ಅಪೌಷ್ಠಿಕ ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಎಚ್ಚರಿಕೆ

ಹಾಯ್ ರಾಮನಗರ (hairamanagara.in) 10 ಫೆಬ್ರವರಿ 2022

ರಾಮನಗರ : ಜಿಲ್ಲೆಯಲ್ಲಿ 125 ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಇವರ ಆರೋಗ್ಯ ಹಾಗೂ ಬೆಳವಣಿಗೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಹಾಗೂ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿಶೇಷ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಟಾಸ್ಕ್ ಪೋರ್ಸ್ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೀವ್ರ ಅಪೌಷ್ಠಿಕ ಮಕ್ಕಳನ್ನು ಕೇವಲ ಎನ್.ಆರ್.ಸಿ ಕೇಂದ್ರಗಳಿಗೆ ದಾಖಲೆ ಮಾಡಿ ಚಿಕಿತ್ಸೆ ನೀಡುವುದರಿಂದ ಸರಿಪಡಿಸಲು ಸಾಧ್ಯವಿಲ್ಲ. ತೀವ್ರತರ ಅಪೌಷ್ಠಿಕತೆಗೆ ಪ್ರತಿದಿನ ಮಕ್ಕಳಿಗೆ ಮನೆಯಲ್ಲಿ ನೀಡುವ ಪೋಷಣೆ ಸುತ್ತಮುತ್ತಲಿನ ವಾತಾವರಣ, ದೇಹದ ಒಳಗೆ ಕಾಯಿಲೆಗಳು, ಅನುವಂಶೀಯ ಅಂಶಗಳು  ಹಾಗೂ ಇನ್ನಿತರ ಕಾರಣಗಳಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ಒದಗಿಸಬೇಕು ಎಂದರು.

ಅಂಗನವಾಡಿಯಲ್ಲಿ 0-3 ವರ್ಷದ ಒಳಗಿನ ಮಕ್ಕಳ ಬೆಳವಣಿಗೆ ಚಾರ್ಟ್ ಅನ್ನು ನಿರ್ವಹಿಸಬೇಕು. ಈ ಮಕ್ಕಳಿಗೆ ನೀಡಲಾಗುವ ಪುಷ್ಠಿ ಪೌಡರ್‍ನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪೋಷಕರು ನೀಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಪುಷ್ಠಿ ಪೌಡರ್‍ನ  ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ ಎಂದರು.

ಪ್ರತಿ ಮಾಹೆ ಸರಬರಾಜು ಆಗುವ ಪುಷ್ಠಿ ಪೌಡರ್ ನಲ್ಲಿ ಪೌಷ್ಠಿಕಾಂಶದ ಅಂಶಗಳ ಪರೀಕ್ಷೆಗೆ ಸಿ.ಎಫ್.ಟಿ.ಆರ್. ಐ ಕಳುಹಿಸಿಕೊಡಬೇಕು. ಪರೀಕ್ಷೆಗೆ ಕಳುಹಿಸುವ ಸ್ಯಾಂಪಲ್ ಆಯ್ಕೆ ಮಾಡಲು ಸಮಿತಿ ಸಹ ರಚಿಸಿಕೊಳ್ಳಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನ್ಯಾಯಮೂರ್ತಿ ಶ್ರೀ ವೇಣುಗೋಪಾಲ್ ಸಮಿತಿಯ ವರದಿಯ ರಿಟ್ ಅರ್ಜಿ ಅನುಸಾರ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಬೇಕಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಲ್ ಜೀವನ್ ಮಿಷನ್ ಯೋಜನೆಯಡಿ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ಅಂಗನವಾಡಿಗಳಿಗೆ  ಪುಷ್ಠಿ ಪೌಡರ್ ಹಾಗೂ ಇನ್ನಿತರೆ ಆಹಾರವನ್ನು ಮಹಿಳಾ ಪೌಷ್ಠಿಕ ಉತ್ಪದನಾ ಘಟಕಗಳಿಂದ ಮಾಡಿ ಕೊಡಲು ಸರ್ಕಾರ ಒಪ್ಪಿಗೆ ನೀಡಿದೆ. ಆಹಾರ ತಯಾರಿಕೆ ಹಾಗೂ ಸರಬರಾಜು ನಂತರ ದೊರೆಯುವ ಲಾಭದ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಸರಿಯಾಗಿ ನಿರ್ವಹಿಸಬೇಕು. ಲಾಭಾಂಶದ ಆಧಾರದ ಮೇಲೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಸಂಬಳ ಹೆಚ್ಚಿಸಬೇಕು, ಆರೋಗ್ಯ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ಲೆಕ್ಕ ಪತ್ರದ ನಿರ್ವಹಣೆಯಲ್ಲಿ ಲೋಪ ಕಂಡುಬಂದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಎಚ್ಚರಿಕೆ ನೀಡಿದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಏಪ್ರಿಲ್-2021 ರಿಂದ ಜನವರಿ 2022ರವರಗೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಚನ್ನಪಟ್ಟಣ-1100,ಕನಕಪುರ-1100, ಮಾಗಡಿ-1060 ಮರಳವಾಡಿ -360 ಹಾಗೂ ರಾಮನಗರ-1130 ಒಟ್ಟು 4750 ಗುರಿ ನಿಗಧಿಯಾಗಿದ್ದು, ಚನ್ನಪಟ್ಟಣ-1258, ಕನಕಪುರ-1151, ಮಾಗಡಿ-1136 ಮರಳವಾಡಿ -619 ಹಾಗೂ ರಾಮನಗರ-1401 ಒಟ್ಟು 5565 ಫಲಾನುಭವಿಗಳಿಗೆ ಸಹಾಯಧನ ಒದಗಿಸಿ ಶೇ. 117 ಸಾಧನೆಯಾಗಿರುತ್ತದೆ ಎಂದು ಯೋಜನೆಯ ಸಂಯೋಜನಧಿಕಾರಿ ಸತೀಶ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್ ಸಿ.ವಿ, ನಿರೂಪಣಾಧಿಕಾರಿ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಂದ್ರ, ಸಿದ್ದಲಿಂಗಯ್ಯ, ದಿನೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *