ಜಿಲ್ಲಾ ಕೇಂದ್ರದಲ್ಲಿ ವಾಸ ಮಾಡದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್

ಹಾಯ್ ರಾಮನಗರ (hairamanagara.in) 11 ಫೆಬ್ರವರಿ 2022

ರಾಮನಗರ : ಜಿಲ್ಲಾ ಕೇಂದ್ರದಲ್ಲಿ ವಾಸ ಮಾಡದೆ ದಿನವೂ ಬೆಂಗಳೂರಿನಿಂದ ಓಡಾಡುತ್ತಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಖಡಕ್ ಸೂಚನೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರದಲ್ಲೇ ವಾಸ ಇರಬೇಕು. ಇಲ್ಲದಿದ್ದರೆ ತೀಕ್ಷ್ಣ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಕೆಯ ಸಂದೇಶ ರವಾನಿಸಿದರು. ಸರಕಾರಿ ಅಥವಾ ಸಾರ್ವಜನಿಕ ಉದ್ದೇಶದ ಜಮೀನುಗಳ ಒತ್ತುವರಿಗೆ ಯಾವ ಕಾರಣಕ್ಕೂ ಆಸ್ಪದ ಕೊಡಬಾರದು. ಒತ್ತುವರಿ ಕಂಡುಬಂದಲ್ಲಿ ಮುಲಾಜಿಲ್ಲದೆ ದೂರು ದಾಖಲಿಸಿ, ಮುಂದಿನ ಕ್ರಮ ಜರುಗಿಸಬೇಕು’ ಎಂದರು.

ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿ ಏಪ್ರಿಲ್ ಹೊತ್ತಿಗೆ ಮುಗಿಯಲಿದ್ದು, 375 ಹಾಸಿಗೆಗಳು ಇಲ್ಲಿ ಇರಲಿವೆ. ಆರೋಗ್ಯ ಇಲಾಖೆಗೆ 50.73 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 41,600 ಹೆಕ್ಟೇರಿನಲ್ಲಿ ಬೆಳೆ ಹಾನಿಯಾಗಿದ್ದು, 28 ಕೋಟಿ ರೂ. ಪರಿಹಾರ ನೀಡಲಾಗಿದೆ. 4 ಎಕರೆಯಲ್ಲಿ ಮಾವು ಸಂಸ್ಕರಣ ಘಟಕ ಮತ್ತು ತರಬೇತಿ ಕೇಂದ್ರ ಮಂಜೂರಾಗಿದ್ದು, ಸದ್ಯದಲ್ಲೇ ಇದಕ್ಕೆ ಅಗತ್ಯವಿರುವ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ರೇಷ್ಮೆಗೆ ಆದ್ಯತೆ ನೀಡಿ :

ಜಿಲ್ಲೆಯಲ್ಲಿ ರೇಷ್ಮೆ ಪ್ರಧಾನ ಬೆಳೆಯಾಗಿದ್ದು, ಇದಕ್ಕೆ ಆದ್ಯತೆ ನೀಡಬೇಕು. ಕೀಟನಾಶಕಗಳ ಗುಣಮಟ್ಟ ವನ್ನು ಬಯೋಟೆಕ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ರೈತರಿಗೆ ಒದಗಿಸಬೇಕು ಎಂದು ಅಶ್ವತ್ಥ ನಾರಾಯಣ ನಿರ್ದೇಶಿಸಿದರು.

ಹಾಗೆಯೇ, ಕಣ್ವ ಜಲಾಶಯದಲ್ಲಿ ಮೀನುಗಾರಿಕೆ ಸಂಬಂಧ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ, ಟೆಂಡರ್ ಕರೆಯಬೇಕು. ಜತೆಗೆ, ಮೀನುಗಾರಿಕೆಯಲ್ಲಿ ಆಗಿರುವ ಅಕ್ರಮಗಳನ್ನು ಕುರಿತು ವಿಚಾರಣೆ ನಡೆಸಿ, ತ್ವರಿತವಾಗಿ ವರದಿ ನೀಡಬೇಕು ಎಂದು ಜಿಪಂ ಸಿಇಒ ಅವರಿಗೆ ಸೂಚಿಸಿದರು.

ಮೇ ಹೊತ್ತಿಗೆ ಜಲಜೀವನ್ ಕಾಮಗಾರಿ ಮುಕ್ತಾಯ :

ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಳು ನಡೆಯುತ್ತಿವೆ. ಇದರಡಿ, 2.18 ಲಕ್ಷ ಮನೆಗಳಿಗೆ 24/7 ನೀರು ಪೂರೈಸಲಾಗುವುದು ಎಂದು ಅವರು ವಿವರಿಸಿದರು.

ಶಾಲಾ ಮಕ್ಕಳಿಗೆ ವಾಹನ :

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ತಲಾ ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಶಾಲೆ ಗುರುತಿಸಿ, ಕಡಿಮೆ ಮಕ್ಕಳಿರುವ ಅಕ್ಕಪಕ್ಕದ ಶಾಲೆಗಳ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಿ ಈ ಶಾಲೆಗೆ ಕಳಿಸಿ ಕೊಡಬೇಕು. ಇದು ಪ್ರಾಯೋಗಿಕ ಕ್ರಮವಾಗಿದೆ ಎಂದು ಸಚಿವರು ಹೇಳಿದರು.

ಮಾಗಡಿ ತಹಶಿಲ್ದಾರ ವಿರುದ್ಧ ಗರಂ :

ಕೆರೆ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳದ ಹಾಗೂ ಅಗತ್ಯ ಬಿದ್ದಾಗ ಪೋಲೀಸರಿಗೆ ದೂರು ನೀಡದ ಮಾಗಡಿ ತಹಶಿಲ್ದಾರ್ ಶ್ರೀನಿವಾಸ ಪ್ರಸಾದ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಎಷ್ಟು ಬಾರಿ ಪೋಲಿಸರಿಗೆ ದೂರು ಕೊಟ್ಟಿದ್ದೀರ ಎಂದು ಪ್ರಶ್ನಿಸಿದ್ದಾರೆ

ಸಭೆಯಲ್ಲಿ ಶಾಸಕರಾದ ಮಂಜುನಾಥ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ ಕುಮಾರ್,  ಜಿಪಂ ಸಿಇಒ ಇಕ್ರಂ, ಜಿಲ್ಲಾ ಎಸ್ಪಿ‌ ಸಂತೋಷ ಬಾಬು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *