ಹಿರಿಯ ಛಾಯಾಗ್ರಾಹಕ ಡಿ.ಸಿ. ನಾಗೇಶ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶೋಕ
ಬೆಂಗಳೂರು (hairamanagara.in) : ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಅವರ ನಿಧನಕ್ಕೆ ಮಾಜಿಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.
ಡಿ.ಸಿ.ನಾಗೇಶ್ ಅವರು ಅತ್ಯಂತ ಪ್ರತಿಭಾನ್ವಿತ, ಸೂಕ್ಷ್ಮ ಮನಸ್ಸಿನ ಛಾಯಾಗ್ರಾಹಕರಾಗಿದ್ದರು. ನಮ್ಮ ಚಿತ್ರರಂಗದ ದಿಗ್ಗಜ ತಾರೆಯರ ನೂರಾರು ಫೋಟೋಗಳನ್ನು ಅವರು ತೆಗೆದಿದ್ದರು.
ಕನ್ನಡ ಚಲನಚಿತ್ರ ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಾಗೇಶ್ ಅವರು ಕ್ಲಿಕ್ಕಿಸಿದ್ದ ತಾರೆಯರ ಸ್ಥಿರ ಚಿತ್ರಗಳು ನಾಡಿನ ಹೆಸರಾಂತ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದವು. ಆ ಮೂಲಕ ಅವರು ಜನರಲ್ಲಿ ಸಿನಿಮಾ ಪ್ರೀತಿಯನ್ನು ಹೆಚ್ಚಿಸಿದ್ದರು.
ನಾಗೇಶ್ ಅವರ ನಿಧನ ಕನ್ನಡ ಸಿನಿಮಾ ರಂಗ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಆ ಭಗವಂತ ದಯಪಾಲಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.