ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ : ಕ್ಲೀನ್ ಚೀಟ್ ನೀಡಿದ ಎಸ್ಐಟಿ
ಬೆಂಗಳೂರು (hairamanagara.in) : ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗೆ ಎಸ್ಐಟಿ ತಂಡ ಕ್ಲೀನ್ ಚೀಟ್ ನೀಡಿದೆ. ಈ ಮೂಲಕ ಸಿಡಿ ಪ್ರಕರಣದ ಆರೋಪಿಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಆತ್ಯಾಚಾರ ಎಸಗಿರುವುದಾಗಿ ಯುವತಿ ನೀಡಿದ್ದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.
ಸಾಕ್ಷ್ಯಾಧಾರ ಕೊರತೆ ಹಾಗೂ ತನಿಖೆಯಲ್ಲಿ ಮಾಜಿ ಸಚಿವರ ಪಾತ್ರ ಕಂಡು ಬರದ ಹಿನ್ನೆಲೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಎಸ್ಐಟಿ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಪ್ರಕರಣದ ವಿವರ : ಯುವತಿಯೊಬ್ಬಳಿಗೆ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ಸಚಿವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದ ಸಿಡಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಆರೋಪದ ಹಿನ್ನೆಲೆಯಲ್ಲಿ, ಮಾರ್ಚ್ 3 ರಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಆಗ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪಗೆ ರಾಜೀನಾಮೆ ಪತ್ರ ರವಾನೆ ಮಾಡಿ ತಮ್ಮ ನಿಲುವನ್ನು ತಿಳಿಸಿದ್ದರು.
ಯಡಿಯೂರಪ್ಪ ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಆಗ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರಿಗೆ ಕಳುಹಿಸಿದ್ದರು. ವಜುಭಾಯಿ ವಾಲಾ, ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದಾದ ಬಳಿಕ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿಗೆ ವಹಿಸಿತ್ತು. ಅತ್ತ ಸಂತ್ರಸ್ತ ಯುವತಿ ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು.