ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವುದು ಸರಿಯೇ ? : ಸಾಮಾಜಿಕ ಕಾರ್ಯಕರ್ತ ಎಸ್.ಬಿ. ಉದಯ್ ಕುಮಾರ್ ಪ್ರಶ್ನೆ

ಬೆಂಗಳೂರು (hairamanagara.in) : ಕರ್ನಾಟಕ ಸಚಿವ ಸಂಪುಟದ ನಿರ್ಣಯದಂತೆ ಒಂದು ಉಪಸಮಿತಿಯನ್ನು ರಚಿಸಲಾಗಿದೆ. ಗೋಮಾಳ ಹುಲ್ಲುಬಾನಿ ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ನೀತಿಯನ್ನು ರೂಪಿಸಲು ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ.

ಈ ಕುರಿತು ಕೆಲವು ಪ್ರಶ್ನೆಗಳು :

  1. ಸರ್ಕಾರ ಯಾವ ಉದ್ದೇಶಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಲು ತೀರ್ಮಾನಿಸಿದೆ ?
  2. ಇದರಿಂದ ರೈತರಿಗೆ ಗ್ರಾಮೀಣ ಜನರಿಗೆ ಪರಿಸರ ರಕ್ಷಣೆಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ?
  3. ಸರ್ಕಾರಿ ಜಮೀನುಗಳನ್ನು ಏಕೆ ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಬೇಕು ಅದರ ಅಗತ್ಯ ಏನಿದೆ?
  4. ಸರಕಾರಿ ಜಮೀನುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳು, ಅಲೆಮಾರಿ ಸಮುದಾಯಗಳು ಗಿರಿಜನರು ದಲಿತರು ತಮ್ಮ ನೆಲೆಗಳನ್ನು ಉದ್ಯೋಗ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡು ಅತಂತ್ರ ರಾಗುವ ಪರಿಸ್ಥಿತಿ ಉಂಟಾಗಬಹುದೇ ?
  5. ಹೊರಗಿನಿಂದ ಬಂದು ನೆಲೆಯೂರುವ ಸಂಘ-ಸಂಸ್ಥೆಗಳು ನಡೆಸುವ ಚಟುವಟಿಕೆಗಳು ಸ್ಥಳೀಯ ಗ್ರಾಮೀಣ ಜನರ ಜೀವನಕ್ಕೆ ಮಾರಕವಾಗಬಹುದೇ?
  6. ಗ್ರಾಮೀಣ ಪ್ರದೇಶದ ಜನರ ಜೀವನ ವ್ಯವಸ್ಥೆಯನ್ನು ಅಲುಗಾಡಿಸಿ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆಯೇ ?
  7. ಇದು ರಿಯಲ್ ಎಸ್ಟೇಟ್ ದಂಧೆಯಾಗಿ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಮತ್ತು ಸ್ವಜನ ಪಕ್ಷಪಾತಕ್ಕೆ ದಾರಿಯಾಗುವುದಿಲ್ಲವೇ ?
  8. ಗ್ರಾಮೀಣ ಭಾಗದ ರೈತಾಪಿ ಜನರು ದನಕರುಗಳನ್ನು, ಕುರಿ ಮೇಕೆಗಳನ್ನು ಮೇಯಿಸಲು ಹುಲ್ಲು ಸೊಪ್ಪು ಸದೆಗಳನ್ನು ತರಲು ಏನು ಮಾಡಬೇಕು ?
  9. ಸರಕಾರಿ ಜಮೀನುಗಳನ್ನು ಖಾಸಗಿಯವರಿಗೆ ಮಂಜೂರು ಮಾಡುವ ನೀತಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಉಳಿದುಕೊಂಡಿರುವ ಹಸಿರು ವಲಯ ಕ್ರಮೇಣ ಕ್ಷೀಣಿಸಿ ಪರಿಸರ ಅಸಮತೋಲನ ಉಂಟಾಗುವುದಿಲ್ಲವೇ ?
  10. ಸರ್ಕಾರದ ಈ ನೀತಿಯಿಂದಾಗಿ ಯಾರಿಗೆ ಲಾಭವಾಗುತ್ತದೆ ? ಕೊನೆಯ ಪ್ರಶ್ನೆ ಸರಕಾರವು ಜಮೀನನ್ನು ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಮಂಜೂರು ಮಾಡುತ್ತದೆಯೇ ಅಥವಾ ಮಾರಾಟ ಮಾಡುತ್ತದೆಯೇ ? ಮೇಲಿನ ಪ್ರಶ್ನೆಗಳ ಆಧಾರದಲ್ಲಿ ಪ್ರಜ್ಞಾವಂತ ನಾಗರಿಕರು ರೈತ ಸಂಘಟನೆಗಳು ಪರಿಸರ ತಜ್ಞರು ಚಿಂತನೆ ನಡೆಸಬೇಕಾಗಿದೆ. ಮೇಲಿನ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವುದು ಸರ್ಕಾರದ ಬಹುಮುಖ್ಯ ಜವಾಬ್ದಾರಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಬಿ. ಉದಯ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *