ಮೀನು ಸಾಕಾಣಿಕೆ ಕೆರೆಗಳನ್ನು ಹರಾಜು ಮಾಡುವಾಗ ಸ್ವಸಹಾಯ ಗುಂಪುಗಳಿಗೂ ಅವಕಾಶ ನೀಡಿ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಹಾಯ್ ರಾಮನಗರ (hairamanagara.in) 11 ಫೆಬ್ರವರಿ 2022
ರಾಮನಗರ : ಜಿಲ್ಲೆಯಲ್ಲಿ ಮೀನು ಸಾಕಾಣಿಕೆಗೆ ಕೆರೆಗಳನ್ನು ಗುರುತಿಸಿ, ಅವುಗಳನ್ನು ನಿಯಮಾನುಸಾರ ಹರಾಜು ಮಾಡಬೇಕು. ಇದರಲ್ಲಿ ಸ್ವಸಹಾಯ ಗುಂಪುಗಳಿಗೂ ಪಾಲ್ಗೊಳ್ಳಲು ಅವಕಾಶ ನೀಡಿ ಎಂದು ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಹಾಗೂ ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲಭಿವೃದ್ಧಿ, ಜಿವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆ ಹಾಗೂ ರಾಮನಗರ ಜಿಲ್ಲಾ ಉಸ್ತುವರಿ ಸಚಿವ ಡಾ. ಅಶ್ವತ್ಥ ನಾರಾಯಣ ಸಿ.ಎನ್ ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ.ಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಣ್ವ ಜಲಾಶಯದಲ್ಲಿ ಮೀನು ಸಾಕಾಣಿಕೆ ಸಂಬಂಧ ಟೆಂಡರ್ ಆಗಿ ಮೀನು ಸಾಕಾಣಿಕೆ ನಡೆಯುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲಾ ಇಲಾಖೆಗಳು ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬೇಕು . ಆಗ ಮಾತ್ರ ಹೆಚ್ಚಿನ ಕೆಲಸ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯ. ಆಸ್ಪತ್ರೆ, ಅಂಗನವಾಡಿ, ವಿದ್ಯಾರ್ಥಿನಿಲಯಗಳ ನಿರ್ಮಾಣ ಸಂಬಂಧ ಸ್ಥಳ ಗುರುತಿಸುವ ಕೆಲಸ ಚುರುಕುಗೊಳ್ಳಬೇಕು. ಸ್ಥಳ ನಿಗಧಿಯಾದರೆ ನಿರ್ಮಾಣಕ್ಕೆ ಅನುದಾನವನ್ನು ಪಡೆದುಕೊಳ್ಳಬಹುದು ಎಂದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟಲ್ಗಳಲ್ಲಿ ದಾಖಲಾತಿ ಆಗುವ ವಿದ್ಯಾರ್ಥಿಗಳ ಮಾಹಿತಿ ಪಡೆದ ಸಚಿವರು, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಇರುವ ಹಾಸ್ಟಲ್ಗಳಲ್ಲಿ ಸ್ಥಳ ಪಡೆದು ಇಲಾಖೆ ವತಿಯಿಂದ ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆಸಿ ಎಂದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಪ್ರಾಧನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೀಡಲಾಗುವ ಸಹಾಯಧನದ ನಿಗಧಿಪಡಿಸುವ ಬಗ್ಗೆ ಇರುವ ತೊಂದರೆ ಪರಿಹಾರವಾಗಿದ್ದು, ನಿಗಧಿಪಡಿಸಿರುವ ಗುರಿ ಸಾಧಿಸಿ ಎಂದರು.

ರಾಮನಗರದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಿದ್ದು, ರೇಷ್ಮೆ ಬೆಳೆಗಳಿಗೆ ಸೋಂಕು ನಿವಾರಕಗಳು ಶೀಘ್ರವಾಗಿ ದೊರಕಬೇಕು ಹಾಗೂ ಯಾವುದೇ ರೀತಿಯಲ್ಲಿ ರೇಷ್ಮೆ ಬೆಳೆಗೆ ತೊಂದರೆಯಾಗಬಾರದು. ಈ ಹಿನ್ನಲೆಯಲ್ಲಿ ಹೆಚ್ಚು ಜೀವ ತಂತ್ರಜ್ಞಾನ ಲ್ಯಾಬ್ಗಳನ್ನು ಸಂಪರ್ಕಿಸಿ ಕೀಟನಾಶಕಗಳನ್ನು ಪಡೆದುಕೊಳ್ಳುವುದು ಉತ್ತಮ ಎಂದರು.
ರೇಷ್ಮೆ ಇಲಾಖೆ ವ್ಯಾಪ್ತಿಗೆ ಬರುವ 147 ರೇಷ್ಮೆ ಬಿತ್ತನೆಗೆ ಸಂಬಂಧಿಸಿದ ಕಟ್ಟಡಗಳು ಖಾಲಿ ಇದ್ದು, ಕೆಲವು ನಿರುಪಯುಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಅವರು ತಿಳಿಸಿದಾಗ, ಸಚಿವರು ಈ ಕಟ್ಟಡಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅವಶ್ಯಕವಿರುವ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ನೀಡಬೇಕು ಎಂದರು.
ಮಾವು ಇಳುವರಿ ಜಿಲ್ಲೆಯಲ್ಲಿ ಈ ಬಾರಿ ಮೇ ಅಂತ್ಯ ಹಾಗೂ ಜೂನ್ನಲ್ಲಿ ದೊರೆಯಲಿದ್ದು, ಇದೇ ವೇಳೆಯಲ್ಲಿ ಕೋಲಾರ ಜಿಲ್ಲೆಯಲ್ಲೂ ಇಳುವರಿಯಾಗಲಿದೆ. ರೈತರಿಗೆ ಉತ್ತಮ ಬೆಲೆ ದೊರಕುವ ರೀತಿ ಯೋಜನೆಗಳನ್ನು ರೂಪಿಸಬೇಕು ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಮಾತನಾಡಿ ಮಾವು ಮಾರಾಟಕ್ಕೆ ಸಂಬಂಧಿಸಿದಂತೆ ಮಾವು ಮೇಳ ನಡೆಸಲು, ಮಾರಾಟದಾರರು- ಖರೀದಿದಾರರ ಮೇಳ, ಎಫ್ ಪಿ ಓ ಗಳೊಂದಿಗೆ ಚರ್ಚೆ ಸಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಇಲಾಖಾವಾರು ಸಾಧಿಸಿರುವ ಪ್ರಗತಿಯನ್ನು ಸಭೆಗೆ ವಿವರಿಸಿದರು. ವಸತಿ ಯೋಜನೆಯಡಿ 1929 ಗುರಿ ನಿಗಧಿಯಾಗಿದ್ದು, ಜನವರಿ 2022 ರ ಅಂತ್ಯಕ್ಕೆ 1441 ಮನೆ ಪೂರ್ಣಗೊಳಿಸಿದ್ದು, ಶೇ. 75 ಸಾಧನೆದಯಾಗಿರುತ್ತದೆ. ನವೆಂಬರ್ ಮಾಹೆಯಲ್ಲಿ 54 ಮಿ.ಮೀ ವಾಡಿಕೆ ಮಳೆಗೆ 217 ಮಿ.ಮೀ ಮಳೆಯಾಗಿದ್ದು ಅತೀ ಹೆಚ್ಚು ಮಳೆಯಿಂದಾಗಿ ಜಂಟಿ ಸಮೀಕ್ಷೆ ವರದಿ ಅನ್ವಯ ಕೃಷಿ ಬೆಳೆಗಳ 41644 ಹೆಕ್ಟೇರ್ ಪ್ರದೇಶದಲ್ಲಿ ಶೇ. 33ರಷ್ಟು ಬೆಳೆ ನಷ್ಟವಾಗಿರುತ್ತದೆ. ಜಿಲ್ಲೆಯಲ್ಲಿ 78189 ರೈತರಿಗೆ ರೂ 2818.32 ಲಕ್ಷಗಳ ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿರುತ್ತದೆ ಎಂದರು
ಪಿ.ಎಂ ಕಿಸಾನ್ ಯೋಜನೆಯಡಿ ಇದುವರೆಗೆ ಭಾರತ ಸರ್ಕಾರದಿಂದ ರಾಮನಗರ ಜಿಲ್ಲೆಯ 118175 ರೈತರಿಗೆ ರೂ. 182.93 ಕೋಟಿಗಳು ಮತ್ತು ರಾಜ್ಯಸರ್ಕಾರದ ಕಂತು ರೂ 62.91 ಕೋಟಿಗಳು ಒಟ್ಟಾರೆ ರೂ. 245.54 ಕೋಟಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡಿ ಕೋವಿಡ್ ನಿಂದ ಮರಣಹೊಂದಿದವರಿಗೆ ಪರಿಹಾರಕ್ಕಾಗಿ ಮೊದಲ ಹಂತದಲ್ಲಿ 337 ಅರ್ಜಿ ಸ್ವೀಕೃತವಾಗಿದ್ದು, 291 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 46 ಪ್ರಕರಣಗಳಲ್ಲಿ ವಿಳಾಸ, ವಾರಸುದಾರರು ಹಾಗೂ ಇನ್ನಿತರೆ ಸಮಸ್ಯೆಗಳಿದ್ದು, ಪರಿಹಾರ ಪಾವತಿಯಾಗಿರುವುದಿಲ್ಲ. ಎರಡನೇ ಹಂತದಲ್ಲಿ ಜಿಲ್ಲಾ ನಿವಾಸಿಯಾಗಿದ್ದು, ಹೊರಜಿಲ್ಲೆಯಲ್ಲಿ ಮರಣ ಹೊಂದಿದ್ದು, ಕೋವಿಡ್ ಲೈಕ್ ಸಿಂಡ್ರೋಮ್ ನಿಂದ ಮರಣ ಹೊಂದಿರುವವರು 424 ಅರ್ಜಿಗಳು ಸ್ವೀಕೃತವಾಗಿದ್ದು, 389 ಅರ್ಜಿಗಳನ್ನು ಪರಿಶೀಲಿಸಿ ಪರಿಹಾರಕ್ಕಾಗಿ ಅಪ್ ಲೋಡ್ ಮಾಡಲಾಗಿದೆ ಎಂದರು.
ಮನೆ ಹಾನಿಗೆ ಸಂಬಂಧಿಸಿದಂತೆ ಎ,ಬಿ,ಸಿ ಮೂರು ಹಂತದಲ್ಲಿ ಒಟ್ಟು 425 ಮನೆಗಳನ್ನು ಗುರುತಿಸಿ 2 ಕೋಟಿ 70 ಲಕ್ಷ ರೂ ಪರಿಹಾರ ನೀಡಲಾಗಿದೆ. ಸಾಮಾಜಿಕ ಪಿಂಚಣಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ 12,601 ಜನರು ಮರಣ ಹೊಂದಿದ ನಂತರವು ಅವರ ಖಾತೆಗೆ ಪಿಂಚಣಿ ಜಮೆಯಾಗುತ್ತಿದ್ದನ್ನು ಪತ್ತೆ ಮಾಡಿ ರದ್ದುಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಮಾಗಡಿ ಶಾಸಕ ಎ. ಮಂಜುನಾಥ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಉಪಸ್ಥಿತರಿದ್ದರು.