ಜನಪದ ಕಲಾವಿದರ ಪಾಲಿಗೆ ಜಾನಪದ ಲೋಕವೇ ಕಾಶಿ : ಇಲ್ಲಿ ನಾಗೇಗೌಡರೇ ದೇವರು : ಟಿ. ತಿಮ್ಮೇಗೌಡ

ಹಾಯ್ ರಾಮನಗರ (hairamanagara.in) 13 ಫೆಬ್ರವರಿ 2022

ರಾಮನಗರ : ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತಿ ತಿಂಗಳು ನಾಡೋಜ ಎಚ್.ಎಲ್ ನಾಗೇಗೌಡರ ಹೆಸರಿನಲ್ಲಿ ಲೋಕಸಿರಿ ಪ್ರಶಸ್ತಿಯನ್ನು ಕೊಡುವುದು ನನ್ನ ಕನಸ್ಸಾಗಿದ್ದು, ನಾಗೇಗೌಡರ ಹೆಸರು ಕಲಾವಿದರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಈ ಪ್ರಶಸ್ತಿಯನ್ನು ಆರಂಭಿಸಲಾಯಿತು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ವೀರಮಕ್ಕಳ ಕುಣಿತ ಕಲಾವಿದ ಸೀನಪ್ಪಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಇನ್ನೂಇಂಥಹ ಅನೇಕ ಕಲಾವಿದರನ್ನು ಗುರುತಿಸಿ ಲೋಕೋತ್ಸವದಲ್ಲಿ ಪ್ರಶಸ್ತಿಗಳನ್ನು ನೀಡಿಗೌರವಿಸಲಾಗುತ್ತಿದೆ. ಭಕ್ತರು ದೇವರನ್ನು ನೋಡಲು ಕಾಶಿಗೆ ಹೋದರೆ ಜನಪದರ ಪಾಲಿಗೆ ಜಾನಪದ ಲೋಕವೇ ಕಾಶಿ. ಇಲ್ಲಿ ನಾಗೇಗೌಡರೇ ದೇವರು. ದೆಹಲಿಯ ಗಣರಾಜ್ಯೋತ್ಸವದಲ್ಲಿ ಜನಪದ ಕಲೆಗಳು ಪ್ರದರ್ಶನವಾಗುತ್ತಿರುವುದು ಜನಪದಕ್ಕಿರುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ ಎಂದು ತಿಳಿಸಿದರು.

ಜಾನಪದ ವಿದ್ವಾಂಸ ಡಾ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ ಅಳಿವಿನಂಚಿನಲ್ಲಿರುವ ಅಪರೂಪದ ಇಂಥಹ ಕಲಾವಿದರನ್ನು, ಕಲೆಗಳನ್ನು ಗುರುತಿಸುವ ಮತ್ತು ಅವರನ್ನುಗೌರವಿಸುವ ಕೆಲಸ ಪರಿಷತ್ತಿನಿಂದ ನಡೆಸುತ್ತಿರುವುದಕ್ಕೆ ಅಧ್ಯಕ್ಷರಿಗೆ ಅಭಿನಂದನೆಗಳನ್ನು ತಿಳಿಸಿದರು.

ಹಿರಿಯ ಜನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಮಾತನಾಡಿ ಇಂತಹ ಅಪರೂಪದ ಕಲೆಗಾರರನ್ನು ಗುರುತಿಸಿ ಗೌರವಿಸುತ್ತಿರುವುದು ದಕ್ಷ ಆಡಳಿತಾಧಿಕಾರಿ ತಿಮ್ಮೇಗೌಡರಿಗೆ ಸಲ್ಲಬೇಕು. ತಿಮ್ಮೇಗೌಡರು ಜಾನಪದ ಲೋಕದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷ ಎಂದು ತಿಳಿಸಿದರು.

ವೀರಮಕ್ಕಳ ಕುಣಿತ ಕಲಾವಿದ ಸೀನಪ್ಪ ಮಾತನಾಡಿ ನನ್ನ ಗುರುಗಳಾದ ಕೊತ್ತತ್ತಿಯ ಕರಿಯಪ್ಪರನ್ನು ನೆನೆದುಹಾಡು, ಕುಣಿತದೊಂದಿಗೆ ಅಪರೂಪದ ಕಲೆಯನ್ನು ಚಕ್ರಾದಿಬಳೆ ವಾದ್ಯವನ್ನು ನುಡಿಸಿ ಕಲೆ ಪ್ರದರ್ಶಿಸಿದರು.

ಮಾರಮ್ಮನ್ನುಕುರಿತು ಹಾಡುತ್ತಾ

ಲಿಂಗವೇ ಬಾ ಸ್ವಾಮಿ | ಲಿಂಗವೇ ಬಾ

ಯಾವ ನಾಡಿನ ಮೇಲೆ | ಲಿಂಗವೇ ಬಾ

ಹಚ್ಚ ಹಸುರುಒಡೆದ ಹೊಂಬಾಳೆ ಒಳಗೆ | ಲಿಂಗವೇ ಬಾ

ತೂಗುತ್ತಾ ಬಾಗುತ್ತಾ | ಲಿಂಗಾ ಬಾ

ರಾಜಾ ಬೀದಿ ಒಳಗೆ | ಲಿಂಗಾ ಬಾ. . . . . . ಎನ್ನುತ್ತಾ ಹಾಡಿ ತೆಂಗಿನ ಕಾಯಿ ಪವಾಡವನ್ನು ಮಾಡಿದರು.

ಚನ್ನಪಟ್ಟಣ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪದ್ಮನಾಭ. ಆರ್, ಉಪಸ್ಥಿತರಿದ್ದರು. ಕ್ಯೂರೇಟರ್‍ ಡಾ.ಯು.ಎಂ. ರವಿ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಂಗ ಸಹಾಯಕರಾದ ಪ್ರದೀಪ್. ಎಸ್ ನಿರೂಪಿಸಿದರು. ರಾಮನಗರಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಸಿಂ.ಲಿಂ.ನಾಗರಾಜು, ಕಲಾಸಕ್ತರು, ಕಲಾವಿದರು, ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *