ಅಂಗನವಾಡಿ ಕೇಂದ್ರಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ : ಸಚಿವ ಆಚಾರ್ ಹಾಲಪ್ಪ ಬಸಪ್ಪ

ರಾಮನಗರ (hairamanagara.in) : ಜಿಲ್ಲೆಯಾದ್ಯಾಂತ ಇರುವ ಅಂಗವಾಡಿ ಕೇಂದ್ರಗಳನ್ನು ಆಧುನಿಕರಣಗೊಳಿಸಬೇಕೆಂಬ ಮಹಾದಾಸೆಯಿಂದ ಜಿಲ್ಲೆಯಲ್ಲಿರುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ತಿಳಿಸಿದರು.
ತಾಲ್ಲೂಕಿನ ತಮ್ಮಣ್ಣದೊಡ್ಡಿಯ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ “ಸ್ಮಾರ್ಟ್ಅಂಗನವಾಡಿ@ರಾಮನಗರ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಮಗುವು ಶಿಕ್ಷಣದಿಂದ ವಂಚಿತರಾಗದೆ ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಡಿಜಿಟಲ್ ಆಧಾರಿತ ತಂತ್ರಜ್ಞಾನದೊಂದಿಗೆ ಕಲಿತು ಸಂತೋಷದಿಂದ ಅಂಗನವಾಡಿಯತ್ತ ಮುಖ ಮಾಡುವಂತಾಗಬೇಕು ಎಂದರು.
ಶಾಲಾ ಪೂರ್ವಹಂತದ ಶಿಕ್ಷಣವೇ ಉತ್ತಮ ಭವಿಷ್ಯದ ಬುನಾದಿ, ಈ ಹಿನ್ನಲೆಯಲ್ಲಿ ಅಂಗನವಾಡಿಗಳಿಗೆ ಉತ್ತಮ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕು. ಮಗುವಿನ ಕ್ಷೇಮಾಭಿವೃದ್ದಿಯೇ ನಮ್ಮ ಮುಖ್ಯಧ್ಯೇಯವಾಗಿದ್ದು, ಸಿ.ಎಸ್.ಆರ್ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸ್ಮಾರ್ಟ್ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಡಿಜಿಟಲ್ ತಂತ್ರಜ್ಞಾನ ಆಧಾರಿತ ಅಂಗನವಾಡಿಯನ್ನು ಜಿಲ್ಲೆಯಾದ್ಯಂತ ಅಳವಡಿಸಬೇಕೆಂಬ ಉದ್ದೇಶವನ್ನು ಹೊಂದಿದ್ದು, ಪ್ರತಿ ಅಂಗನವಾಡಿ ಕೇಂದ್ರವನ್ನು ಸ್ಮಾರ್ಟ್ಅಂಗನವಾಡಿ ಕೇಂದ್ರವನ್ನಾಗಿ ರೂಪಾಂತರಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಬೋಧನೆ ಹಾಗೂ ಕಲಿಕೆಗೆ ಸಂಬಂಧಿಸಿದಂತೆ ಪೂರಕ ಚಟುವಟಿಕೆಗಳು ಹಾಗೂ ದೃಶ್ಯ ಮಾಧ್ಯಮ ಆಧಾರಿತ 2ಡಿ ಹಾಗೂ 3ಡಿ ಅನಿಮೇಶನ್ ಸಂಯೋಜನೆಯೊಂದಿಗೆ ಕಲಿಕಾ ವಿನ್ಯಾಸವನ್ನು ರೂಪಿಸಲಾಗಿದೆ. ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅವಶ್ಯವಿರುವ ಕಲಿಕಾ ಪದ್ದತಿಯನ್ನು ವಿನೂತನ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದು , ಇದು ಮಗುವಿನ ಕಲಿಕಾ ಸಾಮಥ್ರ್ಯ ಆಲೋಚನಾ ಮಟ್ಟ ತಾರ್ಕಿಕಯೋಚನೆ, ಕೌಶಲ್ಯ ಅಭಿವೃದ್ಧಿ ಹಾಗೂ ಸಮನ್ವಯ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ವಿಶೇಷ ಪಾಂಡಿತ್ಯ ಹಾಗೂ ತಂತ್ರಜ್ಞಾನ ತಿಳುವಳಿಕೆ ಒದಗಿಸಿದಂತಾಗಿದೆ ಮುಂಬರುವ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *