ಎಸ್. ಮಹದೇಶನಾಯ್ಕ ಅವರ ಲೇಖನ “ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ್ ಮಹಾರಾಜರು”
ಹಾಯ್ ರಾಮನಗರ (hairamanagara.in) 14 ಫೆಬ್ರವರಿ 2022
ಕತ್ತಲನ್ನು ಹೊಡೆದೋಡಿಸಿ ಬೆಳಕನ್ನುಂಟು ಮಾಡಿದ ಸಮಾಜ ಸುಧಾರಕರಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರು ಒಬ್ಬರು. ಬ್ರಹ್ಮಚಾರಿಯಾಗಿ ಧ್ಯಾನ, ಭಕ್ತಿ, ಮಾರ್ಗದಲ್ಲಿ ಬಂಜಾರ ಸಮುದಾಯದ ಸೇವೆ ಮಾಡಿ ಜನಾಂಗದ ರಕ್ಷಕರಾಗಿ, ಅವತರಿಸಿ ಬಂದ ದೈವ ಮಾನವ ಶ್ರೀ ಸಂತ ಸೇವಾಲಾಲ್.
ಲಂಬಾಣಿಗರು ನಿಸರ್ಗದ ಮಡಿಲಲ್ಲಿಯೇ ಹುಟ್ಟಿ ಬೆಳೆದ ಸಮುದಾಯ. ಉತ್ತರಭಾರತದಿಂದ ವಲಸೆ ಬಂದು ದೇಶದ ನಾನಾ ರಾಜ್ಯಗಳಲ್ಲಿ ಅಲೆಮಾರಿಯಾಗಿ ಜೀವಿಸುವಂತಾಗಿತ್ತು. ಸು.17-18ನೇ ಶತಮಾನದ ಕಾಲಘಟ್ಟಕ್ಕೆ ಪವಾಡ ಪುರುಷ, ಜನಾಂಗದ ಉಳಿವಿಗಾಗಿ ಶ್ರಮಿಸಿದ ಮಹಾನ್ ಸಂತರಾಗಿ ಲಂಬಾಣಿಗರ ಆರಾಧ್ಯದೈವರಾಗಿ ಕ್ರಿ.ಶ. 1739ರ ಫೆಬ್ರವರಿ 15 ರಂದು ಶಿವರಾತ್ರಿಯ ದಿನ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ತಂದೆ ಭೀಮಾನಾಯ್ಕ ದೊಡ್ಡ ವ್ಯಾಪಾರಿ, ತಾಯಿ ಆಂಧ್ರ ಪಾಂತ್ಯದ ಚಿತ್ತೂರ್‍ನ ಜೈರಾಮ್‍ಜಾದವ್‍ರ ಮಗಳು ಧರ್ಮಣಿ ಬಾಯಿಯ ಮಗನಾಗಿ ಸೇವಾಲಾಲ್‍ರು ಜನಿಸಿದರು. ಗೋವು ಪ್ರಿಯರಾದ ಸಂತ, ಅನೇಕ ಪವಾಡಗಳನ್ನು ಮಾಡುವುದರ ಮೂಲಕ ಪ್ರಸಿದ್ಧಿಯಾಗಿರುವ ಪ್ರತೀತಿ ಇದೆ.
ಭರತ ಖಂಡದಲ್ಲಿ ಸ್ವತಂತ್ರ್ಯ ಸಂಗ್ರಾಮದ ಕಿಡಿ ಶುರುವಾಗುತ್ತಿದ್ದ ಸಂದರ್ಭ ಪಾಶ್ಚಿಮಾತ್ಯರ ಅಟ್ಟಹಾಸ ದಕ್ಷಿಣ ಭಾರತದಲ್ಲಿ ಎತ್ತೇಚ್ಚವಾಗಿ ಹರಡಿ ದೇಸಿಯ ಸಂಸ್ಥಾನಗಳು ಪಾಶ್ಚಿಮಾತ್ಯರ ಕೈ ಗೊಂಬೆಯ ಕಾಲಘಟ್ಟದಲ್ಲಿ ಮರಾಠರು, ಸುಲ್ತಾನರು, ಮೊಘಲರ ಸೇನೆಗಳಿಗೆ ಆಹಾರ, ದವಸ-ಧಾನ್ಯಗಳನ್ನು ಸರಬರಾಜು ಮಾಡುತ್ತಿದ್ದ ಜನಾಂಗ ಹಾಗೂ ಗುಪ್ತ ಗೂಡಾಚಾರಿ ಸೇನೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಸಮುದಾಯ. ಪಾಶ್ಚಿಮಾತ್ಯರ ವಿರುದ್ಧ ಹೋರಾಟ ಮನೋಭಾವ ಬೆಳೆಸಿದ ಕೀರ್ತಿ ಸೇವಾಲಾಲ್‍ರಿಗೆ ಸಲ್ಲುತ್ತದೆ.

ಧಾರ್ಮಿಕ ಸುಧಾರಕ ಸೇವಾಲಾಲ್ ದೇಶ ಪರ್ಯಟನೆ ಮಾಡಲು ಸೂರಗೊಂಡನ ಕೊಪ್ಪ ಬಿಟ್ಟು ದೇಶ ಸಂಚಾರಕ್ಕೆ ಹೊರಡಿರುವಾಗ ಪೂರ್ವ ದಿಕ್ಕಿನಲ್ಲಿ ಕೊಪ್ಪಳಕ್ಕೆ ಬಂದು ಬಹದ್ದೂರ ಬಂಡಾದಲ್ಲಿ ಬಂಜಾರ ಜನಾಂಗವು ಸೇರಿ ಹೋಳಿ ಹಬ್ಬ ಆಚರಿಸಿದರು, ಈ ಕಾರಣಕ್ಕಾಗಿ ಇಂದಿಗೂ ಹೋಳಿ ಹಬ್ಬ ದೇಶಾದ್ಯಂತ ಆಚರಿಸುವ ಹಬ್ಬವಾಗಿದೆ.
ಬದುಕಿನುದ್ದಕ್ಕೂ ಆಜನ್ಮ ಬ್ರಹ್ಮಚಾರಿಯಾಗಿದ್ದ ಸೇವಾಲಾಲ್‍ರು, ಸಮುದಾಯ ಜನರಿಗೆ ಒಂದೇ ಕಡೆ ಶಾಶ್ವತವಾಗಿ ನೆಲೆಯೂರಲು ಮಾರ್ಗದರ್ಶಕÀ ರಾದರು. ‘ಅಲೆ ಮಾರಿ ಜೀವನ ಅಳಿಸಿ’. ತಾಂಡ (ಗ್ರಾಮ) ನಿರ್ಮಾಣಕ್ಕೆ ನಾಂದಿಯಾದರು. ಬಂಜಾರರ ಸಂಸ್ಕøತಿ, ಆಚಾರ, ವಿಚಾರ, ಆಹಾರ ಪದ್ಧತಿ, ನಾಟಿ ವೈದ್ಯ ಪದ್ಧತಿ ಲಂಬಾಣಿಗರು ತಮ್ಮದೇ ಆದ ವೈದ್ಯ ಪದ್ಧತಿ ರೂಢಿಸಿಕೊಂಡಿದ್ದರು. ಇದು ಪರಂಪರೆಯಾಗಿ ಬಂದಿರುವುದು ಕಾಣಬಹುದು. ನಿಸರ್ಗ ಪ್ರೇಮಿಯಾಗಿ ವ್ಯವಸಾಯ, ಪಶುಪಾಲನೆ ಮಾಡಲು ತಿಳವಳಿಕೆ ನೀಡಿ. ಸಮುದಾಯದ ಪುನರುಜ್ಜೀವನಕ್ಕೆ ದಾರಿ ತೋರಿದ ಯುಗಪುರುಷ ಸಂತರಾದರು.
‘ಭವಿಷ್ಯ ವಾಣಿ’
‘ರಪಿಯಾ ಕಟೊರೋ ಪಾಣಿ ವಕಿಯ, ರಪಿಯಾನ ತೇರ ಚಾಣ ವಕಿಯಾ’ [ಲಂಬಾಣಿ ಭಾಷೆಯಲ್ಲಿ] ಇದರ ಅರ್ಥ. ರೂಪಾಯಿಗೆ ಒಂದು ಬಟ್ಟಲು ನೀರು ಮಾರಾಟವಾಗುತ್ತದೆ. ಹಾಗೆಯೇ ರೂಪಾಯಿಗೆ ಹದಿಮೂರು ಕಡಲೆ ಮಾರುತ್ತಾರೆ. ಎಂದು ಭವಿಷ್ಯವಾಣಿ ನುಡಿದ ಪ್ರತೀತಿ ಇದೆ.
