ರಾಮನಗರದಲ್ಲಿ ಫೆ. 9 ರಂದು ಗಿರಿಜನ ಸುರಕ್ಷಾ ವೇದಿಕೆ ವತಿಯಿಂದ “ಬುಡಕಟ್ಟು ಜಿಲ್ಲಾ ಸಮ್ಮೇಳನ”

ಹಾಯ್ ರಾಮನಗರ (hairamanagara.in) 06 ಫೆಬ್ರವರಿ 2022

ರಾಮನಗರ : ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಗಿರಿಜನರು ಹಾಗೂ ಬುಡಕಟ್ಟು ಸಮುದಾಯದವರನ್ನು ಸಂಘಟಿಸುವ ನಿಟ್ಟಿನಲ್ಲಿ ಫೆ.9ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಗಿರಿಜನ ಸುರಕ್ಷಾ ವೇದಿಕೆ ರಾಮನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ರಾಮ್ ಘಡ್ ಹೋಟೆಲಿನ ಸಭಾಂಗಣದಲ್ಲಿ “ಬುಡಕಟ್ಟು ಜಿಲ್ಲಾ ಸಮ್ಮೇಳನ” ವನ್ನು ಆಯೋಜಿಸಲಾಗಿದೆ ಎಂದು ಗಿರಿಜನ ಸುರಕ್ಷಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್. ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರಿಜನ ಹಾಗೂ ಬುಡಕಟ್ಟು ಜನರಿಗೆ ಸರ್ಕಾರದಿಂದ ಸೌಲಭ್ಯ ಗಳನ್ನು ದೊರಕಿಸಿಕೊಡುವ ಸಲುವಾಗಿ ಅಗತ್ಯ ಜನಜಾಗೃತಿ ಮೂಡಿಸಲು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನವನ್ನು ಬೆಂಗಳೂರಿನ ಪೋಲೊಹಳ್ಳಿಯ ಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯೀ ಉದ್ಘಾಟಿಸಲಿದ್ದಾರೆ. ಗಿರಿಜನ ಸುರಕ್ಷಾ ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಲಲಿತಾಬಾಯಿ, ಅರಣ್ಯ ಉಪವಿಭಾಗಾಧಿಕಾರಿ ವಿ. ದೇವರಾಜು, ಗಿರಿಜನ ಸುರಕ್ಷಾ ವೇದಿಕೆಯ ಪ್ರಾಂತ ಸಹಕಾರ್ಯದರ್ಶಿ ವಿ. ಭಾಸ್ಕರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ಶ್ರೀಚಂದ್ ಜೈನ್ ಶಾಂತಿಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಗಿರಿಜನ ಸುರಕ್ಷಾ ವೇದಿಕೆಯ ಬೆಂಗಳೂರು ನಗರ ಸಮಿತಿಯ ಕಾರ್ಯದರ್ಶಿ ಕೃಷ್ಣ ಗುನಗ, ಸಮಾಜ ಸೇವಕರಾದ ಪಿ.ವಿ. ಪ್ರಭಾಕರ್, ಆರ್.ವಿ. ಸುರೇಶ್ ಭಾಗವಹಿಸಲಿದ್ದಾರೆ ಎಂದರು.
ಗಿರಿಜನರ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಗಿರಿಜನ ಸುರಕ್ಷಾ ವೇದಿಕೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಗಿರಿಜನರ ಪರವಾಗಿ ಸರ್ಕಾರವನ್ನು ಆಗ್ರಹಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಿರಿಜನ ಸುರಕ್ಷಾ ವೇದಿಕೆಯ ಬೆಂಗಳೂರು ನಗರ ಸಮಿತಿಯ ಕಾರ್ಯದರ್ಶಿ ಕೃಷ್ಣ ಗುನ, ಗಿರಿಜನ ಸುರಕ್ಷಾ ವೇದಿಕೆಯ ರಾಮನಗರ ಜಿಲ್ಲಾ ಕಾರ್ಯದರ್ಶಿ ಎಸ್. ರಾಜು, ತಾಲ್ಲೂಕು ಪ್ರಮುಖ್ ಎನ್. ಮಹೇಶ ಬಡಿಗೇರ ಇದ್ದರು.

Leave a Reply

Your email address will not be published. Required fields are marked *