ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಪ್ರಕರಣ ದಾಖಲು
ರಾಮನಗರ (hairamanagara.in) : ತಾಲೂಕಿನ ಕೂಟಗಲ್ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವಾಚ್ಯಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಸದಸ್ಯ ಜಗದೀಶ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇರುಳಿಗರದೊಡ್ಡಿ ವಾಸಿ ಎಸ್ .ರಾಜು ದೂರು ದಾಖಲಿಸಿದ್ದಾರೆ.
ಕಳೆದ ಜನವರಿ 24ರಂದು ಕೂಟಗಲ್ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹುಲ್ಲೂರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯ ಜಗದೀಶ್ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಇರುಳಿಗ ಜನಾಂಗದವರಿಗೆ ಮನೆ ಹಾಗೂ ಕುಡಿಯುವ ನೀರಿನಂತಹ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇವರಿಗೆ ಮನೆ ನೀಡಲು ಹಾಗೂ ಕುಡಿಯುವ ನೀರು ಒದಗಿಸಲು ಈ ಜಾಗ ಅವರ ಅಪ್ಪನದ. ಇಲ್ಲಿಗೆ ಅವರನ್ನು ಬರಲು ಹೇಳಿದ್ದು ಯಾರು. ಇವರಿಗೆ ಸರಿಯಾದ ಶಾಸ್ತಿ ಮಾಡದೆ ಬಿಡುವುದಿಲ್ಲ ಎಂದು ಸದಸ್ಯರ ಎದುರು ಜೀವ ಬೆದರಿಕೆವೊಡ್ಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸದಸ್ಯ ಜಗದೀಶ್ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಎಸ್ .ರಾಜು ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆ 2015, ಐಪಿಸಿ 1860ರ ಅಡಿ ಪ್ರಕರಣ ದಾಖಲಿಸಿಕೊಡಿದ್ದಾರೆ.