ಸಂತ ಸೇವಾಲಾಲರು ತಮ್ಮ ಪ್ರವಾಸಕ್ಕೆ ‘ಗರಸಿಯಾ’ ಎಂಬ ಕುದುರೆಯೇರಿ ಜೀವನ ಪರ್ಯಾಂತ ಅಲೆಮಾರಿ ಸಮುದಾಯಗಳ ಉದ್ಧಾರಕ್ಕೆ ಶ್ರಮಿಸುತ್ತಾರೆ. ಮಾರಿಕಾಂಬೆಯ ದೇವಿ ಶಕ್ತಿಯನ್ನು ಹೊಂದಿದ್ದ ಇವರು ತಮ್ಮ ಈ ಶಕ್ತಿಯನ್ನು ಜನರ ಒಳಿತಿಗಾಗಿ ಮಾತ್ರ ಬಳಸುತ್ತಾ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ್, ಮಾರ್ಗವಾಗಿ ದೆಹಲಿಯವರೆಗೆ ಸಂಚರಿಸಿ ಜನ ಕಲ್ಯಾಣದಲ್ಲಿ ತೊಡಗಿದ್ದವರು. ಇವರ ಜನಪ್ರಿಯತೆಗೆ ಮತ್ತು ಅನುಯಾಯಿಗಳ ಸಂಖ್ಯೆ ಕಂಡು ಶಂಕೆಗೊಳಗಾಗಿದ್ದ ಹೈದರಾಬಾದ್ ನಿಜಾಮರ ಶಂಕೆಯನ್ನು ಅಳಸಿ ಅವರ ರಾಜ್ಯಕ್ಕೆ ಬಂದೊದಗಿದ್ದ ಆಪತ್ತಿನಿಂದ ಪಾರು ಮಾಡಿ ಅವರ ಮನ್ನಣೆಗೂ ಪಾತ್ರರಾಗುತ್ತಾರೆ.
ಸೇವಾಭಾಯ ಅಂದರೆ ಸೇವಾ+ಮನೋಭಾವವುಳ್ಳ ಭಾಯ+ಸಹೋದರ ಸೇವಾಲಾಲ್ ‘ಜನಾಂಗ ಸೇವೆಯೇ ದೇವರ ಸೇವೆ’ ಎಂದು ಭಾವಿಸಿ ಸೇವೆ ನೀಡುತ್ತಿದ್ದ ಸಂತ. ಮಹಾರಾಜರು ತಮ್ಮ ಕೊನೆಯ ದಿನಗಳನ್ನು ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೊಲ ತಾಲ್ಲೂಕಿನ ಬಳಿಯ ಪೊಹರಾಗಡ ಎಂಬಲ್ಲಿ ಕ್ರಿ.ಶ.1806 ಡಿಸೆಂಬರ್ 4 ರಂದು ಐಕ್ಯರಾದರು.
ಬಂಜಾರ ಜನಾಂಗದ ಸೇವೆಯಲ್ಲಿ ತನ್ನ ಜೀವಿತಾವಧಿ ಕಳೆದ ಶ್ರೀ ಸೇವಾಲಾಲ್ ಮಹಾರಾಜರ ಜನ್ಮ ದಿನ ಫೆಬ್ರವರಿ 15 ರಂದು ಜಗತ್ತಿನಾದ್ಯಂತ ಜನ್ಮ ಸ್ಥಳ ದಾವಣಗೆರೆಯ ಸುರಗೊಂಡಕೊಪ್ಪಕ್ಕೆ ಬಂಜಾರರು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಮಾಲೆ ಧರಿಸುವ ರೀತಿಯಲ್ಲಿ ಶಿಸ್ತು ಬದ್ಧವಾಗಿ ಶ್ರೀಸೇವಾಲಾಲ್ ಸ್ವಾಮಿ ಮಾಲೆ ಧರಿಸಿ ಪಾದಯಾತ್ರೆ ಮೂಲಕ ಸದ್ಗುರುಗಳ ದರ್ಶನ ಪಡೆದು ಕೃಪೆಗೆ ಪಾತ್ರರಾಗುತ್ತಾರೆ.

ಲೇಖನ : ಎಸ್. ಮಹದೇಶನಾಯ್ಕ
ವಕೀಲರು, ಕನಕಪುರ. ಮೊ : 9739883488