ಜಿಲ್ಲೆಯಲ್ಲಿ ಅಹಿತಕರ ವಾತಾವರಣ ಸೃಷ್ಟಿಸಲು ಮುಂದಾದಲ್ಲಿ ಅಂತಹವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಎಚ್ಚರಿಕೆ
ಹಾಯ್ ರಾಮನಗರ (hairamanagara.in) 13 ಫೆಬ್ರವರಿ 2022
ರಾಮನಗರ ಜಿಲ್ಲೆಯು ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರಾಗಿದ್ದು, ಇಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ರಾಮನಗರ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ರಾಮನಗರ : ಯಾರಾದರೂ ಅಹಿತಕರ ವಾತಾವರಣ ಸೃಷ್ಟಿಸಲು ಮುಂದಾದಲ್ಲಿ ಅಂತಹವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ರಾಮನಗರವು ಶಾಂತಿಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಹಿಜಾಬ್ – ಕೇಸರಿ ಶಾಲಿನ ಹೆಸರಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಮುದಾಯಗಳ ಮಧ್ಯೆ ಒಡಕು ಮೂಡಿಸಿ ಶಾಂತಿ ಕದಡುವ ಯತ್ನವನ್ನು ಯಾರೊಬ್ಬರೂ ಮಾಡಬಾರದು. ಸದ್ಯ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಅದಕ್ಕೆ ನಾವೆಲ್ಲರೂ ಬದ್ಧರಾಗಿ ನಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾತನಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಯಾರು ಸಹ ಮುಂದಾಗದೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಹೋದರರಂತೆ ಬದುಕುತ್ತಿದ್ದೇವೆ, ಮುಂದೆಯೂ ಅದೇ ರೀತಿ ಇರುತ್ತೇವೆ :
ಜಿಲ್ಲೆಯಲ್ಲಿ ಎರಡೂ ಸಮುದಾಯಗಳ ಜನರು ಸಹೋದರರಂತೆ ಬದುಕುತ್ತಿದ್ದೇವೆ. ಮುಂದೆಯೂ ಅದೇ ರೀತಿ ಇರುತ್ತೇವೆ ಎಂದು ಉಭಯ ಸಮುದಾಯಗಳ ಮುಖಂಡರು ಭರವಸೆ ನೀಡಿದರು.
ವಿಡಿಯೋ ವೈರಲ್ :
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಸಂತೋಷ್ ಬಾಬು ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಅವರಯ ಸಭೆಯಲ್ಲಿ ಮಾತನಾಡಿದರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲ ಏನಿದೆ :
“ರಾಮನಗರ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕಿದ್ದಾರೆ. ನಾನು ಇದೇ ಜಿಲ್ಲೆಯವನಾಗಿದ್ದು, ಈ ಜಿಲ್ಲೆಯ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ. ಯಾವನೂ ಕೂಡ ಈ ಜಿಲ್ಲೆಯನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಯಾವನಾದ್ರೂ ಹಾಳು ಮಾಡಲಿಕ್ಕೆ ಬಂದರೆ ಅವನು ಯಾಕೆ ಹುಟ್ಟಿದೆ ಅಂತ ಅನ್ನಿಸುತ್ತೇನೆ. ಕೋಮು ಸಾಮರಸ್ಯ, ಅಕ್ರಮ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಜಾಗ ಇಲ್ಲ. ಅದನ್ನು ಸಹಿಸಿಕೊಳ್ಳುವ ತಾಳ್ಮೆಯೂ ನನಗಿಲ್ಲ. ಯಾರ ಕೈಯಲ್ಲಿ ಹೇಳಿಸಿಕೊಂಡು ಬರುತ್ತೀರೋ ಬನ್ನಿ. ಯಾರನ್ನೂ ನಾನು ಬಿಡುವುದಿಲ್ಲ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಗುಡುಗಿದ್ದಾರೆ.