ರೈತನಿಲ್ಲದೆ ದೇಶಕ್ಕೆ ಉಳಿಗಾಲವಿಲ್ಲ: ಚೀಲೂರು ಶ್ರೀನಿವಾಸ್
ಚನ್ನಪಟ್ಟಣ (hairamanagara.in) : ದೇಶದ ಒಡೆಯ ರೈತನೇ ಹೊರತು ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಅಲ್ಲಾ .ಸಣ್ಣಪುಟ್ಟ ಜಮೀನ್ದಾರರು ಸಹ ಒಡೆಯರು, ಒಬ್ಬೊಬ್ಬ ರೈತನೂ ಸಹ ಹಲವಾರು ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾನೆ. ಅವನಿಲ್ಲದಿದ್ದರೆ ದೇಶದ ಉಳಿಗಾಲವಿಲ್ಲ ಎಂದುಕನಕಪುರ ತಾಲೂಕಿನ ಹಿರಿಯ ರೈತ ಮುಖಂಡ ಚೀಲೂರು ಶ್ರೀನಿವಾಸ ತಿಳಿಸಿದರು.
ಅವರು ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ ‘ಸಮಾನ ಮನಸ್ಕರ ಸಹಭಾಗಿತ್ವ’ದ ರೈತಸಂಘದ ವತಿಯಿಂದ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿಗಳಲ್ಲಿ ಒಗ್ಗಟ್ಟಿದೆ, ರಾಜಕಾರಣಿಗಳು ಸಹ ಮೇಲ್ನೋಟಕ್ಕೆ ಕಿತ್ತಾಡಿದರೂ ಅವರಲ್ಲಿ ಒಗ್ಗಟ್ಟಿದೆ. ಮನುಷ್ಯ ಪ್ರಾಣಿ ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಣಿಗಳಲ್ಲೂ ಒಗ್ಗಟ್ಟಿದೆ. ಅಧಿಕಾರ ಮತ್ತು ಹಣ ಬರುವ ಕಡೆಯೂ ಸಹ ಒಗ್ಗಟ್ಟಿದೆ. ದೇಶ ಉಳಿಯಬೇಕಾದರೆ ರೈತರ ಒಗ್ಗಟ್ಟು ಬಹಳ ಮುಖ್ಯ. ಹಾಗಾಗಿ ನಾವೆಲ್ಲರೂ ಕಾರಣ ಹೇಳದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತಿಳಿಯಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಮಾತನಾಡಿದ ಎಪಿಎಂಸಿ ಯ ನಿವೃತ್ತ ಸಿಇಓ ಪಿ. ಸ್ವಾಮಿ ಯವರು, ಆಧುನಿಕತೆ ಮುಂದುವರೆದಂತೆಲ್ಲಾ ವ್ಯವಸಾಯ ಹಿಂದುಳಿಯುತ್ತಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಜಾನುವಾರುಗಳನ್ನು ಹೊಂದಿದ ದೇಶ ನಮ್ಮದಾಗಿದ್ದು, ಇತ್ತೀಚೆಗೆ ಕಡಿಮೆಯಾಗುತ್ತಿವೆ. ಹಸು, ಎಮ್ಮೆ, ಮೇಕೆ, ಕುರಿ ಮತ್ತು ಕೋಳಿಗಳು ಇದ್ದರೆ ಮಾತ್ರ ಆತ ರೈತ. ರೈತನಿಗಾಗಿ ಇಂದು ಹಲವಾರು ಯೋಜನೆಗಳಿದ್ದು, ಅವುಗಳು ರೈತನಿಗೆ ಸೇರುತ್ತಿಲ್ಲಾ, ನೀವು ಬೆಳೆದ ಅನೇಕ ಬೆಳೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಇದೆ. ಭೈರಾಪಟ್ಟಣ ಗ್ರಾಮದ ಬಳಿ ಸಂಸ್ಕರಣಾ ಘಟಕ ಶೀಘ್ರದಲ್ಲೇ ಆರಂಭವಾಗಲಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿದ ಯೋಜನೆಗಳನ್ನು ರೈತರಿಗೆ ನಾವು ತಲುಪಿಸುವ ಮೂಲಕ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು.
ಹಿರಿಯ ರೈತ ಮುಖಂಡ ಹಾಗೂ ಮುಖ್ಯಸ್ಥ ಸಿ ಪುಟ್ಟಸ್ವಾಮಿ ಯವರು ಮಾತನಾಡಿ, ನಮ್ಮ ಆಯುಷ್ಯದಲ್ಲಿ ಅರ್ಧ ಆಯಸ್ಸನ್ನು ನಿದ್ರೆ ಮತ್ತು ಆಲಸ್ಯದಲ್ಲೇ ಕಳೆದು ಬಿಟ್ಟಿದ್ದೇವೆ. ಉಳಿದ ಆಯಸ್ಸು ಬಾಲ್ಯ, ವಿದ್ಯಾಭ್ಯಾಸ, ತುಂಟತನ, ಕೆಲಸ ಮತ್ತು ಸಂಸಾರದಲ್ಲಿ ಕಳೆದುಕೊಂಡಿದ್ದೇವೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನುತಿಳಿದುಕೊಳ್ಳಬೇಕು. ಕೊಡುಗೆ ನೀಡಬೇಕು. ಮಣ್ಣಿನ ಶ್ರೇಷ್ಠತೆ ತಿಳಿದುಕೊಳ್ಳಬೇಕು. ರೈತನ ಸಂಕಷ್ಟ ಅರ್ಥೈಸಿಕೊಂಡು ಹೋರಾಟ ಮಾಡಬೇಕು.
ಇವುಗಳಿಗೆ ಮುಖ್ಯವಾಗಿ ಶಿಸ್ತು ಮತ್ತು ತಾಳ್ಮೆ ಬಹಳ ಮುಖ್ಯ. ಕಾನೂನನ್ನು ತಿಳಿದುಕೊಳ್ಳುವ ಜಾಣ್ಮೆಬೇಕು. ಸಂಘಟನೆ ಸೇರಿ ಹೋರಾಟ ಮಾಡಿದರೆ ನಮ್ಮ ರೈತರ ಕಷ್ಟ ಪರಿಹಾರವಾಗುವುದರಲ್ಲಿ ಅನುಮಾನವಿಲ್ಲಾ. ಪ್ರಪಂಚದ ಎಪ್ಪತ್ತು ದೇಶಗಳಲ್ಲಿ ಹಸಿರು ಶಾಲು ಹಾಕಿಕೊಂಡು ಸಂಘಟನೆ ಕಟ್ಟಿ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ನಾವು ಸಹ ಮನಸ್ಸಿನಲ್ಲಿರುವ ಕೀಳುತನವನ್ನು ತೆಗೆದು, ರೈತರ ಬದುಕನ್ನು ಹಸನುಗೊಳಿಸೋಣಾ ಎಂದು ಕರೆ ನೀಡಿದರು.
ಮೋಗೇನಹಳ್ಳಿ ಗ್ರಾಮದ ತಮ್ಮಣ್ಣಗೌಡ ಮಾತನಾಡಿ, ರಾಜಕಾರಣಿಗಳು ಹಾಗೂ ಚುನಾವಣೆ ಗೆಲ್ಲುವ ಎಲ್ಲರೂ ಹಸಿರು ಶಾಲು ಹೊದ್ದು ಬರುತ್ತಾರೆ. ಆದರೆ ರೈತರ ಸಮಸ್ಯೆಗಳನ್ನು ಮಾತ್ರ ಬಗೆಹರಿಸುವಲ್ಲಿ ಸೋತಿದ್ದಾರೆ. ಎಪಿಎಂಸಿ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ಉಲ್ಬಣ ಮಾಡುತ್ತಾರೆಯೇ ವಿನಹ ಶಮನ ಮಾಡಲ್ಲಾ. ಎಲ್ಲೋ ದುಡ್ಡು ಮಾಡಿದವರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಕೂರುತ್ತಾರೆ. ಇದುವರೆಗೂ ಯಾವುದೇ ನ್ಯಾಯವನ್ನು ಕೊಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಒಟ್ಟಾರೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ರೈತ ಉಳಿಯಲು ಸಾಧ್ಯ ಎಂದು ತಿಳಿಸಿದರು.
ರಾಮನಗರ ನಂಜಪ್ಪ (ಕುಮಾರ್) ಹಾರೋಹಳ್ಳಿಯ ಗಜೇಂದ್ರ ಸಿಂಗ್, ಹುಲುವಾಡಿ ಗ್ರಾಮದ ಪ್ರಕಾಶ್, ಸೀಬನಹಳ್ಳಿ ಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡರಾದ ಹೊಂಬಾಳೇಗೌಡ, ಭೈರಾಪಟ್ಟಣ ಗ್ರಾಮದ ಲಿಂಗೇಗೌಡ, ಕೋಟಮಾರನಹಳ್ಳಿ ಗ್ರಾಮಸ್ಥರಾದ ಪುಟ್ಟಸ್ವಾಮಿ, ಪಾಪಣ್ಣ, ಉಮೇಶ್, ಪ್ರಕಾಶ್, ಸೇರಿದಂತೆ ನೂತನವಾಗಿ ಶಾಲು ಹಾಕಿಸಿಕೊಂಡ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರವತ್ತಕ್ಕೂ ಹೆಚ್ಚು ಮಂದಿ ಹಸಿರು ಶಾಲುಗಳನ್ನು ಹಾಕಿಕೊಳ್ಳುವ ಮೂಲಕ ಸಮಾನ ಮನಸ್ಕರ ಸಹಭಾಗಿತ್ವ ರೈತ ಸಂಘಟನೆಗೆ ಸೇರ್ಪಡೆಯಾದರು.