತಿ ನೀಡಿವೆ.