ಫೆ.27 ರಂದು ರಾಷ್ಟ್ರಿಯ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮ : ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ

ಹಾಯ್ ರಾಮನಗರ (hairamanagara.in) 10 ಫೆಬ್ರವರಿ 2022

ರಾಮನಗರ : ಜಿಲ್ಲೆಯಲ್ಲಿ ಫೆಬ್ರವರಿ 27 ರಂದು ರಾಷ್ಟ್ರಿಯ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಪ್ಪದೇ ತಮ್ಮ 0 ಯಿಂದ 5 ವರ್ಷದ ಒಳಗಿನ ಮಗುವಿಗೆ ತಪ್ಪದೇ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಟಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಚನ್ನಪಟ್ಟಣ-18585,  ಕನಕಪುರ-23695, ಮಾಗಡಿ-13777 ಹಾಗೂ ರಾಮನಗರ-24436 ಸೇರಿದಂತೆ ಒಟ್ಟು 80493 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 550 ಲಸಿಕಾ ಕೇಂದ್ರಗಳು, 28 ಟ್ರನ್ಸಿಟ್,  24 ಮೊಬೈಲ್ ಟೀಮ್, 2292 ವ್ಯಾಕ್ಸಿನೇಟರ್ ಹಾಗೂ 120 ಸೂಪರ್‍ವೈಸರ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಫೆಬ್ರವರಿ 27 ರಂದು ಬೂತ್‍ಗಳಲ್ಲಿ, ಫೆಬ್ರವರಿ 28 ಹಾಗೂ ಮಾರ್ಚ್ 1 ರಂದು ಗ್ರಾಮೀಣ ಪ್ರದೇಶ ಹಾಗೂ ಫೆಬ್ರವರಿ 27 ರಿಂದ ಮಾರ್ಚ್ 2 ವರೆಗೆ ನಗರ ಪ್ರದೇಶದ ಮನೆ- ಮನೆ ಭೇಟಿ ಮೂಲಕ ಬೂತ್‍ಗಳಲ್ಲಿ ಲಸಿಕೆ ಪಡೆಯದೆ ಇರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಯೋಜನೆ ಸಿದ್ಧಪಡಸಿ ಲಸಿಕಾ ಕಾರ್ಯಕ್ಕೆ ನಿಯೋಜನೆಯಾಗುವ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ತಿಳಿಸಿದರು.

ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ಇಟ್ಟಿಗೆ ಉತ್ಪದನಾ ಘಟಕ, ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ತಪ್ಪದೇ ಲಸಿಕೆಯನ್ನು ಮಕ್ಕಳಿಗೆ ನೀಡಿ. ಕಾರ್ಮಿಕ ಅಧಿಕಾರಿಗಳು ಸ್ಥಳಗಳನ್ನು ಗುರುತಿಸಿ ಲಸಿಕಾ ಕೆಲಸ ಸಂಘಟಿಸುವಂತೆ ತಿಳಿಸಿದರು.

ಪಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ತಾಯಂದರಿಗೆ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ನೀಡಲು ಸಹಕರಿಸಬೇಕು. ಲಸಿಕೆ ನೀಡುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದರು.

ಬೆಸ್ಕಾಂ ಅವರು ಲಸಿಕೆ ಸಂಗ್ರಾಹಣೆಗೆ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಲಸಿಕೆ ಕಾರ್ಯಕ್ರಮಕ್ಕೆ ಅಂದಾಜು 101 ವಾಹನದ ಅವಶ್ಯಕತೆ ಇದ್ದು, ವಾಹನಗಳ ವ್ಯವಸ್ಥೆ ಮಾಡಬೇಕು. ವಾಹನವು ಫೆಬ್ರವರಿ 26 ರಂದು ಆರೋಗ್ಯ ಇಲಾಖೆ ಅವರು ತಿಳಿಸುವ ಸ್ಥಳಗಳಲ್ಲಿ ವರದಿಯಾಗಬೇಕು ಎಂದರು.

ಆರ್.ಸಿ.ಹೆಚ್. ಅಧಿಕಾರಿ ಡಾ.ಜಿ.ಎಲ್. ಪದ್ಮ ಮಾತನಾಡಿ ಕಳೆದ ಸಾಲಿನಲ್ಲಿ 80348 ಮಕ್ಕಳಿಗೆ ಲಸಿಕೆ ನೀಡಲು ಗುರಿ ನಿಗಧಿಪಡಿಸಲಾಗಿತ್ತು. 85089 ಮಕ್ಕಳಿಗೆ ಲಸಿಕೆ ನೀಡಿ ಶೇ. 10೬ ರಷ್ಟು ಸಾಧನೆ ಮಾಡಲಾಗಿದೆ. ಪೊಲಿಯೋ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಲಸಿಕೆ ಪಡೆದ ನಂತರ ಯಾವುದೇ ಮಗುವಿನಲ್ಲಿ ಅಡ್ಡಪರಿಣಾಮ ವರದಿಯಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್. ಶಶಿಧರ್,  ಡಿ.ಟಿ.ಒ ಡಾ. ಕುಮಾರ್, ಡಿಎಸ್.ಓ ಡಾ. ಕಿರಣ್, ಡಿಎಲ್‍ಒ ಡಾ. ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *