ರಾಮನಗರ ಜಿಲ್ಲೆಯ ನರೇಗಾ ಕೆಲಸಗಳು ಇತರೆ ಜಿಲ್ಲೆಗಳಿಗೆ ಮಾದರಿ : ಶಿಲ್ಪಾ ನಾಗ್
ಕನಕಪುರ (hairamanagara.in) : ಜಿಲ್ಲೆಯಲ್ಲಿ ಒಣ ಭೂಮಿ ಪ್ರದೇಶ ಹೆಚ್ಚಿನ ಭಾಗವಿದ್ದರು, ಕಳೆದ 2- 3 ವರ್ಷದಿಂದ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ , ಜನರ ಜೀವನೋಪಾಯಕ್ಕೆ ದಾರಿಮಾಡಿಕೊಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರಾದ ಶಿಲ್ಪ ನಾಗ್ ತಿಳಿಸಿದರು.
ಗುರುವಾರ ತಾಲೂಕಿನಲ್ಲಿ ಪ್ರವಾಸ ಕೈಗೊಂಡು, ತೋಕಸಂದ್ರ ಗ್ರಾಮ ಪಂಚಾಯತಿಯ ಗುತ್ತಲಹುಣಸೆ ಗ್ರಾಮದ ಕಲ್ಯಾಣಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಅತೀ ಹೆಚ್ಚು ಮಾನವ ದಿನಗಳ ಸೃಜನೆ ರಾಮನಗರ ಜಿಲ್ಲೆಯಲ್ಲಿ ಆಗಿದ್ದು ಇತರ ಜಿಲ್ಲೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಜಿಲ್ಲಾ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾದ್ಯಂತ ಉತ್ತಮ ತಂಡ ರಚಿಸಿ ನರೇಗಾ ಕಾಮಗಾರಿಗಳನ್ನು ಅನುಷ್ಠಾನಮಾಡಿ ಆಟದ ಮೈದಾನ, ಕಲ್ಯಾಣಿ, ಚೆಕ್ ಡ್ಯಾಮ್, ನಾಲೆ, ಕೆರೆ, ಕಟ್ಟೆಗಳು ಸೇರಿದಂತೆ ಸಾಮುದಾಯ ಹಾಗೂ ವ್ಯಯಕ್ತಿಕ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದ ಎಂದರು.
ಅಂತರ್ಜಲ ವೃದ್ಧಿಸುವ ಮಹತ್ತರ ಕೆಲಸ ಜಿಲ್ಲೆಯಲ್ಲಿ ಕಾಣಬಹುದಾಗಿದ್ದು, ಕನಕಪುರ ತಾಲ್ಲೂಕಿನ ಗುತ್ತಲಹುಣಸೆ ಗ್ರಾಮದ ಕಲ್ಯಾಣಿ ಅಭಿವೃದ್ಧಿ ಆದ ಮೇಲೆ ಸಿಹಿ ನೀರನ್ನು ಗ್ರಾಮಸ್ಥರು ಬಳಸುತ್ತಿದ್ದಾರೆ. ಇದಕ್ಕೂ ಮುನ್ನ ಇಂತಹ ವ್ಯವಸ್ಥೆ ಇರಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 70 ಲಕ್ಷ ಮಾನವ ದಿನಗಳ ಬಳಕೆಯಾಗಿದ್ದು, ಜಿಲ್ಲೆಗೆ ಗುರಿ ಇದ್ದದ್ದು ಕೇವಲ 30 ಲಕ್ಷ , ಇನ್ನು ಹೆಚ್ಚಿನ ಮಾನವ ದಿನಗಳ ಬೇಕು ಎಂಬುದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಗುರಿಗೂ ಮೀರಿ ಸಾಧನೆ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕನಕಪುರ ತಾಲ್ಲೂಕು, ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯತಿ ಕಡಸಿಕೊಪ್ಪ ಗ್ರಾಮದ ಉದ್ಯಾನ ವನಕ್ಕೆ ಭೇಟಿ ನೀಡಿ ನಂತರ ಕೊಳ್ಳಿಗನಹಳ್ಳಿ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಿದರು. ಉದ್ಯಾನ ವನವನ್ನು ವೀಕ್ಷಿಸಿ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಉದ್ಯಾನವನದಲ್ಲಿ ಆಟವಾಡುವತ್ತಿದ್ದ ಮಕ್ಕಳನ್ನು ನೋಡಿ ಸಂತಸದಿಂದ ಮಕ್ಕಳೊಂದಿಗೆ ಮಾತನಾಡಿ ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಮತ್ತು ಸಹಾಯಕ ಅಭಿಯಂತರರ ಜೊತೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
ದ್ಯಾವಸಂದ್ರ ಗ್ರಾಮ ಪಂಚಾಯತಿಯ ಕಾಡುಜಕ್ಕಸಂದ್ರ ಗ್ರಾಮದ ಸ್ಮಶಾನ ಕಾಮಗಾರಿ ವೀಕ್ಷಿಸಿ. ಸ್ಮಶಾನ ಅಭಿವೃದ್ಧಿಯಲ್ಲಿ ನೀರಿನ ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಚಿತಾಗಾರ ವ್ಯವಸ್ಥೆ ವ್ಯವಸ್ಥಿತವಾಗಿದ್ದು, ರಾಮನಗರ ಜಿಲ್ಲೆಯಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವುದು ಉತ್ತಮ ಕೆಲಸವಾಗಿದೆ ಎಂದರು.
ನಾರಾಯಣಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನರೇಗಾ ಅನುಷ್ಠಾನ ಇಲಾಖೆಯಾದ ಸಾಮಾಜಿಕ ಅರಣ್ಯ ವಲಯ ಇಲಾಖೆಯಿಂದ ಇಂಗು ಗುಂಡಿ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಸ್ಥಳಕ್ಕೆ ಮಾನ್ಯ ಆಯುಕ್ತರು ಭೇಟಿ ನೀಡಿ ನರೇಗಾ ಕೂಲಿಗಾರರ ಜೊತೆಗೆ ಮಾತನಾಡಿ ಹೆಚ್ಚಿನ ಮಾನವ ದಿನ ಸೃಜನೆ ಮಾಡಿದ ಕೂಲಿಕಾರರಿಗೆ ಏಪ್ರನ್ ಮತ್ತು ಟೋಪಿ ಗಳನ್ನು ವಿತರಿಸಿದರು.

ಗರಳಾಪುರ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನರೇಗಾ ಯೋಜನೆಯಡಿ ನರ್ಸರಿ ತರಬೇತಿ ಪಡೆಯುತ್ತಿರುವ ಸಂಜೀವಿನಿ ಗುಂಪಿನ ಸ್ವಸಹಾಯ ಸಂಘದ ಮಹಿಳೆಯರಿಂದ ತರಬೇತಿಯಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿ ಪಡೆದರು ಹಾಗೂ ಕೊಡಿಹಳ್ಳಿ ಸರ್ಕಾರಿ ಶಾಲೆ ಆಟದ ಮೈದಾನ, ದೊಡ್ಡಾಲಹಳ್ಳಿ ಕಲ್ಯಾಣಿ ಭೇಟಿನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಕ್ರಮ್ , ಉಪ ಕಾರ್ಯದರ್ಶಿ ಟಿ.ಕೆ.ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಂಗರಾಜು, ಕನಕಪುರ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಮಧು, ಸಹಾಯಕ ನಿರ್ದೇಶಕರು ಮೋಹನ್ ಬಾಬು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.