ಅಂಗನವಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಖಂಡ ಡಿ. ನರೇಂದ್ರ ಆಗ್ರಹ
ರಾಮನಗರ (hairamanagara.in) : ನಗರದ 21ನೇ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರವೊಂದರಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡುತ್ತಿದ್ದನ್ನು ಪತ್ತೆಹಚ್ಚಿದ ಬಿಜೆಪಿ ಮುಖಂಡರು, ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆದಿದೆ.
ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ. ನರೇಂದ್ರ ಅವರು, ಕಾರ್ಯನಿಮಿತ್ತ ತಾವು ಹಾಗೂ ಬಿಜೆಪಿಯ ಮತ್ತೊಬ್ಬ ಮುಖಂಡ ವಿ.ರಾಜು ಅವರುನಗರದ 21ನೇ ವಾರ್ಡ್ ವ್ಯಾಪ್ತಿಯ ಕೊತ್ತಿಪುರ ಬಳಿ ಹೋಗಿದ್ದಾಗ, ಜನರು ಸಾಲುಗಟ್ಟಿ ನಿಂತಿದ್ದನ್ನು ನೋಡಿ ಏನಿದು? ಎಂಬುದನ್ನು ಪರಿಶೀಲಿಸಲಾಗಿ 21ನೇ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಿಕೊಂಡು, ಆ ಪಕ್ಷದ ಸದಸ್ಯತ್ವ ಅಭಿಯಾನ ನಡೆಯತ್ತಿದ್ದ ದೃಶ್ಯ ನಮಗೆ ಗೋಚರಿಸಿತು.
ಈ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತರಾಟೆಗೆ ತೆಗೆದು ಸರ್ಕಾರಿ ಕಟ್ಟಡವನ್ನು ಪಕ್ಷದ ಕೆಲಸಕ್ಕಾಗಿ
ದುರುಪಯೋಗ ಮಾಡಿಕೊಂಡಿದ್ದು ತಪ್ಪು ಎಂದು ಮನವರಿಕೆ ಮಾಡಿಕೊಡಲಾಯಿತು.

ನಮ್ಮ ವಾದಕ್ಕೆ ಬೆಚ್ಚಿದ ಕಾರ್ಯಕರ್ತರು ನಮ್ಮಿಂದ ತಪ್ಪಾಗಿದೆ ಬಿಟ್ಟುಬಿಡಿ ಎಂದು ತಪ್ಪೊಪ್ಪಿಕೊಂಡರು. ಇದೇ ಇಲ್ಲಿನ ಅಂಗನವಾಡಿ ಸಿಬ್ಬಂದಿ ಹಾಗೂ ಸಿಡಿಪಿಒ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿ, ಅವರ ಕರ್ತವ್ಯ ಲೋಪದ ಬಗ್ಗೆ ಮನವರಿಕೆ ಮಾಡಿದೆವು.
ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸಿಡಿಪಿಒ ತಿಳಿಸಿದ್ದಾರೆ. ಈ ಸಂಬಂಧ ಗುರುವಾರ ಜಿಲ್ಲೆಗೆ ಭೇಟಿ ನೀಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ ಹಾಲಪ್ಪ ಬಸಪ್ಪ ಅವರ ಗಮನಕ್ಕೆ ತಂದು ಇಂತಹ ಕಾನೂನು ಬಾಹಿರ ಕೃತ್ಯಗಳು ಇನ್ನು ಮುಂದೆ ನಡೆಯದಂತೆ ತಡೆಗಟ್ಟುವಂತೆ ಮನವಿ ಮಾಡಲಾಗುವುದು ಎಂದು ಡಿ. ನರೇಂದ್ರ ತಿಳಿಸಿದ್ದಾರೆ.